ಸ್ಮಾರ್ಟ್ ಸಿಟಿಯ ಪರಿಕಲ್ಪನೆಗೆ ಮೂಲ ಪ್ರೇರಣೆ ನಾಡಪ್ರಭು ಕೇಂಪೆಗೌಡ: ಶಾಸಕ ಜಿ.ಬಿ ಜ್ಯೋತಿಗಣೇಶ್

ತುಮಕೂರು : ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಯೋಜನೆಯ ಪರಿಕಲ್ಪನೆಗೆ ಮೂಲ ಪ್ರೇರಣೆ ನವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡ ಬೆಂಗಳೂರು ನಗರವನ್ನು ಸುವ್ಯವಸ್ಥಿತವಾಗಿ ಕಟ್ಟುವಲ್ಲಿ ಅವರ ಶ್ರಮ ಸಾರ್ಥಕವಾಗಿದ್ದು ಇಂದು ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮಾತನಾಡಿ, ಕರ್ನಾಟಕ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದ್ದು ಬೆಂಗಳೂರು ಮುಖಾಂತರ. ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ಕಟ್ಟಬೇಕು ಎಂದು ಯೋಜಿಸಿ ಅಂತೆಯೇ ಅದನ್ನು ಕಾರ್ಯಗತಗೊಳಿಸಿದವರು ನಾಡಪ್ರಭು ಕೆಂಪೇಗೌಡ ಎಂದು ತಿಳಿಸಿದರು. ಬೆಂಗಳೂರು ನಗರವನ್ನು ಸಮುದ್ರಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದಲ್ಲಿ ಹಾಗೂ ಭೂಕಂಪ ಸಂಭವಿಸಲಾಗದ ಸ್ಥಳದಲ್ಲಿ ಯೋಜಿತ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದರು.


ತುಮಕೂರು ಕೆಂಪೇಗೌಡ ಅವರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಅವರ ಆಡಳಿತದ ಕಾಲದಲ್ಲಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ರೈತರು ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿದ್ದರೆಂದರು. ಯಾವುದೇ ಒಂದು ನಗರದ ನಿರ್ಮಾಣ ಸುಲಭ ಸಾಧುವಲ್ಲ. ಅದನ್ನೇ ಧ್ಯೇಯವಾಗಿಟ್ಟುಕೊಂಡು ವಿವಿಧ ಬಡಾವಣೆಗಳನ್ನು ನಿರ್ಮಿಸಿ ಜನಸಂದಣಿ ಉಂಟಾಗದಂತೆ ಮಾಡಿದವರು ಎಂದು ಸ್ಮರಿಸಿದರು.
ಇಂದು ನಗರವು ಬೃಹದಾಕಾರವಾಗಿ ಬೆಳೆದಿದ್ದು ಮಾಹಿತಿ ತಂತ್ರಜ್ಞಾನದಿಂದ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ.ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಗಮನ ಸೆಳೆಯುವಂತಿದೆ ಎಂದು ತಿಳಿಸಿದರು.

ಕೆಂಪೇಗೌಡ ಅವರು ಒಂದು ಜನಾಂಗದ ನಾಯಕ ಮಾತ್ರವಲ್ಲದೆ ಎಲ್ಲಾ ಸಮುದಾಯದ ನಾಯಕರೆನಿಸಿಕೊಂಡು ಎಲ್ಲರಿಗೂ ಪ್ರಾಶಸ್ತ್ಯ ನೀಡಿದವರು. ಅವರ ಆಶಯಗಳನ್ನು ಉಳಿಸಿ ಬೆಳೆಸುವುದು ಎಲ್ಲಾ ನಾಗರೀಕರ ಕರ್ತವ್ಯವಾಗಿದ್ದು, ನಮಗಾಗಿ ನಾಡು- ನುಡಿಯನ್ನು ಕಟ್ಟಿ ಬೆಳೆಸಿದವರನ್ನು ಮರೆಯಬಾರದೆಂದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಮುರುಳಿಧರ ಹಾಲಪ್ಪ, ಪ್ರೋ.ವೀರಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್ ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಪಾಲಿಕೆಯ ಅಧಿಕಾರಿಗಳು, ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳು ಸಮುದಾಯದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *