ಪರಿಶ್ರಮ,ಸಮರ್ಪಣೆ ಇದ್ದಲ್ಲಿ ಐಎಎಸ್ ಉತ್ತೀರ್ಣ ಸುಲಭ

ತುಮಕೂರು: ಉತ್ಸಾಹ, ಸಮರ್ಪಣೆ, ಕಠಿಣ ಪರಿಶ್ರಮ. ಮತ್ತು ದೃಢ ಮನೋಭಾವವಿದ್ದವರು ಐಎಎಸ್ ಹಾಗೂ ಇತರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಎಂದು ಭಾರತೀಯ ಅರಣ್ಯ ಸೇವೆಯ ೬೬ ರ‍್ಯಾಂಕ್ ವಿಜೇತ ಅಭ್ಯರ್ಥಿ ಶಶಿಕುಮಾರ್ ಎಸ್. ಎಲ್. ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶ ಮತ್ತು ಡಿ. ದೇವರಾಜ ಅರಸು ಅಧ್ಯಯನ ಪೀಠವು ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಐಎಎಸ್ ಹಾಗೂ ಇತರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ‘ಐಎಎಸ್ ಸಂವಾದ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಮನೆಯವರ ಬಲವಂತಕ್ಕಾಗಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗಬಾರದು. ಶಿಸ್ತಿನಿಂದ ಶಾಶ್ವತವಾಗಿ ಅಧ್ಯಯನ ಮಾಡಿ, ಬದುಕಿನ ಮಾರ್ಗವನ್ನು ರೂಪಿಸಿಕೊಳ್ಳುವಂಥ, ಕಷ್ಟದ ಪರಿಸ್ಥಿತಿ ಬಂದರೂ ಬಿಟ್ಟುಕೊಡದ ಮನೋಭಾವವನ್ನು ಹೊಂದಿರುವ ಮನಸ್ಥಿತಿಯವರು ಪರೀಕ್ಷೆಗಳನ್ನು ಎದುರಿಸಬಹುದು ಎಂದು ತಿಳಿಸಿದರು.

ನಿಖರವಾಗಿ ಮತ್ತು ಪ್ರಾಮಾಣಿಕವಾಗಿ ಅಧ್ಯಯನ ನಡೆಸಿದಾಗ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ತಯಾರಿ ಸಮಯದಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ನಿಭಾಯಿಸಲು ವಿಶಾಲ ದೃಷ್ಟಿಕೋನವನ್ನು ರೂಪಿಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಒಂದು ಹಂತದ ಅಂತರ ಗೆಲುವು ಮತ್ತು ಸೋಲಿನ ನಡುವಿದೆ. ಆಯ್ಕೆ ವಿದ್ಯಾರ್ಥಿಗಳ ಮನೋಭಲದ್ದಾಗಿದೆ. ವಿದ್ಯಾರ್ಥಿಗಳು ಜಾತಿ, ಧರ್ಮಗಳ ಸುಳಿಯಲ್ಲಿ ಸಿಲುಕಿ ಸೀಮಿತವಾಗಬಾರದು. ಸತತ ಪರಿಶ್ರಮದಿಂದ ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ವಿವಿಯ ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕ ಪ್ರೊ. ಪರಶುರಾಮ ಕೆ. ಜಿ., ಡಿ. ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕ ಡಾ. ಗುಂಡೇಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *