ಡೆಂಗ್ಯೂ ನಿಯಂತ್ರಣಕ್ಕೆ ಮನೆ-ಮನೆ ಅರಿವು ಮೂಡಿಸಲು ಸೂಚನೆ

ತುಮಕೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಡೆಂಗ್ಯೂ ರೋಗ ನಿಯಂತ್ರಣದ ಬಗ್ಗೆ ಮನೆ-ಮನೆಗೂ ಭೇಟಿ ನೀಡಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಡಿ.ಎನ್. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

ಬೆಂಗಳೂರಿನ ವಿಕಾಸಸೌಧದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ನಂತರ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಸ್ವ-ಸಹಾಯ ಗುಂಪು, ಸ್ವಯಂ ಸೇವಾ ಸಂಘಗಳನ್ನು ತೊಡಗಿಸಿಕೊಂಡು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಡೆಂಗ್ಯೂ ರೋಗ ಲಕ್ಷಣ ಹಾಗೂ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ನಿರ್ದೇಶನ ನೀಡಿದರು.

ಡೆಂಗ್ಯೂ ರೋಗದ ಪ್ರಕರಣಗಳ ಸಂಖ್ಯೆ ಆಗಸ್ಟ್-ಸೆಪ್ಟೆಂಬರ್ ಮಾಹೆಯಲ್ಲಿ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಶಾಲೆಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಜನವಸತಿ ಪ್ರದೇಶಗಳಲ್ಲಿ ವಾರಕ್ಕೆರಡು ಬಾರಿ ಕಡ್ಡಾಯವಾಗಿ ಫಾಗಿಂಗ್ ಮಾಡಬೇಕು ಹಾಗೂ ಪ್ರತಿ ಶುಕ್ರವಾರ ಲಾರ್ವಾ ಸಮೀಕ್ಷೆ ನಡೆಸಬೇಕು. ಡೆಂಗ್ಯೂ ದೃಢಪಟ್ಟ ಪ್ರಕರಣಗಳಲ್ಲಿ ಯಾವುದೇ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದು ಸೂಚಿಸಿದರು. 

ಮನೆ-ಮನೆ ಭೇಟಿ ಸಂದರ್ಭದಲ್ಲಿ ಜ್ವರದ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಡೆಂಗೀ ಜ್ವರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿ ರಕ್ತಪರೀಕ್ಷೆಗೆ ರೋಗಿಗಳಿಂದ ಸರ್ಕಾರ ನಿಗಧಿಪಡಿಸಿರುವ ದರವನ್ನಷ್ಟೇ ಪಡೆಯಬೇಕು ಎಂದು ಸೂಚನೆ ನೀಡಿದರು. 

ಜ್ವರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಬರುವ ರೋಗಿಗಳನ್ನು ಕಡ್ಡಾಯವಾಗಿ ಸಿಬಿಸಿ(ಅomಠಿಟeಣe ಃಟooಜ ಅouಟಿಣ)  ಪರೀಕ್ಷೆಗೊಳಪಡಿಸಬೇಕೆಂದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಡೆಂಗ್ಯೂ ದೃಢಪಟ್ಟು ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಬಗ್ಗೆ  ಮಾಹಿತಿ ಪಡೆದರು. 

ಪಾಲಿಕೆ ವ್ಯಾಪ್ತಿಯಲ್ಲಿ 52 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿರುವುದರಿಂದ ಎಲ್ಲಾ ವಾರ್ಡ್‍ಗಳಲ್ಲಿ ಪ್ರತಿ ದಿನ ಫಾಗಿಂಗ್ ಮಾಡಬೇಕು. ಚರಂಡಿಗಳಲ್ಲಿ ನೀರು ನಿಲ್ಲದಂತೆ ನೈರ್ಮಲ್ಯತೆ ಕಾಪಾಡಬೇಕೆಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ: ವೀರೇಶ್ ಕಲ್ಮಟ್ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಡಿ.ಎನ್. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ರೋಗದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಡೆಂಗ್ಯೂ ರೋಗ ದೃಢಪಟ್ಟು ಜಿಲ್ಲಾಸ್ಪತ್ರೆಯಲ್ಲಿ 3 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 3082 ಶಂಕಿತ ಡೆಂಗ್ಯೂ ರೋಗಿಗಳ ಪೈಕಿ 1542 ರೋಗಿಗಳಿಂದ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, 170 ರೋಗಿಗಳಲ್ಲಿ ಡೆಂಗ್ಯೂ ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ: ಚಂದ್ರಶೇಖರ್ ಮಾತನಾಡಿ, ಮಹಾನಗರಪಾಲಿಕೆ/ ಪಟ್ಟಣ ಪಂಚಾಯತಿ/ ಪುರಸಭೆ ಸಹಯೋಗದಲ್ಲಿ ಪ್ರತಿ 1ನೇ ಹಾಗೂ 3ನೇ ಶುಕ್ರವಾರಗಳಂದು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಲಾರ್ವಾ ಸಮೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಡೆಂಗ್ಯೂ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರಲ್ಲದೆ, ಡೆಂಗ್ಯೂ ರೋಗವು ಸೊಳ್ಳೆಗಳಿಂದ ಹರಡುವುದರಿಂದ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನೀರಿನ ಸಂಗ್ರಹವನ್ನು ಭದ್ರವಾಗಿ ಮುಚ್ಚಿಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.  ಜನವಸತಿ ಪ್ರದೇಶಗಳ ಸುತ್ತ-ಮುತ್ತ ಇರುವ ಕೆರೆ-ಕಟ್ಟೆ, ಕಲ್ಯಾಣಿ, ಬಾವಿ, ಕೃಷಿಹೊಂಡ ಮತ್ತಿತರ ಜಲಸಂಗ್ರಹಾಗಾರಗಳಿಗೆ ಲಾರ್ವಾಹಾರಿ ಮೀನಿನ ಮರಿಗಳನ್ನು ಬಿಟ್ಟು ಅಭಿವೃದ್ಧಿಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು. 

Leave a Reply

Your email address will not be published. Required fields are marked *