ಆತ ಶಾಲೆಯಲ್ಲಿ ಎಷ್ಟು ಬುದ್ದಿವಂತನೋ ಅಷ್ಟೇ ತರಲೆಯು ಹೌದು, ಆತನ ತರಲೆ ಹುಟ್ಟು ಗುಣವೋ ಅಥವಾ ಆತನಿಗೆ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿದ್ದ ಬಡತನವನ್ನು ಮರೆಮಾಚಲು ತರಲೆ ಮಾಡುತ್ತಿದ್ದನೋ ಅದು ಆತನಿಗೆ ಗೊತ್ತಿರುವಂತಹವುದು, ಒಟ್ಟಿನಲ್ಲಿ ಆತ ಸದಾ ನಾಯಕನಾಗಿರಬೇಕೆಂದುಕೊಂಡು ಒಂದಲ್ಲ ಒಂದು ಸುದ್ದಿಯಲ್ಲಿ ಆತನಿರಬೇಕಿತ್ತು.
ಇಷ್ಟೇ ಆಗಿದ್ದರೆ ಅಯ್ಯೋ ಹುಡುಗು ಮುಂಡೇದು ಅಂದುಕೊಂಡು ಬಿಡುತ್ತಿದ್ದರೇನೋ, ಇಡೀ ತರಗತಿಯಲ್ಲಿ ನಾನು ಚೆನ್ನಾಗಿ ಓದಬೇಕು ಎಂಬ ಒತ್ತಾಸೆಯಿಂದ ಆತ ಶಾಲೆಗೆ ಸೇರಿದ್ದನು, ಅದನ್ನು ಸಾಕಾರಗೊಳಿಸಿಕೊಳ್ಳಲು ಆತನಿಗೆ ಬಡತನವೆಂಬುದು ಆಲದ ಮರಕ್ಕೆ ಬಿಳಿಲು ಅಂಟಿಕೊಂಡಂತೆ ಅಂಟಿಕೊಂಡಿತ್ತು.
ಹೇಗೋ ನಾಲ್ಕನೇ ತರಗತಿಯವರಗೆ ಓದಿದ ಮೇಲೆ ಬಡತನವಿದ್ದುದರಿಂದ ಪಕ್ಕದ ಊರಿನಲ್ಲಿದ್ದ ಬಿಸಿಎಂ ಹಾಸ್ಟಲ್ಗೆ ಈತನನ್ನು ಇವರ ತಾಯಿ ಗಿರಿಯಮ್ಮ ತಂದು ಸೇರಿಸಿ ಹೋದರು. ಈತನ ಚುರುಕುತನ, ಮಾತನಾಡುವಿಕೆ ಮತ್ತು ಓದುವಿನಲ್ಲಿದ್ದ ಆಸಕ್ತಿಯನ್ನು ಕಂಡ ಹಾಸ್ಟಲ್ ವಾರ್ಡ್ನ್ (ಮ್ಯಾನೇಜರ್) ಈತನನ್ನು ದತ್ತು ಮಗನಂತೆ ಸ್ವೀಕರಿಸಿ ಬಿಟ್ಟರು, ಅಲ್ಲದೆ ಐದನೇ ತರಗತಿಯ ಹುಡುಗನನ್ನೇ ಹಾಸ್ಟಲ್ನ ಮ್ಯಾನಿಟರ್ ಆಗಿಯೂ ಮಾಡಿ ಬಿಟ್ಟರು.
ಈ ಮಾನಿಟ್ರ್ ಪಟ್ಟವೇ ಈತನ ಓದಿಗೆ ಒಂದು ರೀತಿಯಲ್ಲಿ ಅಡಿಗಲ್ಲಾಗಿ ಬಿಟ್ಟಿತು. ಹಾಸ್ಟಲ್ನ ಮ್ಯಾನೇಜರ್ ಆಗಿದ್ದ ಶಿವಪ್ಪ ಮುದಕಣ್ಣನವರ್ಈ ಹುಡುಗನ ಮೇಲೆ ಅಪಾರ ಪ್ರೀತಿಯ ಜೊತೆಗೆ ತಮ್ಮ ಮನೆಯಲ್ಲೇ ಇಟ್ಟುಕೊಂಡು ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿಯನ್ನು ಕೆಲ ದಿನ ಮಾಡಿದರು. ಈತ ಹಾಸ್ಟಲ್ ಮತ್ತು ಮ್ಯಾನೇಜರ್ ಮನೆಯಲ್ಲಿ ಎರಡೂ ಕಡೆ ತುಂಬಾ ಪ್ರಾಮಾಣಿಕನಾಗಿ ನಡೆದುಕೊಳ್ಳುವುದರ ಜೊತೆಗೆ ಓದಿನಲ್ಲಿ ತುಂಬಾ ಆಸಕ್ತಿಯನ್ನು ತೊಡಗಿಸಿಕೊಂಡಿದ್ದರಿಂದ ಇವನ ಬಡತನ ಕಂಡಿದ್ದ ಶಾಲಾ ಶಿಕ್ಷಕರಾಗಿದ್ದ ಹೆಚ್.ಕೆಂಚಮಾರಯ್ಯನವರು ಈತನ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಂದರ್ಭ ಬಂದಾಗಲೆಲ್ಲಾ ಚೆನ್ನಾಗಿ ಓದುವಂತೆ ಮತ್ತು ಓದಿಗೆ ಬೇಕಾದ ಗುಣ-ಲಕ್ಷಣಗಳನ್ನು ಬೆಳಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು.
ಇಂತಹ ವಿದ್ಯಾರ್ಥಿಯೇ ಎನ್.ಎಸ್.ರಮೇಶ ಅಥವಾ ಕುಳ್ಳ ರಮೇಶ, ಈತನದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು ಪಂಚನಹಳ್ಳಿ ಹೋಬಳಿಯ ನಿಡುವಳ್ಳಿ, ಆಗಿನ ಕಾಲಕ್ಕೆ ಪಂಚನಹಳ್ಳಿ ಅಂದರೆ ಇಡೀ ಕಡೂರು ತಾಲ್ಲೂಕಿನಲ್ಲಿ ಶೈಕ್ಷಣಿಕ ವಲಯಕ್ಕೆ ತುಂಬಾ ಹೆಸರು ಪಡೆದಂತಹ ಊರಾಗಿತ್ತು, ಈ ಊರಿನಲ್ಲಿ ಆಗಿನ ಕಾಲಕ್ಕೆ ಪಿ.ಯು.ಸಿ. ತನಕ ಕಾಲೇಜು, ವಿದ್ಯಾನಿಲಯಗಳು, ಕೆ.ಇ.ಬಿ., ಪೊಲೀಸ್ ಠಾಣೆ ಹಾಗೂ ದೊಡ್ಡ ಎ.ಪಿ.ಎಂ.ಸಿ.ಯಾರ್ಡ್ ಇತ್ತು. ಸುತ್ತಮುತ್ತಲ 30 ಹಳ್ಳಿಗಳಿಗೆ ಈ ಪಂಚನಹಳ್ಳಿಯು ವ್ಯಾಪಾರ, ವಿದ್ಯಬ್ಯಾಸಕ್ಕೆ ಹೆಸರು ಪಡೆದಿತ್ತು.
ಅದರಲ್ಲೂ ಪಂಚನಹಳ್ಳಿಯ ಪ್ರಾಥಮಿಕ ಶಾಲೆ ಎಂದರೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಹೆಸರು ಪಡೆದಿತ್ತು ಏಕೆಂದರೆ ಆಗಿನ ಕಾಲಕ್ಕೆ ಈ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರು, ರಂಗಭೂಮಿ ಚಟುವಟಿಕೆಯ ಶಿಕ್ಷಕರು, ಕ್ರಾಪ್ಟ್ ಟೀಚರ್ ಸೇರಿದಂತೆ ಎಲ್ಲಾ ತರಹದ ಶಿಕ್ಷಕರಿದ್ದರು.
