ಈಗ್ಗೆ 40 ವರ್ಷಗಳ ಹಿಂದಕ್ಕೆ ಒಮ್ಮೆ ಬನ್ನಿ, ನಮ್ಮ ಹಳ್ಳಿಗಳು ಹೇಗಿದ್ದವು, ಓದುವ ಹಳ್ಳಿ ಹುಡುಗರ ಸ್ಥಿತಿ ಹೇಗಿತ್ತು ಎಂಬುದನ್ನು ನೋಡಿದರೆ, ಹಳ್ಳಿ ಹುಡುಗರು ಓದಿ ಮುಂದೆ ಬರ ಬಲ್ಲರೆ ಎಂಬಷ್ಟು ಬಡತನ, ಬರಗಾಲ, ಕೈಯಲ್ಲಿ ಕಾಸಿಲ್ಲದ ದಿನಗಳು.
ಇಂತಹ ದಿನಗಳಲ್ಲೂ ಹಳ್ಳಿಯ ಹುಡುಗರು ಒಳ್ಳೆಯ ಹುಡುಗರಾಗಿ ಶಾಲೆಗೆ ತಪ್ಪದೆ ಬಂದು ಅಕ್ಷರ ಕಲಿತು ಇಂದು ನಾನಾ ಹುದ್ದೆಗಳನ್ನು ನಿಭಾಯಿಸುತ್ತಿರುವವರೆ ಈ ಹಳ್ಳಿ ಹುಡುಗರು.
ಇಂತಹ ಹಳ್ಳಿಗಳಿಂದ ಬಂದ ಹುಡುಗರೆ ಇಂದು ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವವರು
ಈ ರೀತಿಯ ಹಳ್ಳಿ ಹುಡುಗ, ಸಂಕೋಚದ ಹುಡುಗನೊಬ್ಬ ವೈದ್ಯನಾಗಿದ್ದೆ ಒಂದು ಸಾಹಸದ ಕತೆ, ಆತ ಶಾಲೆಗೆ ಬರುತ್ತಿದದ್ದೇ ಐದಾರು ಕಿ.ಮೀ. ದೂರದಿಂದ ಪುಸ್ತಕಗಳನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ದೂರದ ಶಾಲೆಗೆ ನಡೆದು ಬರುತ್ತಿದ್ದರೆ, ಆತನಿಗೆ ಪುಸ್ತಕ ಇಟ್ಟುಕೊಳ್ಳಲು ಕೈ ಚೀಲ ತೆಗೆದುಕೊಳ್ಳುವಷ್ಟು ಹಣವಿಲ್ಲದ ಬಡತನ ಅವರ ಮನೆಯಲ್ಲಿತ್ತು ಎಂಬುದನ್ನು ಹೇಳಬಹುದಿತ್ತು.
ಆತ ಬರುತ್ತಿದದ್ದೇ ಹಳ್ಳಿಯಿಂದ, ಆ ಹಳ್ಳಿಯೋ ಒಂದು ತರಹ ಬೆಂಗಾಡು ಇದ್ದಂತಹ ಹಳ್ಳಿ, ಆತ ಬೆಳಿಗ್ಗೆ ಅವರಮ್ಮ ಏನು ಮಾಡಿದ್ದರೋ-ಬಿಟ್ಟಿದ್ದರೋ ಬಿಸಿಲಿನಲ್ಲಿ ಬಂದ ಆತ ಶಾಲೆಯ ಎದುರಿಗಿದ್ದ ನಲ್ಲಿಯ ಬಾಯಿಗೆ ತನ್ನ ಬಾಯಿಟ್ಟು ನೀರು ಕುಡಿದು, ಬೆವರು ಹರಿಯುತ್ತಿದ್ದ ತನ್ನ ಮುಖವನ್ನು ತೊಳೆದುಕೊಂಡು ಅಬ್ಬಾ ಎಂದು ನಿಟ್ಟುಸಿರು ಬಿಡುತ್ತಿದ್ದ, ಒಮ್ಮೊಮ್ಮೆ ನೀರು ಕುಡಿಯುವುದಕ್ಕೂ ಶಾಲೆಯ ಬೆಲ್ಲು ಹೊಡೆಯುವುದಕ್ಕೂ ಒಂದೆಯಾದ್ದರಿಂದ ಮುಖಕ್ಕೆ ನೀರು ಚಿಮಿಕಿಸಿಕೊಂಡು ಪ್ರಾರ್ಥನೆಗೆ ಓಡಿ ಬಂದು ನಿಂತು ಬಿಡುತ್ತಿದ್ದ.
ಆತನ ಮುಖ ಬಾಡಿರುತಿತ್ತೋ-ಅಥವಾ ಅವನೇ ಬಳಲಿರುತ್ತಿದ್ದನೋ ಪ್ರಾರ್ಥನೆ ಮುಗಿಯುವುದರೊಳಗೆ ಆತ ತನ್ನ ಮುಂದೆ ಇಟ್ಟಿರುತ್ತಿದ್ದ ಶಾಲೆಯ ಪುಸ್ತಕಗಳನ್ನು ಹೆಗಲ ಮೇಲೆ ಇಟ್ಟುಕೊಂಡು ತರಗತಿಗೆ ಬಂದು ಕುಳಿತು ಬಿಡುತ್ತಿದ್ದ. ಆತನಿಗೆ ಚೆನ್ನಾಗಿ ಓದಬೇಕು ಎಂಬ ಹಂಬಲವೊಂದೆ ಆಗಿತ್ತು.
ಆತನೇ ಇಂದು ಕಿವಿ-ಮೂಗು-ಗಂಟಲು ವೈದ್ಯನಾಗಿ ಅರಸೀಕೆರೆಯ ಜಯಚಾಮರಾಜೇಂದ್ರ ಒಡೆಯರ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿ.ಜಿ.ಕರಿಯಪ್ಪ.
ಈ ಸಿ.ಜಿ.ಕರಿಯಪ್ಪನ ಊರು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಪಂಚನಹಳ್ಳಿ ಹೋಬಳಿಯ ನಾಲ್ಕು ಜಿಲ್ಲೆಗಳಿಗೆ ಕೊನೆ ಗಡಿ ಭಾಗವಾಗಿದ್ದ ಚೌಡಿಪಾಳ್ಯ, ಪಂಚನಹಳ್ಳಿಯಿಂದ ಸುಮಾರು ನಾಲ್ಕು ಕಿ.ಮೀಗಳಷ್ಟು ದೂರ.
ಈ ಊರಿನಿಂದ ಆತ ಪಂಚನಹಳ್ಳಿಗೆ ಐದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದೆ ಬಂದಂತಹವನು, ಇವರ ತಂದೆ ಗವಿಯಪ್ಪ ವ್ಯವಸಾಯಗಾರರು, ಆಗಿನ ಕಾಲಕ್ಕೆ ರಾಗಿ ಬಿಟ್ಟರೆ, ಮುಂಗಾರಿನಲ್ಲಿ ಹೆಸರು, ಉದ್ದು ಮನೆಗಷ್ಟೆ ಬೆಳೆದುಕೊಳ್ಳುತ್ತಿದ್ದರು, ಈ ಪ್ರದೇಶದಲ್ಲಿ ಮಳೆ ಬಂದರೆ ಬೆಳೆ ಇಲ್ಲದಿದ್ದರೆ ಅದೂ ಇಲ್ಲ, ಎರಡು ಎತ್ತು, ಒಂದೆರಡು ಹಸುಗಳನ್ನು ಸಾಕುವುದೇ ದುಸ್ತರವಾದ ಕಾಲದಲ್ಲಿ ತನ್ನ ನಾಲ್ವರು ಮಕ್ಕಳನ್ನು ಓದಿಸಲು ಆ ತಂದೆ ಹಗಲಿರುಳು ದುಡಿಯುತ್ತಿದ್ದು, ಇವರ ತಂದೆಗೆ ಕರಿಯಪ್ಪನ ತಾಯಿ ಜಯಮ್ಮ ಹೆಗಲಿಗೆ ಹೆಗಲು ಕೊಡುತ್ತಿದ್ದರು.
ಕರಿಯಪ್ಪನಿಗೆ ಅದೇಕೆ ವೈದ್ಯರಾಗಬೇಕು ಅನ್ನಿಸಿತೋ ಗೊತ್ತಿಲ್ಲ, ಯಾವ ಶಿಕ್ಷಕರು ಕೇಳಿದರು ನಾನು ಡಾಕ್ಟರ್ ಆಗುತ್ತೇನೆ ಎಂದು ಹೇಳುತ್ತಿದ್ದು, ನಾವೆಲ್ಲ ಹಾಸ್ಟಲ್‍ನಲ್ಲಿ ಇದ್ದು ಶಾಲೆಗೆ ಬಂದರೆ ಈತ ಮಾತ್ರ ಹಾಸ್ಟಲ್‍ಗೆ ಸೇರದೆ ತನ್ನ ಊರು ಚೌಡಿಪಾಳ್ಯದಿಂದಲೇ ಓಡಾಡುತ್ತಿದ್ದ, ನಾನು ಈತನಿಗೆ ಅಷ್ಟು ದೂರದಿಂದ ಯಾಕೆ ಬರುತ್ತೀಯ ಹಾಸ್ಟಲ್ ಸೇರಿಕೋ ಅಂದರೂ ಸೇರಲಿಲ್ಲ, ಒಮ್ಮೆ ಈತನನ್ನು ಹುಡುಕಿಕೊಂಡು ಅವರ ಊರಿಗೆ ಹೋದಾಗ, ಕರಿಯಪ್ಪ ತನ್ನ ತಂದೆಯ ಜೊತೆಗೆ ಹೊಲದಲ್ಲಿ ಕುಂಟೆ ಹೊಡೆಯುತ್ತಿದ್ದ, ನನ್ನನ್ನು ಕಂಡ ಕರಿಯಪ್ಪ ಸಂಕೋಚ ಮತ್ತು ನಾಚಿಕೆಯಿಂದ ಕುಂಟೆ ಹೊಡೆಯುವುದನ್ನು ನಿಲ್ಲಿಸಿ ಹತ್ತಿರ ಬಂದು ಕೂಲಿಯವರನ್ನು ಕರೆದುಕೊಂಡು ಬಂದು ಕುಂಟೆ ಹೊಡೆಸಲು ನಮಗೆ ಸಾಧ್ಯವಿಲ್ಲ, ಆದ್ದರಿಂದ ಅಪ್ಪನ ಹೊಲದ ಕೆಲಸದಲ್ಲಿ ನಾನು ಭಾಗಿಯಾಗಿ, ನೆರವಾಗುತ್ತೇನೆ, ಇದರಿಂದಲೇ ನಾನು ಹಾಸ್ಟಲ್ ಸೇರಲಿಲ್ಲ ಎಂದು ಹೇಳಿದ.
ಅವರ ತಂದೆಯು ಹತ್ತಿರ ಬಂದು ನೀನು ನನ್ನ ಮಗ ಒಂದೇ ಕ್ಲಾಸೇನಪ್ಪ, ನನ್ನ ಮಗ ಚೆಂದಾಕಿ ಓದ್ತಾನ ಎಂದು ಕೇಳಿದರು, ನಾನು ಹೌದು ಎಂಬಂತೆ ತಲೆಯಾಡಿಸಿದೆ.
