ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಇನ್ನಿಲ್ಲ

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಪೀಲೆ ಗುರುವಾರ ತಮ್ಮ 82ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಈ ಸುದ್ದಿಯನ್ನು ಅವರ ಪುತ್ರಿ ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.

ಮೂರು ಬಾರಿ ವಿಶ್ವಕಪ್ ವಿಜೇತ ಪೀಲೆ ಕ್ಯಾನ್ಸರ್ ಜೊತೆಗೆ ಮೂತ್ರಪಿಂಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು. 2021ರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಪೀಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಅದಾದ ಬಳಿಕ ನಿರಂತರವಾಗಿ ಚಿಕಿತ್ಸೆಗ ಪಡೆದುಕೊಳ್ಳುತ್ತಿದ್ದರು. ಇನ್ನು ಇತ್ತೀಚೆಗೆ ಅವರಿಗೆ ಕೋವಿಡ್ ಸೋಂಕು ಕೂಡ ತಗುಲಿತ್ತು. ಹೀಗಾಗಿ ಆರೋಗ್ಯ ಕ್ಷೀಣಿಸುತ್ತಲೇ ಸಾಗಿತ್ತು. ಕ್ಯಾನ್ಸರ್‌ಗೆ ಪಡೆಯುತ್ತಿದ್ದ ಕಿಮೋ ಥೆರಪಿ ಚಿಕಿತ್ಸೆಗೆ ಪೀಲೆ ದೇಹ ಸ್ಪಂದಿಸುವುದು ನಿಲ್ಲಿಸಿದ ಬಳಿಕ ವಿಧಿವಶವಾಗಿದ್ದಾರೆ.

ಪೀಲೆ ತಮ್ಮ 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಮೂರು ವಿಶ್ವಕಪ್ ಗೆದ್ದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ಫುಟ್ಬಾಲ್ ಇತಿಹಾಸದ ಶ್ರೇಷ್ಠ ಫಾರ್ವರ್ಡ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಬ್ರೆಜಿಲಿನ್ನ ದಿಗ್ಗಜ 92 ಪಂದ್ಯಗಳಲ್ಲಿ 77 ಗೋಲುಗಳನ್ನು ಗಳಿಸಿ ತಮ್ಮ ತಂಡದ ಪರವಾಘಿ ಅತೀ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ನಿವೃತ್ತಿ ಹೊಂದಿದ್ದರು. ಈ ದಾಖಲೆಯನ್ನು ಇತ್ತೀಚೆಗಷ್ಟೇ ನೇಮರ್ ಸರಿಗಟ್ಟಿದ್ದಾರೆ.

ಪೀಲೆ ತಮ್ಮ ವೃತ್ತಿ ಜೀವನದ ಬಹುಪಾಲು ಅವಧಿಯನ್ನು ಬ್ರೆಜಿಲಿಯನ್ ಕ್ಲಬ್ ಸ್ಯಾಂಟೋಸ್ ಪರವಾಗಿ ಆಡಿದ್ದರು. 1956ರಿಂದ 1974ರ ವರೆಗೆ ಈ ಕ್ಲಬ್ ತಂಡದ ಪರವಾಗಿ ಆಡಿದ್ದ ಪೀಲೆ 659 ಪಂದ್ಯಗಳಲ್ಲಿ 643 ಗೋಲುಗಳನ್ನು ಗಳಿಸಿದ್ದರು. ಅವರ ಫುಟ್ಬಾಲ್ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನ್ಯೂಯಾರ್ಕ್ ಕಾಸ್ಮೊಸ್ ಕ್ಲಬ್ ಪರವಾಗಿ ಆಡಿದ್ದಾರೆ.

Leave a Reply

Your email address will not be published. Required fields are marked *