ವೃಷಭಚಾರ್ಯರು, ಕೆಂಚಮಾರಯ್ಯ, ಪಣಿಯಚಾರ್ಯರು, ರೇವಣ್ಣಪ್ಪ, ಮರುಳಸಿದ್ದಪ್ಪ, ರುದ್ರಪ್ಪ, ಓಂಕಾರಪ್ಪ, ಮಹೇಶ್ವರಪ್ಪ, ನಲ್ಲಯ್ಯ, ಬಸವರಾಜಪ್ಪ ಎಂಬ ಶಿಕ್ಷಕರುಗಳು ಒಬ್ಬರಿಗಿಂತ ಒಬ್ಬರು ನಮ್ಮ ಶಾಲೆಯ ಮಕ್ಕಳು ಇಡೀ ಜಿಲ್ಲೆಗೆ ಹೆಸರು ತರುವಂತೆ ಓದಬೇಕೆಂಬ ಒತ್ತಾಸೆಯಿಂದ ಮಕ್ಕಳಿಗೆ ಕಲಿಸುತ್ತಿದ್ದರು.
ನಲ್ಲಯ್ಯ ಮೇಷ್ಟರು ಹಾರಮೋನಿಯಂ ಮೇಷ್ಟರು ಹಾಗೂ ರಂಗಭೂಮಿ ಚಟುವಟಿಕೆಯ ಕಲಾವಿದರು ಆಗಿದ್ದರಿಂದ ಶಾಲಾ ಮಕ್ಕಳಿಗೆ ನಾಟಕವನ್ನು ಕಲಿಸುತ್ತಿದ್ದರು. ಲವ-ಕುಶ ನಾಟಕದಲ್ಲಿ ರವಿ.ಎಂ ಲವನ ಪಾತ್ರದಾರಿ, ಪಿ.ಎಲ್.ಚಂದ್ರಶೇಖರ್ ಕುಶನ ಪಾತ್ರದಾರಿಯಾದರೆ, ರಮೇಶನು ಅಂಗದ ಪಾತ್ರ ಮಾಡಿದ್ದನು. ಈ ನಾಟಕವು ಇಡೀ ಚಿಕ್ಕಮಗಳೂರು ಜಿಲ್ಲೆಗೆ ಮಕ್ಕಳು ಇಂತಹ ನಾಟಕ ಮಾಡಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು.
ಇಂತಹ ಶಾಲೆಯ ವಿದ್ಯಾರ್ಥಿಯಾಗಿದ್ದ ಎನ್.ಎಸ್.ರಮೇಶ್ ಶಿಕ್ಷಕರುಗಳ ನೆಚ್ಚಿನ ಶಿಷ್ಯನೂ ಆಗಿದ್ದರ ಜೊತೆಗೆ ಹಾಸ್ಟಲ್ ಮ್ಯಾನೇಜರ್ ಮುದುಕಣ್ಣನವರ ನೆಚ್ಚಿನ-ಮೆಚ್ಚಿನ ಶಿಷ್ಯನೂ ಆಗಿದ್ದನು. ಈತನ ತರಲೆಯಿಂದ ರೋಸಿ ಹೋದ ಮುದಕಣ್ಣನವರು ಅವರ ಮನೆಯ ಕೊಠಡಿಯಲ್ಲಿ ಕೂಡು ಹಾಕಿ ಹೊಡೆದು ಬುದ್ದಿ ಕಲಿಯುವಂತೆ, ತರಲೆ ಮಾಡದಂತೆ ಹೇಳಿದರೂ ಆ ಹುಟ್ಟು ತರಲೆಯನ್ನು ಬಿಡದೆ ಮುದುಕಣ್ಣವರಿಗೆ ಹಲವಾರು ಸಲ ತಲೆ ನೋವಾದರೂ, ಮುದುಕಣ್ಣನವರು ಈತನನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಿದದ್ದಲ್ಲದೆ ಮ್ಯಾನಿಟರ್ನ್ನು ಮಾಡಿದ್ದರಿಂದ ಐದನೇ ತರಗತಿ ಹುಡುಗನನ್ನು ಮ್ಯಾನಿಟರ್ ಮಾಡಿದ್ದಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳ ಕಣ್ಣು ಕೆಂಪಗಾಗಿದ್ದು ಉಂಟು, ಆದರೆ ಮ್ಯಾನೇಜರ್ ಪಟ್ಟ ಶಿಷ್ಯನಾದ್ದರಿಂದ ರಮೇಶನ ಮ್ಯಾನಿಟರ್ತನವನ್ನು ಎಲ್ಲರೂ ಒಪ್ಪಿ ತಲೆ ಭಾಗಬೇಕಾಗಿತ್ತು.
ಒಂದು ಓದಿಕೊಳ್ಳಲು ಇದ್ದ ಹಾಸ್ಟಲ್ (ಬಾಡಿಗೆಯದು) ಮತ್ತೊಂದು ಊಟದ ವ್ಯವಸ್ಥೆಯಿದ್ದ ಹಾಸ್ಟಲ್ (ಸರ್ಕಾರದ್ದು) ಓದಿಕೊಳ್ಳುವ ಹಾಸ್ಟಲ್ನಿಂದ ಊಟದ ವ್ಯವಸ್ಥೆಯಿದ್ದ ಹಾಸಟಲ್ವರೆಗೆ 50ರಿಂದ 60 ಹಾಸ್ಟಲ್ ವಿದ್ಯಾರ್ಥಿಗಳು ಊಟದ ತಟ್ಟೆ, ಲೋಟ, ನೀರಿನ ಕ್ಯಾನ್ ಹಿಡಿದುಕೊಂಡು ಚುಕುಬುಕು ರೈಲಿನಂತೆ ಮೊದಲು ಸಣ್ಣವನಿಂದ ಏರಿಕೆ ಕ್ರಮದಲ್ಲಿ ಸಾಲು ಮಾಡಿಕೊಂಡು ಹೋಗಬೇಕಿತ್ತು, ಆ ಸಾಲನ್ನು ಈ ಐದನೇ ತರಗತಿಯ ಕುಳ್ಳ ರಮೇಶ್ ಯಾವ ರೀತಿ ಕಂಟ್ರೋಲ್ ಮಾಡುತ್ತಿದ್ದ ಎಂದರೆ ಪೆನ್ ಒಂದು ಹಾಳೆಯನ್ನು ತನ್ನ ಕೈಯಲ್ಲಿ ಹಿಡುದುಕೊಂಡು ಹುಡುಗರ ಸಾಲು ಸಾಗುತ್ತಿರುವಾಗ ಹಿಂದೆ-ಮುಂದೆ ಯಾರು ಅಶಿಸ್ತಿನಿಂದ ವರ್ತಿಸಿದರು, ಲೈನ್ ಬಿಟ್ಟರು ಎಂಬುದನ್ನು ಕರಾರು ವಕ್ಕಾಗಿ ಹೆಸರು ಬರೆದು ಮ್ಯಾನೇಜರ್ ಮುದುಕಣ್ಣನವರಿಗೆ ಕೊಡುತ್ತಿದ್ದ, ಮುದುಕಣ್ಣನವರು ರೂಲ್ ದೊಣ್ಣೆಯಲ್ಲಿ ಬಾರಿಸಿದರೆ ಮೂರು ದಿನ ಮರೆಯ ಬಾರದು ಹಾಗೆ ಬಾರಿಸುತ್ತಿದ್ದರು.
ಊಟದ ನಂತರ ರಾತ್ರಿ ಹತ್ತು ಗಂಟೆಯ ತನಕ ಓದಿಸುವ ಜವಾಬ್ದಾರಿಯು ರಮೇಶನದೇ ಆಗಿತ್ತು.
ಇಂತಹ ರಮೇಶನಿಗೆ 6ನೇ ತರಗತಿಯಲ್ಲಿ ಓದುತ್ತಿರುವಾಗ ದೊಡ್ಡ ಅಘಾತವೊಂದು ಬಂದೆರೆಗಿತು, ರಮೇಶನ ತಂದೆ ಸಿದ್ದರಾಮಪ್ಪ ಹಟಾತ್ತಾಗಿ ನಿಧನ ಹೊಂದಿದ ಸುದ್ದಿ ಬಂದೆರಗಿತು.ಇವರ ತಂದೆ ಸಿದ್ದರಾಮಪ್ಪ ಹೊಸದುರ್ಗ ತಾಲ್ಲೂಕು ಬೆಲಗೂರು ಹೋಬಳಿಯ ಸಿಂಗೇನಹಳ್ಳಿಯಲ್ಲಿ ಸಾಹುಕಾರರೊಬ್ಬರ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದರು, ಸಿಂಗೇನಹಳ್ಳಿಯಲ್ಲಿಯೇ ಇವರ ತಂದೆ ನಿಧನ ಹೊಂದಿದ್ದರು. ಈ ವಿಷಯವನ್ನು ತರಗತಿಯಲ್ಲಿದ್ದ ರಮೇಶನಿಗೆ ಹೇಗೆ ತಿಳಿಸುವುದು ಎಂದು ನಾನು ಆತನ ಜೊತೆ ಎಲ್ಲಾ ಕಾಲದಲ್ಲೂ ಇರುತ್ತಿದುದ್ದರಿಂದ ನನ್ನನ್ನು ಕರೆದ ಮ್ಯಾನೇಜರ್ ಮುದುಕಣ್ಣನವರು ಮತ್ತು ಶಿಕ್ಷಕರಾದ ಕೆಂಚಮಾರಯ್ಯನವರು ರಮೇಶನನ್ನು ಕರೆದು ನಿಮ್ಮ ತಂದೆಗೆ ಉಷಾರಿಲ್ಲ ಎಂದು ಕರೆದುಕೊಂಡು ಸಿಂಗೇನಹಳ್ಳಿಗೆ ಬರಲು ಹೇಳಿದರು.ಇಬ್ಬರೂ ಮತ್ತು ಮ್ಯಾನೇಜರ್ ಮುದುಕಣ್ಣನವರು ಮತ್ತು ಕೆಂಚಮಾರಯ್ಯ ಮೇಷ್ಟರು ರಮೇಶನ ಮನೆಗೆ ಹೋದಾಗ, ರಮೇಶನ ತಂದೆ ಇದ್ದ ಊರಿಗೆ ಹೋದಾಗ ತಾಯಿ ಬಿಕ್ಕಳಿಸಿ ಅಳುತ್ತಿದ್ದರು. ಅಲ್ಲಿಗೆ ಹೋದಾಗಲೇ ರಮೇಶನ ತಂದೆ ಸಾವನ್ನಪ್ಪಿರುವುದು ತಿಳಿದದ್ದು.
ಮಣ್ಣು ಮಾಡಲು ಸಹ ಇವರ ತಾಯಿ ಬಳಿ ಹಣವಿರಲಿಲ್ಲ, ಬಡತನ ಎಂಬುದು ಹೇಗೆ ಮಾಡುತ್ತದೆ ಎಂದರೆ ಇವರ ತಂದೆ ಸಾವನ್ನಪ್ಪಿದ್ದರೂ ಊರಿನವರು ಯಾರು ಬಂದು ಚಟ್ಟ ಕಟ್ಟುವುದಾಗಲಿ, ಶವವನ್ನು ಸಾಗಿಸಲು ಸಹಾಯ ಮಾಡುವುದಾಗಲಿ ಮಾಡಲಿಲ್ಲ, ರಮೇಶನೇ ತಮ್ಮ ತಂದೆಯ ಶವವನ್ನು ಒಂದು ಗೋಣಿ ಚೀಲದಲ್ಲಿ ಸುತ್ತಿಕೊಂಡು ಶವ ಹೂಳಲು ಜಾಗವಿಲ್ಲದ ಕಾರಣ ಊರಿಗೆ ಹತ್ತಿರವಿದ್ದ ನೀರಿನ ಕಟ್ಟೆಯ ದಡದಲ್ಲೇ ರಮೇಶನ ತಂದೆಯ ಶವವನ್ನು ಹೂಳಲಾಯಿತು, ಅಂದಿನ ಸ್ಥಿತಿಯನ್ನು ನೆನಸಿಕೊಂಡರೆ ಇಂದಿಗೂ ಮನುಷ್ಯನು ಸಂಘ ಜೀವಿಯೇ ಅನ್ನಿಸುತ್ತದೆ. ಒಂದು ನಾಯಿ ಸಹ ತನ್ನ ಜೊತೆಯಿದ್ದ ನಾಯಿ ಸತ್ತರೆ ಹಲವಾರು ದಿನ ಹೂಳಿಟ್ಟುಕೊಂಡು ಅಳುತ್ತದೆ.
ಅಂದು ರಮೇಶನ ಮನಸ್ಸಲ್ಲಿ ಏನಿತ್ತೋ ಗೊತ್ತಿಲ್ಲ, ಆತನನ್ನು ಅವರ ಅಮ್ಮನ ಜೊತೆಯಲ್ಲೇ ಬಿಟ್ಟು ಹಾಸ್ಟಲ್ಗೆ ಬಂದೆ, ಮೂರು ದಿನಗಳ ನಂತರ ರಮೇಶ ಬಂದ ಆತನಿಗೆ ಯಾವ ರೀತಿ ಸಮಾಧಾನ ಮಾಡಲು ನನಗೆ ತೋಚಲಿಲ್ಲ, ಯಾಕೆಂದರೆ ನಾನು ಸಹ ಚಿಕ್ಕ ಹುಡುಗ ಒಂದಷ್ಟು ದಿನ ಮೌನವಾಗೇ ಇದ್ದ ರಮೇಶ.
ಇವರ ತಂದೆ ತೀರಿಕೊಂಡ ಮೇಲೆ ಮುದುಕಣ್ಣನವರೆ ಒಂದು ಹಂತದವರೆಗೆ ಆಶ್ರಯದಾತರಾಗಿದ್ದರು, ತಂದೆ ಹೋದ ಮೇಲೆ ನಾನು ರಮೇಶ 15 ದಿನಕ್ಕೊಮ್ಮೆಯಾದರೂ ಪಂಚನಹಳ್ಳಿಯಿಂದ ನಿಡುವಳ್ಳಿಗೆ ನಡೆದುಕೊಂಡು ಹೋಗಿ ಅವರಮ್ಮನನ್ನು ನೋಡಿಕೊಂಡು, ಅಮ್ಮ ಮಾಡಿಕೊಡುತ್ತಿದ್ದ ಬಿಸಿ ಮುದ್ದೆ ಊಟ ಮಾಡಿ ಹೊರಡಲು ಮುಂದಾದಾಗ ಅವರಮ್ಮ ಕೂಲಿ ಮಾಡಿ ಇಟ್ಟುಕೊಂಡಿದ್ದ ಒಂದು ರೂಪಾಯಿಯನ್ನೋ, ಎರಡು ರೂಪಾಯಿಯನ್ನೋ ರಮೇಶನ ಕೈಗೆ ಕೊಡುತ್ತಿದ್ದರು, ಹೊರಡುವಾಗ ಅವರಮ್ಮ ಕಣ್ಣೀರು ಹಾಕಿಕೊಂಡು ಚೆನ್ನಾಗಿ ಓದು ಕಂದ ಅನ್ನೋರು, ರಮೇಶನಿಗೆ ಏನನ್ನಿಸುತಿತ್ತೋ ನೀನು ಹೀಗೆಲ್ಲಾ ಅಳುವುದಾದರೆ ನೀನು ಕೊಟ್ಟಿರೋ ದುಡ್ಡು ತಗೋ, ನಾನು ಇನ್ನ ಮನೆಗೆ ಬರಲ್ಲ ಅಂತ ಹಿಂತಿರುಗುಸಲು ಹೋಗುತ್ತಿದ್ದ, ಆಗ ಅಮ್ಮ ಕಣ್ಣಿರು ಒರೆಸಿಕೊಂಡು ನಿನ್ನ ಬಿಟ್ಟರೆ ನನಗೆ ಇನ್ನಾರಪ್ಪ ಅನ್ನೋರು, ಅಲ್ಲಿಂದ ನಾನು, ರಮೇಶ ಪಂಚನಹಳ್ಳಿ ಹಾಸ್ಟಲ್ಗೆ ಬರುತ್ತಿದ್ದವೆ.
ನಾನು ರಮೇಶ ಹತ್ತನೇ ತರಗತಿ ಮುಗಿಯುವ ತನಕ ಜೊತೆಯಲ್ಲಿಯೇ ಇದ್ದೆವು, ರಮೇಶನ ತುಂಬಾ ಹತ್ತಿರದ ಗೆಳೆಯ ನಾನಾಗಿದ್ದರಿಂದ ರಮೇಶ ಮಾಡುತ್ತಿದ್ದ ತರಲೆ-ತಾಪತ್ರಿಗಳಿಗೆ ನನಗೂ ಹಸಿ ಕೋಲಿನ ಬಾಸುಂಡೆ ಏಟು ಬಿದ್ದು ಇಬ್ಬರೂ ಜೊತೆಯಲ್ಲಿಯೇ ಬಾಸುಂಡೆ ಬಂದ ಜಾಗಗಳನ್ನು ಕೈಯಲ್ಲಿ ಮುಟ್ಟಿಕೊಂಡು ಮತ್ತೆ ಜೊತೆಯಲ್ಲಿಯೇ ತರಲೆ-ಕೀಟಲೆ ಮಾಡುತ್ತಿದ್ದೆವು.
ಇಂತಹ ರಮೇಶ ಪಿ.ಯು.ಸಿ. ಮಟ್ಟಿಲೇರಿದ ಮೇಲೆ ಇತಿಹಾಸ ಉಪನ್ಯಾಸಕರಾಗಿ ಹೊಸದಾಗಿ ಆರೂವರೆ ಅಡಿ ಎತ್ತರದ ಕೆಂಪಗೆ ಇದ್ದ ಕೆಂಪೇಗೌಡ ಎಂಬುವರು ಮೊದಲನೇ ತರಗತಿಯಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೂ ನಿಮ್ಮಪ್ಪ ಏನು, ನಿಮ್ಮಪ್ಪ ಏನು ಎಂದು ಕೇಳಿದಾಗ ಯಾರಿಗೂ ನಮ್ಮಪ್ಪ ಏನು ಎಂದು ಹೇಳಲು ಸಾಧ್ಯವಾಗದೇ ಇದ್ದಾಗ, ರಮೇಶ ನಮ್ಮಪ್ಪ ಮನುಷ್ಯ, ನಿಮ್ಮಪ್ಪ ಏನು ಎಂದು ಕೇಳಿದಾಗ ಕೆಂಪೇಗೌಡರು ಉರಿದುಕೊಂಡು ಹೊಡೆಯಲು ಮುಂದಾದಾಗ ರಮೇಶ ಹೊಡೆಯಲು ನಿಮಗೆ ಹಕ್ಕಿಲ್ಲ, ನೀವು ಉಪನ್ಯಾಸಕರು ನಾವು ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿದಂತೆ ಕೇಳಿ, ನೀವು ಸಿಟಿಯಿಂದ ಬಂದು ನಿಮ್ಮಪ್ಪ ಏನು ಎಂದರೆ ಹಳ್ಳಿ ಮಕ್ಕಳು ಏನು ಅಂತ ಹೇಳುತ್ತಾರೆ ಎಂದು ದಿಟ್ಟವಾಗಿ ಉತ್ತರಿಸಿದ್ದಕ್ಕೆ ಇಡೀ ಕಾಲೇಜಿನ ವಿದ್ಯಾರ್ಥಿಗಳೇ ಈತನೇ ನಮ್ಮ ಲೀಡರ್ ಎಂದು ಕೇಕೆ ಹಾಕಿ ತರಗತಿಯಿಂದ ಒಮ್ಮಲೇ ಹೊರ ಬಂದು ಕೆಂಪೇಗೌಡರಿಗೆ ದಿಕ್ಕಾರ ಕೂರುವಂತೆ ಮಾಡಿದ್ದ ರಮೇಶ.
ಅರಸೀಕೆರೆಯ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿಯಲ್ಲಿ ಪಿ.ಸಿ.ಎಂ ವಿದ್ಯಾರ್ಥಿಯಾಗಿ ಪದವಿ ಪಡೆದ ನಂತರ ಜೀವನ ರೂಪಿಸಿಕೊಳ್ಳಲು ಹಲವಾರು ಕೆಲಸಗಳನ್ನು ಮಾಡಿದ ರಮೇಶ ಕೊನೆಗೆ ಬೆಂಗಳೂರು ಬಿಎಂಟಿಸಿ ಕಂಡಕ್ಟರ್ ಆಗಿ ಸೇವೆಗೆ ಸೇರಿ ತನ್ನ ಜೀವನದಲ್ಲಿ ಅನುಭವಿಸಿದ ಬಡತನವನ್ನು ಹಿಮ್ಮೆಟ್ಟಿಸಿ, ಬೆಂಗಳೂರಿನಲ್ಲೇ ಮನೆ ಕಟ್ಟಿಸಿಕೊಂಡು, ಅವರ ತಾಯಿ ಗಿರಿಯಮ್ಮನನ್ನು ಇಂದಿಗೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಮಗಳಾದ ಚಂದನ.ಆರ್. ಎಂ.ಬಿ.ಬಿ.ಎಸ್ (ವೈದ್ಯಕೀಯ ಶಿಕ್ಷಣ) ಓದಿಸುತ್ತಿದ್ದು, ಮಗ ತೇಜು.ಆರ್. ಇನ್ನೂ ಪ್ರೌಢಶಾಲೆಯಲ್ಲಿ ಓದುತ್ತಿದ್ದು ಇವರ ಪತ್ನಿ ಡಿ.ಸವಿತ ಇವರಿಗೆ ಬೆನ್ನೆಲುಬಾಗಿ ನಿಂತು ಆದರ್ಶ ಪತ್ನಿಯಾಗಿ ಮೆರೆದಿದ್ದಾರೆ.
ಈತನ ಗೆಳೆಯರಾದ ಕೆಂಚಮಾರಾಯ್ಯ ಮೇಷ್ಟರ ಮಗ ರವಿ.ಎಂ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಪಿ.ಎಲ್.ಚಂದ್ರಶೇಖರ್, ಐ.ಎ.ಎಸ್.ಆದಿಕಾರಿಯಾಗಿರುವ ರವೀಂದ್ರ ಪಿ.ಎನ್. ಡಾ.ಕರಿಯಪ್ಪ.ಸಿ.ಜಿ., ಬೆಂಗಳೂರು ಹೈಕೋರ್ಟ್ ವಕೀಲರಾದ ಹೆಚ್.ವಿ.ಮಂಜುನಾಥ, ಪಿ.ಹೆಚ್. ಲೋಹಿತಾಶ್ವ, ಬಡಗಿ ಸತೀಶ್, ಪಿ.ಎಸ್.ವಿವೇಕಾನಂದ ಮುಂತಾದವರು ಇವನ ಗೆಳೆಯರು, ಇಂದಿಗೂ ಅದೇ ಗೆಳೆತನ ತುಂಟತನವನ್ನು ಈ ಗೆಳೆಯರ ಜೊತೆಗೆ ರಮೇಶ ಉಳಿಸಿಕೊಂಡಿದ್ದಾನೆ.
ತನ್ನ ಬಡತನವನ್ನು ಅರ್ಥ ಮಾಡಿಕೊಂಡಿರುವ ರಮೇಶ್ ಇಂದಿಗೂ ಕೆಲ ಮಕ್ಕಳನ್ನು ಓದಿಸುತ್ತಿದ್ದಾನೆ. ಇದೆ ಆತನ ಹೃದಯವಂತಿಕೆ.
ಇಂತಹ ರಮೇಶ ಇಂದು ಬೆಂಗಳೂರಿನ ಬಿಎಂಟಿಸಿಯ ಟ್ರಾಪಿಕ್ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ರಮೇಶ ತನ್ನ ಬಡತನವನ್ನು, ತಾಯಿಯನ್ನು ಮರೆಯದಿರಲಿ ಎಂಬುದೇ ನನ್ನ ಹಾರೈಕೆ.
-ವೆಂಕಟಾಚಲ.ಹೆಚ್.ವಿ.