ಸಿ.ಜಿ.ಕರಿಯಪ್ಪ ಹತ್ತನೇ ತರಗತಿ ಮುಗಿದ ನಂತರ ನನ್ನ ಜೊತೆಯೇ ಪಿ.ಯು.ಸಿ. ಓದಲು ತುಮಕೂರಿಗೆ ಬಂದನು, ಆತ ನಾನು ತುಮಕೂರಿನ ಎಸ್.ಐ.ಟಿ. ಬಡಾವಣೆಯ 9ನೇ ಕ್ರಾಸ್‍ನಲ್ಲಿ ರೂಂ ಮಾಡಿಕೊಂಡಿದ್ದೆವು, ನನಗೆ ಹಾಸ್ಟಲ್ ಸೌಲಭ್ಯವಿದ್ದರೆ, ಆತನಿಗೆ ಇರಲಿಲ್ಲ, ಆತನೇ ರೂಂನಲ್ಲಿ ಅಡಿಗೆ ಮಾಡಿಕೊಳ್ಳುತ್ತಿದ್ದ, ಆಗಿನ ಕಾಲಕ್ಕೆ ಸೀಮೆ ಎಣ್ಣೆ ಸ್ಟೌವ್‍ನಲ್ಲಿ ಅಡಿಗೆ ಮಾಡಿಕೊಳ್ಳಬೇಕಾಗಿತ್ತು, ಸೀಮೆ ಎಣ್ಣೆಗಾಗಿಯೇ ಎಷ್ಟೋ ದಿನ ಡಬ್ಬ ಹಿಡಿದು ಕಾಯಬೇಕಿತ್ತು. ಆತನಿಗೆ ಪ್ರಾಕ್ಟಿಕಲ್ ಇದ್ದರೆ ನಾನೇ ಸೀಮೆ ಎಣ್ಣೆ ತರಲು ಡಬ್ಬ ಹಿಡಿದು ಹೋಗುತ್ತಿದ್ದೆ. ಸಾಧ್ಯವಾದಾಗ ಹಾಸ್ಟಲ್‍ನಿಂದ ಕೆಲವೊಮ್ಮೆ ಕರಿಯಪ್ಪನಿಗೆ ಊಟ ತಂದು ಕೊಡುತ್ತಿದ್ದೆ.
ಪಿ.ಯು.ಸಿ.ಯನ್ನು ಒಂದೇ ಕಾಲೇಜಿನಲ್ಲಿ ಓದಿದೆವು, ಈತ ವೈದ್ಯನಾಗಬೇಕೆಂಬುದಕ್ಕೆ ಓದಿಗೆ ಶ್ರಮ ಹಾಕುತ್ತಿದ್ದರೆ, ನಾನು ಇತರ ಗೆಳೆಯರ ಜೊತೆಗೆ ಸೇರಿ ಅಂದಿಗೆ ‘ಸಮತಾ ವಿದ್ಯಾರ್ಥಿ ಒಕ್ಕೂಟ’ ಕಟ್ಟಿ ಹೋರಾಟಗಳಲ್ಲಿ ಭಾಗವಹಿಸುವುದಲ್ಲದೆ, ಸುದ್ದಿ ಪತ್ರಿಕೆಗಳನ್ನು ಹಂಚುವುದು, ಸುದ್ದಿ ಬರೆಯುವುದನ್ನು ಮಾಡುತ್ತಿದ್ದೆವು.
ಕರಿಯಪ್ಪನಿಗೆ ದ್ವಿತೀಯ ಪಿ.ಯು.ಸಿ.ಯಲ್ಲಿ ಎಂ.ಬಿ.ಬಿ.ಎಸ್.ಗೆ ಹೋಗುವಷ್ಟು ಅಂಕ ಬಂದಿರಲಿಲ್ಲ, ಆಗ ಭೌತಶಾಸ್ತ್ರದ ಪರೀಕ್ಷೆಯನ್ನು ಮತ್ತೊಮ್ಮೆ ತೆಗೆದುಕೊಂಡು ಬಿಟ್ಟ. ಆ ವೇಳೆಗೆ ನಾವು ಚಿಕ್ಕದೊಂದು ಮನೆಯನ್ನು ಮಾಡಿದ್ದೆವು, 3 ತಿಂಗಳ ಕಾಲ ನಮ್ಮ ಮನೆಯಲ್ಲಿಯೆ ಇದ್ದು ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಎಂ.ಬಿ.ಬಿ.ಎಸ್.ಗೆ ಸೇರಿಕೊಂಡು ವೈದ್ಯನಾದನು.
