ತುಮಕೂರು- ಗುಬ್ಬಿ ತಾಲ್ಲೂಕಿನ ದಲಿತ ಯುವಕರ ಜೋಡಿ ಕೊಲೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತುಮಕೂರು ಚಲೋ ಕಾಲ್ನಡಿಗೆ ಜಾಥಾ ನಡೆಸಿತು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ಕೊಲೆಯಾಗಿರುವ ಯುವಕರ ಕುಟುಂಬಗಳಿಗೆ ರಕ್ಷಣೆ ನೀಡಿ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಗುಬ್ಬಿ ಮಂಜೇಶ್, ಕೊಲೆಯಾಗಿರುವ ಯುವಕರ ಕುಟುಂಬಗಳು ಕಣ್ಣೀರಲ್ಲಿ ಮುಳುಗಿವೆ. ಯಾರೂ ಸಹ ಬಂದು ಸಹಾಯ ಮಾಡುತ್ತಿಲ್ಲ. ಬದಲಾಗಿ ಆ ಕುಟುಂಬಗಳಿಗೆ ಬಹಿಷ್ಕಾರ, ದೂಷಣೆ ಮಾಡುವ ಕೆಲಸ ನಡೆಯುತ್ತಿದೆ. ಈ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೋ ಬಂಧಿಸಿರುವುದು ಮುಖ್ಯವಲ್ಲ. ಈ ಕೊಲೆಗೆ ಮುಖ್ಯ ಕಾರಣವಾಗಿರುವ ಹಿನ್ನೆಲೆಯನ್ನು ಪತ್ತೆ ಹಚ್ಚಬೇಕು. ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಕೊಲೆಗೀಡಾಗಿರುವ ದಲಿತ ಯುವಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಈ ಯುವಕರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಚಿತ್ರ ಹಿಂಸೆ ನೀಡಿ ಅಮಾನುಷವಾಗಿ ಕೊಲೆಗೈದ ಸವರ್ಣೀಯರ ನಂದೀಶ ಮತ್ತು ಅವರ ಸಹಚರರಿಗೆ ಜೀವಾವಧಿ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಕೊಲೆಯಾಗಿರುವ ಇಬ್ಬರು ಯುವಕರ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ಈ ಕುಟುಂಬಗಳಿಗೆ ಸರ್ಕಾರದ ವತಿಯಿಂದಲೇ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರಗತಿಪರ ಚಿಂತಕ ಕೆ. ದೊರೈರಾಜ್ ಮಾತನಾಡಿ, ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಅಮಾಯಕ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿವೆ. ಈ ಹೋರಾಟ ಸರ್ಕಾರ ಮತ್ತು ಪೆÇಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಡುವುದಾಗಿದೆ ಎಂದರು.
ಎರಡು ಅಮಾಯಕ ಜೀವಗಳ ಹತ್ಯೆಯಾಗಿದೆ. ಇದನ್ನು ನೋಡಿದರೆ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ, ಸರ್ಕಾರ ಇದೆಯೇ, ಪೆÇಲೀಸ್ ಇಲಾಖೆ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ ಎಂದರು.
ಗುಂಪು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಕಾಲ್ನಡಿಗೆ ಜಾಥಾದಲ್ಲಿ ಕೊಲೆಗೀಡಾಗಿರುವ ಯುವಕನ ತಾಯಿ ನರಸಮ್ಮ, ಶ್ರೀಧರ್, ಗುಬ್ಬಿ ಮಂಜೇಶ್, ರವಿಕುಮಾರ್ ಕಲ್ಲೂರು, ನಿಟ್ಟೂರು ರಂಗಸ್ವಾಮಿ, ಸೂಲಿಕುಂಟೆ ರಮೇಶ್, ಶಿವನಂಜಯ್ಯ, ಮಂಜುನಾಥ್, ಸ್ವಾಮಿ ತೊಗರಿಘಟ್ಟ, ಸ್ಲಂ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ, ವಾಲೆಚಂದ್ರು, ಕೊಟ್ಟ ಶಂಕರ್, ಕೇಬಲ್ ರಘು, ಪಾಂಡುರಂಗಯ್ಯ, ಬಂಡೆ ಕುಮಾರ್, ಸುಬ್ರಹ್ಮಣ್ಯ, ನಟರಾಜು, ಉಮೇಶ್, ನರಸಿಂಹಯ್ಯ, ಹೆಗ್ಗೆರೆ ಕೃಷ್ಣಪ್ಪ, ಮರಳೂರು ಕೃಷ್ಣಮೂರ್ತಿ, ಗಾಂಧಿರಾಜ್, ಲಕ್ಷ್ಮೀಕಾಂತ್, ದೊರೈರಾಜ್, ಸಿ.ಕೆ. ತಿಪ್ಪೇಸ್ವಾಮಿ, ಪೆದ್ದಣ್ಣ, ಶಿವಶಂಕರ್, ದೊಡ್ಡೇರಿ ಕಣಿಮಯ್ಯ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.