ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಿ – ಶಾಸಕ ಸುರೇಶ್‍ಗೌಡ ಸೂಚನೆ

ತುಮಕೂರು: ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯಲು ಎಲ್ಲಾ ಶಾಲೆಗಳ ಶಿಕ್ಷಕರು ಶಿಸ್ತಿನಿಂದ ಅಗತ್ಯ ಚಟುವಟಿಕೆಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಯಾವ ಮಗುವೂ ಅಭ್ಯಾಸದಲ್ಲಿ ಹಿಂದುಳಿಯದಂತೆ ಎಚ್ಚರವಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡರು ತಾಲ್ಲೂಕಿನ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಗುರುವಾರ ಸಿದ್ಧಗಂಗಾ ಮಠದ ಉದ್ಧಾನೇಶ್ವರ ಸಭಾಂಗಣದಲ್ಲಿ ನಡೆದ ತುಮಕೂರು ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿರ ಪ್ರೌಢಶಾಲೆಗಳ ಮುಖ್ಯೋಪಧ್ಯಾಯರ ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯೋಪಧ್ಯಾಯರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಫಲಿತಾಂಶ ಉತ್ತಮಪಡಿಸಲು ಇಲಾಖೆ ಸೂಚಿಸಿರುವ ಎಲ್ಲಾ ಚಟುವಟಿಕೆಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಬಗ್ಗೆಯೂ ಗಮನಹರಿಸಬೇಕು. ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದರೆ ಅಂತಹವರಿಗೆ ವಿಶೇಷ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳು ಯೋಗ, ಧ್ಯಾನ ಮಾಡಲು ಸಲಹೆ ಮಾಡಬೇಕು. ಯೋಗ, ಧ್ಯಾನದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಎಲ್ಲಾ ಶಾಲೆಗಳೂ ಕಡ್ಡಾಯವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ ನಡೆಸಬೇಕು. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಬಗ್ಗೆ ಪೋಷಕರ ಗಮನಕ್ಕೆ ತಂದು ಮಕ್ಕಳಲ್ಲಿ ಅಧ್ಯಯನ ಆಸಕ್ತಿ ಬೆಳೆಸಲು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶಿಕ್ಷಕರು ತಿಳಿಸಬೇಕು. ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಉತ್ತಮಪಡಿಸಿ, ಯಾವ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಫೇಲ್ ಆಗದಂತೆ ಹಾಗೂ ಎಲ್ಲರೂ ಉತ್ತಮ ಅಂಕ ಪಡೆಯುವಂತೆ ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಸುರೇಶ್‍ಗೌಡರು ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಆದ್ಯತೆ ಆಗಿರುವ ಕಾರಣ ಸರ್ಕಾರವೂ ವಿಶೇಷ ಕಾಳಜಿವಹಿಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿದೆ. ಎಲ್ಲವನ್ನೂ ಆಚರಣೆಗೆ ತಂದು ವಿದ್ಯಾರ್ಥಿಗಳ ಜ್ಞಾನ, ಅಧ್ಯಯನಶೀಲತೆ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ, ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎ.ಟಿ. ರಂಗದಾಸಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ. ಸಿದ್ಧಲಿಂಗಸ್ವಾಮಿ, ತುಮಕೂರು ತಾಲ್ಲೂಕು ಸಂಘದ ಅಧ್ಯಕ್ಷ ಕೆ.ಎಲ್.ಜಗದೀಶ್ ಅವರೊಂದಿಗೆ ತಾಲ್ಲೂಕಿನ ವಿವಿಧ ಪ್ರೌಢಶಾಲೆ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *