ತುಮಕೂರು : ನಗರದ ವಿನಾಯಕ ನಗರದಲ್ಲಿರುವ ಶ್ರೀ ಸಿದ್ದಿವಿನಾಯಕ ಸಮುದಾಯಭವನದಲ್ಲಿ ಸ್ಥಾಪಿಸಿರುವ ವಿಘ್ನೇಶ್ವರನ ಸನ್ನಿದಾನದಲ್ಲಿ ಹಾಲಪ್ಪ ಪ್ರತಿಷ್ಠಾನ ಮತ್ತು ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ ಬಡ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳ ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಸಿದ್ದಿವಿನಾಯಕ ಸಮುದಾಯಭವನದಲ್ಲಿ ಪ್ರತಿಷ್ಠಾಪಿಸುವ ಗಣೇಶ ನಗರದ ಎಲ್ಲರಿಗೂ ಚಿರ ಪರಿಚಿತ. ಕಳೆದ ೪೮ ವರ್ಷಗಳಿಂದ ಇಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ, ಒಂದು ತಿಂಗಳ ಕಾಲ ಪೂಜೆ ಸಲ್ಲಿಸಿ, ಭಕ್ತರಿಗೆ ಗಣೇಶನ ಕುರಿತ ವಿವಿಧ ಪೌರಾಣಿಕ ಕಥೆಗಳನ್ನು ಒಳಗೊಂಡ ಸ್ತಬ್ದ ಚಿತ್ರಗಳ ದೃಶ್ಯ ಕಾವ್ಯವನ್ನು ಸೃಷ್ಟಿಸುವ ಮೂಲಕ, ಮನರಂಜನೆಯ ಜೊತೆಗೆ, ದೇಶದ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ ಎಂದರು. ಸಿದ್ದಿವಿನಾಯಕ ಸೇವಾ ಸಮಿತಿಯಿಂದ ಇಂದು ೧೮ ಜನ ಬಡ ಗರ್ಭೀಣಿಯರಿಗೆ ಮಡಿಲು ತುಂಬುವ ಶಾಸ್ತ್ರ ಮಾಡಿ, ಬಸುರಿ ಬಯಕೆಯನ್ನು ತೀರಿಸುವ ಒಂದು ಉತ್ತಮ ಕಾರ್ಯ ಮಾಡಿದ್ದಾರೆ. ನಮ್ಮ ಸಂಪ್ರದಾಯ, ಪರಂಪರೆಯನ್ನು ಬಿಂಬಿಸುವ ಕೆಲಸವಾಗಿದೆ. ಇದಕ್ಕಾಗಿ ಶ್ರೀಸಿದ್ದಿವಿನಾಯಕ ಸೇವಾ ಸಮಿತಿಯ ಎಲ್ಲರನ್ನೂ ಅಭಿನಂದಿಸುವುದಾಗಿ ಮುರಳೀಧರ ಹಾಲಪ್ಪ ನುಡಿದರು.
ಶ್ರೀಮತಿ ಕಲ್ಪನಾ ಮುರಳೀಧರ ಮಾತನಾಡಿ, ಇದೊಂದು ತುಂಬಾ ಖುಷಿಯ ವಿಷಯ. ತಾಯ್ತನ ಎಂಬುದು ಹೆಣ್ಣಿನ ಬಾಳಿನಲ್ಲಿ ಅತಿ ಮುಖ್ಯವಾದ ಘಟ್ಟ. ನಿಮ್ಮ ಸಂತೋಷ ಮುಂದೆ ನಿಮಗುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಸಾಧ್ಯವಾದಷ್ಟು ಶಾಂತಿ ಮತ್ತು ನೆಮ್ಮದಿಯ ಕಡೆಗೆ ಒತ್ತು ನೀಡಿ, ಚೆನ್ನಾಗಿ ನಿದ್ದೆ ಮಾಡಿ, ಹೊತ್ತು ಹೊತ್ತಿಗೆ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಪೂಜಾ ಸಮಿತಿ ಅಧ್ಯಕ್ಷ ವಿರೂಪಾಕ್ಷ, ಜಂಟಿ ಕಾರ್ಯದರ್ಶಿ ಶ್ರೀನಾಥ್, ಖಜಾಂಚಿ ನಟರಾಜು, ನಿರ್ದೇಶಕರಾದ ಅನುಸೂಯಮ್ಮ, ರೇಣುಕಾ ಪರಮೇಶ್ ಮತ್ತು ನಿರ್ದೇಶಕರುಗಳು, ಕೃಷ್ಣ ಕಾಲೇಜಿನ ಕಾರ್ಯದರ್ಶಿ ಮರಿಚೆನ್ನಮ್ಮ ಹಾಗೂ ಹಲವರು ಉಪಸ್ಥಿತರಿದ್ದರು.