ಸರ್ಕಾರಿ ವೈದ್ಯನಾಗಿರುವ ಡಾ.ಸಿ.ಜಿ.ಕರಿಯಪ್ಪ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮತ್ತು ಇ.ಎನ್.ಟಿ. ಸ್ನಾತಕೋತ್ತರ ಪದವಿಯನ್ನು ಬಳ್ಳಾರಿಯ ವಿಮ್ಸ್‍ನಲ್ಲಿ ಪಡೆದಿದ್ದಾರೆ.
ಇ.ಎನ್.ಟಿ ತಜ್ಞ ವೈದ್ಯನಾಗಿ ಅರಸೀಕೆರಯ ಜಯಚಾಮರಾಜೇಂದ್ರ ಒಡೆಯರ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ಇಂದಿಗೂ ಕೂಡ ಕೆಲ ಸಂದರ್ಭದಲ್ಲಿ ಸಂಕೋಚದಿಂದಲೆ ನಡೆದುಕೊಳ್ಳುವ ಡಾ.ಸಿ.ಜಿ.ಕರಿಯಪ್ಪ ಸದಾ ಹಳ್ಳಿಯಿಂದ ಬರುವ ಜನಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾನೆ.
ಇವರ ಅಣ್ಣ ಸಿ.ಜಿ.ಸೋಮಶೇಖರ್ ಅವರು ಕೇಂದ್ರ ಸರ್ಕಾರದ ಬೆಂಗಳೂರಿನ ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ಅಭಿಯಂತರರಾಗಿದ್ದಾರೆ. ಇವರ ತಮ್ಮ ಸಿ.ಜಿ.ವಿರೂಪಾಕ್ಷಪ್ಪ ಸಾಪ್ಟ್‍ವೇರ್ ಇಂಜಿನಿಯರ್ ಮತ್ತು ಕೊನೆಯ ತಮ್ಮ ಸಿ.ಜಿ.ಲೋಕೇಶ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗ ಇವರ ಕುಟುಂಬದ ಸದಸ್ಯರೆಲ್ಲ ಉತ್ತಮ ಶಿಕ್ಷಣ ಪಡೆದು ಉದ್ಯೋಗದಲ್ಲಿದ್ದಾರೆ. ಒಂದು ಬಡ ಕುಟುಂಬವೊಂದು ಈ ಮಟ್ಟಕ್ಕೆ ಬರಲು ತಂದೆ ಗವಿಯಪ್ಪ ಮತ್ತು ತಾಯಿ ಜಯಮ್ಮರವರ ಹೊಲದಲ್ಲಿ ಸುರಿಸಿದ ಬೆವರಿನ ಹನಿಗಳೇ ಕಾರಣವಾಗಿವೆ.
ಅಪ್ಪ-ಅಮ್ಮ ಏನನ್ನು ಬಯಸುತ್ತಾರೆ, ನಾವು ಪಟ್ಟಪಾಡನ್ನು ನಮ್ಮ ಮಕ್ಕಳು ಪಡ ಬಾರದು ಎಂಬ ಅವರ ಹೃದಯದ ಆಸೆ, ಆ ಆಸೆಯನ್ನು ಡಾ.ಸಿ.ಜಿ.ಕರಿಯಪ್ಪ ಮತ್ತು ಸಹೋದರರು ಪೂರೈಸಿದ್ದಾರೆ.
Article By. Venkatachala.