ಎಚ್.ವಿ.ಮಂಜುನಾಥ, ವಕೀಲರು, ಬೆಂಗಳೂರು.
ನಾನು ಹಳ್ಳಿಯಿಂದ ತುಮಕೂರಿಗೆ ಪಿಯುಸಿಗೆ ಬಂದಾಗ ಈ ಸಂಘಟನೆ, ಚಳುವಳಿ ಏನೊಂದು ಗೊತ್ತಿರಲಿಲ್ಲ. ತುಮಕೂರಿನ ಸಮತಾ ಬಳಗ ಸಡನ್ನಾಗಿ ಸಮತಾ ವಿದ್ಯಾರ್ಥಿ ಒಕ್ಕೂಟ ಅಂತ ಮಾಡಿ ಸಂಘಟನೆಯ ಚಟುವಟಿಕೆ ಶುರು ಮಾಡಿ ವೈ.ಕೆ. ಬಾಲಕೃಷ್ಣಪ್ಪನನ್ನು ರಾಜ್ಯ ಸಂಚಾಲಕನನ್ನಾಗಿ, ನನ್ನನ್ನು ಜಿಲ್ಲಾ ಸಂಚಾಲಕ ನನ್ನಾಗಿ ಮಾಡಲಾಯಿತು.
ಅಂದು ಅವರು ನನ್ನನ್ನು ಸೇರಿದಂತೆ ಮೂರ್ನಾಲ್ಕು ಹುಡುಗರನ್ನು ಕಟ್ಟಿಕೊಂಡು ತುಮಕೂರಿನ ಪ್ರತಿ ಕಾಲೇಜಿಗೂ ಭೇಟಿ ಕೊಟ್ಟು ನಮ್ಮ ಒಕ್ಕೂಟದ ಬಗ್ಗೆ ತಿಳಿಸಿ ಸಂಘಟನೆ ಕಟ್ಟಲು ಶ್ರಮ ವಹಿಸಿದ್ದರು. ಅಂದಿನಿಂದ ಇಂದಿನವರೆಗೂ ಅದೇ ರೀತಿಯ ಲವಲವಿಕೆ, ಚಟುವಟಿಕೆಯಿಂದಲೇ ಇದ್ದು ಸರ್ಕಾರಿ ಕೆಲಸದಲ್ಲಿದ್ದರೂ ಸಾಮಾಜಿಕ ಚಟುವಟಿಕೆಗಳಿಂದ ವಿಮುಖರಾದವರಲ್ಲ. ತೀರಾ ಇತ್ತೀಚೆಗೆ ನಿಜಗುಣಾನಂದ ಸ್ವಾಮೀಜಿಯವರನ್ನು ತುಮಕೂರಿಗೆ ಕರೆಯಿಸಿ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮ ಮಾಡಿದ ಪ್ರಮುಖರಲ್ಲೊಬ್ಬರು. ನಿರಂತರವಾಗಿ, ನಿರರ್ಗಳವಾಗಿ ಮಾತನಾಡುವುದಲ್ಲದೆ ಇದ್ದದ್ದನ್ನು ಇದ್ದ ಹಾಗೆ ಮುಖದ ಮೇಲೆ ಹೊಡೆದಂತೆ ಹೇಳುವ ರೀತಿಯಿಂದ ಗೆಳೆಯರ ನಡುವೆ ಏಕ ಕಾಲದಲ್ಲಿ ಪ್ರೀತಿಗೂ ಸಿಟ್ಟಿಗೂ ಒಳಗಾದ, ಒಳಗಾಗುತ್ತಲೇ ಇರುವ, ಆದರೆ ಅದೇ ಸ್ನೇಹಿತರ ಕಷ್ಟಕ್ಕೆ ಕರುಗುವ, ಮಿಡಿಯುವ ವಿಚಿತ್ರ ಮನುಷ್ಯ.
ಸರ್ಕಾರಿ ಕೆಲಸದಲ್ಲೂ ತನ್ನ ದಕ್ಷತೆಯ ಕಾರಣದಿಂದಲೇ ರೇಷ್ಮೆ ಕೃಷಿಕರ ಪ್ರೀತಿಯ ಅಧಿಕಾರಿಯೂ ಆಗಿರುವ ಇವರು ರೇಷ್ಮೆ ಕೃಷಿ ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದರೂ ತನ್ನ ಹೆಸರಿನ ಹಿಂದೆ ” ಡಾ” ಎಂದು ಸೇರಿಸಿಕೊಳ್ಳಲು ಮತ್ತು ಬರ್ತ್ ಡೇ ಆಚರಿಸಿಕೊಳ್ಳಲು ಮುಜುಗರಪಟ್ಟುಕೊಳ್ಳುವ ವ್ಯಕ್ತಿ.
ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದಾಗಿನಿಂದ ನಾನು ಅವರನ್ನು ಸದಾ “ಯು ಆರ್ ಮೈ ಲೀಡರ್” ಎಂದೇ ರೇಗಿಸಿಕೊಂಡು ಬಂದಿರುವೆ. ಇಂದು ಮೈ ಲೀಡರ್ ವೈ.ಕೆ. ಬಾಲಕೃಷ್ಣಪ್ಪನವರ ಜನುಮ ದಿನ. ಐವತ್ತೆಂಟು ವರುಷ ಪೂರೈಸಿದ ಅವರಿಗೆ ಜನ್ಮ ದಿನದ ಶುಭಾಶಯಗಳು.