ಎಲ್ಲರ ಪ್ರೀತಿ ಗಳಿಸಿದ್ದ ವಾರ್ತಾಧಿಕಾರಿ –ಡಿ.ಮಂಜುನಾಥ್

ತುಮಕೂರು : ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ದಿ|| ಡಿ. ಮಂಜುನಾಥ್ ಅವರಿಗೆ ಯಾರೂ ದ್ವೇಷಿಗಳಿರಲಿಲ್ಲ. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹರಿಕಥಾ ವಿದ್ವಾನ್ ಡಾ|| ಲಕ್ಷ್ಮಣದಾಸ್ ಅವರು ಸ್ಮರಿಸಿದರು.

ಡಿ. ಮಂಜುನಾಥ್ ಅವರು ನಿಧನರಾಗಿ ಒಂದು ವರುಷ ಕಳೆದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಪತ್ರಿಕಾ ಭವನದಲ್ಲಿ ಮೇ9ರ ಸೋಮವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಂಜುನಾಥ್ ಅವರು ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು. ಅವರು ಭೌತಿಕವಾಗಿ ಕಣ್ಮರೆಯಾಗಿದ್ದರೂ ಸದಾ ನಮ್ಮ ಮನದಲ್ಲಿರುತ್ತಾರೆ. ಎಲ್ಲರೊಂದಿಗೂ ಆತ್ಮೀಯವಾಗಿರುತ್ತಿದ್ದರು. ಕೊರೋನಾ ಮಹಾಮಾರಿ ಬಂದು ಬೆಳೆಯಬೇಕಾದವರನ್ನೆಲ್ಲಾ ಕಳೆದುಕೊಂಡಿದ್ದೇವೆ. ಇದು ಮಂಜುನಾಥ್ ಕುಟುಂಬಕ್ಕೆ ಮಾತ್ರವಲ್ಲ. ನಮಗೆಲ್ಲರಿಗೂ ಬೇಸರ ತರಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ ಬದುಕು ಯಾರಿಗೂ ಶಾಶ್ವತವಲ್ಲ. ಸತ್ತ ಮೇಲೂ ನಮ್ಮ ಹೆಸರು ಚಿರಾಯುವಾಗಬೇಕಾದರೆ ಬದುಕಿದ್ದ ಕಾಲದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು. ಮಂಜುನಾಥ್ ಅವರು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಪತ್ರಿಕಾ ಭವನದ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಲು ಶ್ರಮಿಸಿದ ಅವರನ್ನು ನಾವೆಂದಿಗೂ ಮರೆಯುವಂತಿಲ್ಲ ಎಂದು ಸ್ಮರಿಸಿದರಲ್ಲದೆ ಮಂಜುನಾಥ್ ಜೊತೆ ಜಿಲ್ಲೆಯ 6 ಪತ್ರಕರ್ತರು ಅಕಾಲಿಕವಾಗಿ ಮೃತಪಟ್ಟಿರುವುದು ಬಹಳ ನೋವನ್ನು ತಂದಿದೆ. ಅವರಿಲ್ಲರಿಗೂ ಸ್ಮರಣೆ ಮಾಡಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಮಂಜುನಾಥ್ ಮಿತ ಭಾಷಿಯಾಗಿ, ಎಲೆ ಮರೆ ಕಾಯಿಯಾಗಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಈ ನಡೆ, ನುಡಿಯ ಕಾರಣದಿಂದಲೇ ಮಂಜುನಾಥ್ ಚಿರಾಯುವಾಗಿದ್ದಾರೆ ಎಂದರು. ಮಂಜುನಾಥ್ ಸಾರ್ವಜನಿಕರು, ಸರ್ಕಾರ, ಮಾಧ್ಯಮಮಿತ್ರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅಂತಹವರನ್ನು ಕೊರೋನಾ ಮಹಾಮಾರಿ ಬಲಿ ತೆಗೆದುಕೊಂಡಿರುವುದು ನಿಜಕ್ಕೂ ದು;ಖ ತಂದಿದೆ ಎಂದು ನೋವು ವ್ಯಕ್ತಪಡಿಸಿದರು.

ಸ್ವರ ಸಿಂಚನ ಸುಗಮ ಸಂಗೀತ ಬಳಗದ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಮುಗ್ದ ಸ್ವಭಾವದ ಮಂಜುನಾಥ್ ಅವರು ಬೀದಿ ನಾಟಕ ಕಲಾವಿದರನ್ನಲ್ಲದೆ ವಿವಿಧ ಕ್ಷೇತ್ರದ ಎಲ್ಲಾ ಕಲಾವಿದರಿಗೂ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು. ಯಾವುದೆ ಜಾತಿ, ಧರ್ಮ ಎನ್ನದೇ ಎಲ್ಲಾ ಕಲಾವಿದರಿಗೂ ಪ್ರೀತಿ, ಗೌರವ ತೋರುತ್ತಿದ್ದರು ಎಂದರು.
ವಾರ್ತಾ ಇಲಾಖೆ ಸಿಬ್ಬಂದಿ ರೂಪಕಲಾ ಮಾತನಾಡಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಭೌತಿಕವಾಗಿ ಅವರು ನಮ್ಮಿಂದ ದೂರವಾಗಿದ್ದರೂ ಅವರ ಉತ್ತಮ ಕೆಲಸಗಳು ನೆನಪಿನಲ್ಲುಳಿವಂತೆ ಮಾಡಿವೆ. ಸುಮಾರು 5 ವರ್ಷಗಳ ಕಾಲ ಅವರೊಂದಿಗೆ ಸೇವೆ ಸಲ್ಲಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೇಲ್ವಿಚಾರಕ ಸುರೇಶ್ ಮಾತನಾಡಿ ಮಂಜುನಾಥ್ ಅವರು ಸರ್ಕಾರದ ನಿಯಮಗಳ ಇತಿ-ಮಿತಿಗಳ ನಡುವೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. ಪತ್ರಕರ್ತರ ಜೊತೆಯೂ ಆತ್ಮೀಯವಾಗಿದ್ದರು. ಅತ್ಯುತ್ತಮ ಕೆಲಸ ಮಾಡುತ್ತಿದ್ದ್ದವರು ತುಂಬಾ ಸರಳ ಜೀವಿಯಾಗಿದ್ದರು. ಅವರನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ನೋವುಂಟು ತಂದಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ದಿ|| ಮಂಜುನಾಥ್ ಅವರ ಧರ್ಮಪತ್ನಿ ಸವಿತಾ ಅವರನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ಮಂಜುನಾಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಪತ್ರಕರ್ತರಾದ ಜಗನ್ನಾಥ್, ಶಂಕರ್, ಜಯಣ್ಣ, ರವಿ, ರಘುರಾಮ್, ವೆಂಕಟಾಚಲ.ಹೆಚ್.ವಿ.,ಪರಮೇಶ್, ಕಲಾವಿದ ಚೆಲುವರಾಜು ಮಾತನಾಡಿದರು. ಸ್ವಾಂದೇನಳ್ಳಿ ರಂಗಸೊಗಡು ಕಲಾ ಟ್ರಸ್ಟ್ ಸಿದ್ದರಾಜು ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕಲಾವಿದರು, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *