ಯಥಾ ಸರ್ಕಾರ – ತಥಾ ಅಧಿಕಾರ, ಇದರ ಫಲವೇ ದಲಿತರ ಹತ್ಯೆ, ಅತ್ಯಾಚಾರ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಖಂಡನೆ

ತುಮಕೂರು: ಗುಬ್ಬಿಯ ದ.ಸಂ.ಸ ಸಂಚಾಲಕರಾದ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿಯ ಬರ್ಬರ ಕೊಲೆ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಇದು ಇಡೀ ಸಮಾಜಕ್ಕೆ ಆಘಾತಕಾರಿ ಬೆಳವಣಿಗೆಯಾಗಿದೆ. ಹಾಡಹಗಲೇ ನಿರಾತಂಕವಾಗಿ ಕೊಲೆ ಮಾಡುವಷ್ಟು ಸಲುಗೆ ಮತ್ತು ಧೈರ್ಯ ಬರಬೇಕಾದರೆ ರಾಜ್ಯ ಸರ್ಕಾರವು ಸಂವಿಧಾನಕ್ಕೆ ವಿರೋಧವಾಗಿ ಕೇವಲ ಜಾತಿಬೇಧ – ಧರ್ಮ ವೈಷಮ್ಯದ ಅಮಲು ಏರಿಸಿಕೊಂಡು ಕಾನೂನು ಸುವ್ಯವಸ್ಥೆಯ ಬಗ್ಗೆ ಹಿಡಿತ ಸಾಧಿಸದೇ ಇರುವುದೇ ಇಂತಹ ಕೊಲೆಗಳಿಗೆ ಬಲವಾದ ಕಾರಣವಾಗಿದೆ. ಯಥಾ ಸರ್ಕಾರ – ತಥಾ ಅಧಿಕಾರ, ಇದರ ಫಲವೇ ದಲಿತರ ಹತ್ಯೆ – ಅತ್ಯಾಚಾರಗಳು ಹೆಚ್ಚುತ್ತಿವೆ ಎಂದು ಡಾ.ರಫೀಕ್ ಅಹ್ಮದ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ನಡೆದ ಇಬ್ಬರು ದಲಿತ ಯುವಕರ ಕೊಲೆಯಾಗಿ ರಕ್ತದ ಕಲೆ ಮಾಸುವ ಮುನ್ನವೇ ಮತ್ತೊಬ್ಬ ದಲಿತ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿರುವುದು ನಿಜಕ್ಕೂ ಶೋಚನೀಯವಾಗಿದೆ. ಪದೇ ಪದೇ ದಲಿತರನ್ನೇ ಗುರಿಯಾಗಿಸಿ ಹತ್ಯೆ ಮಾಡುತ್ತಿರುವುದರ ಹಿಂದೆ ಜಾತಿಬೇಧ ಎಂಬ ರಾಕ್ಷಸೀಯ ಮನಸ್ಥಿತಿಯುಳ್ಳ ಸಿದ್ದಾಂತ ಅಡಗಿದೆ ಎಂಬುದು ಈ ರಾಜ್ಯದ ಜನ ತಿಳಿದು ಎಚೆತ್ತುಕೊಳ್ಳಬೇಕಿದೆ. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ರೂಪಿಸಬೇಕು. ಈ ಕೊಲೆಯ ಪ್ರಕರಣವನ್ನು ಕೂಡಲೇ ಬೇಧಿಸಿ ಕೊಲೆ ಮಾಡಿರುವ ದುಷ್ಟರನ್ನ ಬಂಧಿಸಬೇಕು ಹಾಗೂ ಈ ಕೊಲೆಯ ಹಿಂದಿನ ದುರುದ್ದೇಶವನ್ನು ತಿಳಿಸುವವರೆಗೆ ಎಲ್ಲರೂ ಒಟ್ಟಾಗಿ ಉಗ್ರಹೋರಾಟ ಮಾಟುತ್ತೇವೆ ಎಂದು ಮಾಜಿ ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *