ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ ತುಮಕೂರಿನಲ್ಲೇ ಏಕೆ? ಕಟ್ಟಡಗಳ ಕೊರತೆ-ಶಿಕ್ಷಕರ ಕೊರತೆ ನೀಗಿಸಿ ಮಕ್ಕಳ ಕಲಿಕೆಗೆ ಒತ್ತು ನೀಡುವರೇ? ಬಿಆರ್‍ಪಿ-ಸಿಆರ್‍ಪಿಗಳ ಕೆಲಸವೇನು……..!?

ಈ ಬಾರಿಯ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭವು ತುಮಕೂರಿನಲ್ಲಿ ನಡೆಯುತ್ತಿದ್ದು, ತುಮಕೂರಿನಲ್ಲೇ ಏಕೆ ಈ ಸಮಾರಂಭ ಆಯೋಜಿಸಲಾಗಿದೆ, ಎಂಬುದು ಶೈಕ್ಷಣಿಕ ವಲಯ ಮತ್ತು ಸಾರ್ವಜನಿಕರಲ್ಲಿ ಪ್ರಶ್ನೆ ಉದ್ಭವಿಸಿದೆ.ತುಮಕೂರು ಜಿಲ್ಲೆಯು ಶೈಕ್ಷಣಿಕ ಜಿಲ್ಲೆ ಎಂದು ಗುರುತಿಸಿಕೊಂಡಿದ್ದರೂ, ಇದುವರೆವಿಗೂ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳು ಅಷ್ಟಾಗಿ ನಡೆದಿಲ್ಲ, ಅದೂ ಸರ್ಕಾರಿ ಶೈಕ್ಷಣಿಕ ಕಾರ್ಯಕ್ರಮಗಳೆಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ರೂಪಿಸಲಾಗುತ್ತಿದೆ, ಆದರೆ ಈ ಬಾರಿ ತುಮಕೂರಿನಲ್ಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಂದು ಶೈಕ್ಷಣಿಕ ವರ್ಷವನ್ನು ಉದ್ಘಾಟಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ತುಮಕೂರಿನ ಜಿಲ್ಲೆಯವರೇ ಆಗಿದ್ದು, ಅವರು ಅಷ್ಟಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಂಡಿಲ್ಲ, ಅವರು ಜಿಲ್ಲಾ ಉಸ್ತವಾರಿ ಸಚಿವರು ಅಲ್ಲದ ಕಾರಣ, ಕರೆದ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದರು.

ಜಿಲ್ಲೆಯಲ್ಲಿ ಅವರೇ ಮುಂದೆ ನಿಂತು ಕಾರ್ಯಕ್ರಮ ನಡೆಸಿ ಕೊಡುವಂತಹ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ, ಇಂತಹ ಸಂದರ್ಭದಲ್ಲಿ ಅವರಿಗೆ ಈ ವರ್ಷದ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭದ ದಿನವನ್ನು ಮುಖ್ಯಮಂತ್ರಿಗಳಿಂದ ಉದ್ಘಾಟಿಸಿ ಸರ್ಕಾರಿ ಶಾಲೆಗಳಿಗೆ, ಖಾಸಗಿ ಶಾಲೆಗಳಿಗೆ ಮತ್ತು ಶಿಕ್ಷಕರುಗಳಿಗೆ ಯಾವ ಸಂದೇಶ ನೀಡಲಿದ್ದಾರೆ ಎಂಬುದು ಸಹ ಮುಖ್ಯವಾಗಲಿದೆ.
ಕೊರೊನಾ ನಂತರ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗದ ಕಾರಣ, ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಅಮೂಲಾಗ್ರ ಬದಲಾವಣೆಗಳಿಂದ ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಈ ಸಮಾರಂಭ ಬಹುಮುಖ್ಯ ಸಮಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಕೊಠಡಿ-ಶಿಕ್ಷಕರ ಕೊರತೆ : ಬಹತೇಕ ಎಲ್ಲಾ ಕಡೆ ಈಗ ಶಿಕ್ಷಣಕ್ಕೆ ಮತ್ತು ಕಲಿಕೆಗೆ ಸರ್ಕಾರಿ ಶಾಲೆಗಳಲ್ಲಿ ಎದ್ದು ಕಾಣುತ್ತಿರುವ ಸಮಸ್ಯೆಯೆಂದರೆ ಶಾಲಾ ಕಟ್ಟಡಗಳ ಕೊರತೆ, ಶಾಲಾ ಕೊಠಡಿಗಳಿದ್ದರೂ ಶಿಥಿಲಾವಸ್ಥೆಗೊಂಡು ಮಕ್ಕಳು ಶಾಲೆಗೆ ಬರಲು ಭಯ ತರುವಂತಹ ಶಾಲಾ ಕಟ್ಟಡಗಳು ಕಂಡು ಬರುತ್ತವೆ, ಇಷ್ಟೇ ಆಗಿದ್ದರೆ ಎಲ್ಲೋ ಕೂರಿಸಿ ಮಕ್ಕಳಿಗೆ ಎರಡಕ್ಷರ ಕಲಿಸಬಹುದಿತ್ತೇನೋ, ಆದರೆ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆಯೇ ಪೆಡಂಭೂತವಾಗಿ ಕಾಡುತ್ತಾ ಇದೆ. ಇರುವ ಒಂದಿಬ್ಬರು ಶಿಕ್ಷಕರು ಶಾಲೆಗಳನ್ನು ನಿಭಾಯಿಸಬೇಕೆಂದಿದ್ದರೂ, ವರ್ಷದಲ್ಲಿ ಅವರಿಗೆ ನೂರೆಂಟು ತರಬೇತಿಗಳು, ಸಮೀಕ್ಷೆಗಳು, ಶಾಲಾ ದಾಖಲಾತಿ ಮುಂತಾದವುಗಳ ಜೊತೆಗೆ ಈ ಶಾಲಾ ದಾಖಲಾತಿಗಳು, ಸಮೀಕ್ಷೆಗಳನ್ನು ಇಲಾಖೆಯ ವೆಬ್ ಸೈಟ್‍ಗೆ ಆಫ್-ಲೋಡ್ ಮಾಡುವುದೇ ಇಲಾಖೆಯ ಕೆಲಸ, ಇದೇ ಮಕ್ಕಳ ಕಲಿಕೆ ಎಂಬಂತೆ ಶಿಕಕ್ಷಣಾ ಇಲಾಖೆ ಬಿಂಬಿಸುತ್ತಾ ಬರುತಾ ಇದೆ.

ಶಾಲೆಯಲ್ಲಿರುವ ಒಂದಿಬ್ಬರು ಶಿಕ್ಷರುಗಳು ಮಕ್ಕಳಿಗೆ ಪಾಠ ಮಾಡಿ ಕಲಿಸಬೇಕಾದ ಸಂದರ್ಭದಲ್ಲಿ ಇಲಾಖೆಯ ಕೆಲಸಗಳನ್ನು ಮಾಡುತ್ತಾ ಕಾರುಕೂನ ಕೆಲಸವನ್ನಷ್ಟೆ ಮಾಡಬೇಕಾಗಿದೆ. ಕಲಿಸಬೇಕಾದ ಹಲವಾರು ಶಿಕ್ಷಕರು ಬಿಆರ್‍ಪಿ, ಸಿಆರ್‍ಪಿಗಳಾಗಿ ಶಾಲಾ ಭೇಟಿ, ಅದೂ ಇದೂ ಅಂತಾ ಅವರುಗಳ ಸ್ವಂತ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ ಎಂಬ ಆರೋಪಗಳೂ ಇವೆ, ಅದೂ ಒಂದು ತಾಲ್ಲೂಕಿಗೆ 25ರಿಂದ 30 ಬಿಆರ್‍ಪಿ, ಸಿಆರ್‍ಪಿಗಳಿದ್ದಾರೆ. ಇವರು ಅದೇನು ಕಲಿಕೆಗೆ ಒತ್ತು ನೀಡಿದ್ದಾರೆ ಎಂಬುದನ್ನು ಯಾವ ಬಿಆರ್‍ಪಿ, ಸಿಆರ್‍ಪಿ ಒಂದು ದಿನವೂ ಮಾತನಾಡಿದ್ದು ನೋಡಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಬಿಆರ್‍ಪಿ ಮತ್ತು ಸಿಆರ್‍ಪಿಗಳನ್ನು ಶಾಲೆಗೆ ಮರು ನೇಮಕ ಮಾಡಬೇಕೆಂಬ ಒತ್ತಾಯವು ಬಹಳ ವರ್ಷಗಳಿಂದ ಕೇಳಿ ಬಂದರೂ ಆ ಹುದ್ದೆಗಳನ್ನು ಮುಂದುವರಿಸಲಾಗಿದೆ.ಈ ಎಲ್ಲಾ ಕಾರಣಗಳಿಂದ ಸರ್ಕಾರಿ ಶಾಲೆಯ ಮಕ್ಕಳ ಕಲಿಕೆ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಾ ಇವೆ ಎಂದು ಶೈಕ್ಷಣಿಕ ಸಮೀಕ್ಷಗಳು ಹೇಳುತ್ತವೆ.

ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸದೆ, ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದು ಮಕ್ಕಳ ಕಲಿಕೆಗೆ ಒತ್ತು ನೀಡಬೇಕಿದೆ.
ಮಕ್ಕಳಿಗೆ ನೀಡಬೇಕಾದ ಪಠ್ಯಪುಸ್ತಕ, ಸಮವಸ್ತ್ರ ಮುಂತಾದವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ನೀಡದೆ ಮನಸ್ಸಿಗೆ ಬಂದಾಗ ನೀಡುವುದು, ಶಿಕ್ಷಕರುಗಳನ್ನು ಅನ್ಯ ಇಲಾಖೆ, ಅನ್ಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದೆ ಇದ್ದಾಗ ಮಾತ್ರ ಮಕ್ಕಳಿಗೆ ಕಲಿಸಲು ಒತ್ತು ನೀಡ ಬಹುದು ಎಂದು ಹಲವಾರು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದೆಲ್ಲದರಿಂದ ಬೇಸತ್ತಿರುವ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾದರೆ ಅಲ್ಲಿಯ ಶುಲ್ಕವೇ ಇವರಿಗೆ ಶೂಲವಾಗಿ ಸುತ್ತಿಕೊಳ್ಳುತ್ತದೆ, ಪೋಷಕರು ನಮ್ಮ ಮಗು ಸರ್ಕಾರಿ ಶಾಲೆಗೋ-ಖಾಸಗಿ ಶಾಲೆಗೋ ಎಂಬಂತಹ ಗೊಂದಲದ ನಡು ನೀರಿನಲ್ಲಿ ಮುಳುಗೇಳುತ್ತಿದ್ದಾರೆ, ಇದಕ್ಕೆ ಶಿಕ್ಷಣ ಇಲಾಖೆ ಪರಿಹಾರ ಹುಡುಕುವುದೆ ಈ ಸಮಾರಂಭದ ಮೂಲಕ.
ಶಿಕ್ಷಣ ಇಲಾಖೆಯ ಇಂತಹ ಬದಲಾವಣೆ ತರಲು ಇಚ್ಛಾಶಕ್ತಿ ಇಲಾಖೆಗೆ ಇಲ್ಲ ಎಂದು ಹೇಳಲಾಗುತ್ತಿದ್ದು, ಈಗಲಾದರೂ ಸಚಿವರಾದ ಬಿ.ಸಿ.ನಾಗೇಶ್ ಅವರು ಕಠಿಣ ಕ್ರಮದ ಮೂಲಕ ಇಲಾಖೆಯನ್ನು ಸರಿ ದಾರಿಗೆ ತಂದು ಮಕ್ಕಳ ಕಲಿಕೆಗೆ ಒತ್ತು ನೀಡುವರೇ? ಎಂಬುದು ಸಹ ಮುಖ್ಯವಾಗಿದೆ.

ಇದಲ್ಲದೆ ಸಧ್ಯದಲ್ಲಿಯೇ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆಗಳೂ ಇದ್ದು, ಸಚಿವ ಬಿ.ಸಿ.ನಾಗೇಶ್ ಅವರಿಗೆ ಈ ಸಮಾರಂಭ ಅವರ ಮುಂದಿನ ರಾಜಕೀಯ ಭವಿಷ್ಯವೂ ಅಡಗಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *