ತುಮಕೂರು:ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ತುಮಕೂರು ಅತ್ಯಂತ ಪ್ರಮುಖ ಜಿಲ್ಲೆಯಾಗಿದ್ದು,ಪಕ್ಷವನ್ನು ಮತ್ತಷ್ಟು ಸದೃಢವಾಗಿ ಬೆಳೆಸುವ ಉದ್ದೇಶದಿಂದ ಅನುಭವಿಗಳು ಆಗಿರುವ ರವಿಶಂಕರ್ ಹೆಬ್ಬಾಕ ಅವರನ್ನು ಪಕ್ಷದ ಹೈಕಮಾಂಡ್ ತುಮಕೂರು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ತುಮಕೂರು ಪ್ರಭಾರಿ ಕೆ.ಎಸ್.ನವೀನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಿಲ್ಲೆಯಲ್ಲಿ ನಾಲ್ವರು ಶಾಸಕರು,ಮೂವರು ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಸಂಸದರಿದ್ದು,2023ರ ಚುನಾವಣೆಯಲ್ಲಿ ಅತಿ ಹೆಚ್ಚಿನ ಶಾಸಕರು ತುಮಕೂರು ಜಿಲ್ಲೆಯಿಂದ ಆಯ್ಕೆಯಾಗುವಂತೆ ಮಾಡುವ ಗುರುತರ ಜವಾಬ್ದಾರಿಯನ್ನು ನೀಡಲಾಗಿದೆ.ಇದಕ್ಕೆ ಬೆಂಬಲವಾಗಿ ರವಿಶಂಕರ್ ಅವರೊಂದಿಗೆ ನಾವೆಲ್ಲರೂ ಕೈಜೋಡಿಸಲಿದ್ದೇವೆ ಎಂದರು.
ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಪಕ್ಷದ ಮುಖಂಡರು ಕೆಲವು ಜಿಲ್ಲೆಗಳಿಗೆ ಅಧ್ಯಕ್ಷರು,ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತುಮಕೂರು ಜಿಲ್ಲೆಯ ಅಧ್ಯಕ್ಷರಾಗಿ,ಈ ಹಿಂದೆ ಮೂರು ಬಾರಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಹೆಬ್ಬಾಕ ಅವರ ಕಾರ್ಯಕ್ಷಮತೆಯನ್ನು ಒಪ್ಪಿಕೊಂಡು ಆಯ್ಕೆ ಮಾಡಲಾಗಿದೆ.ಮೇ.20 ರಂದು ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯುವ ತುಮಕೂರು ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವೂ ಜರುಗಲಿದೆ ಎಂದು ಕೆ.ಎಸ್.ನವೀನ್ ತಿಳಿಸಿದರು.
ಕಳೆದ ಎರಡು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದ ಆಗುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸೇರಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ ಕೆ.ಎಸ್. ನಿವೀನ್,ಈ ಹಿಂದಿನ ಜಿಲ್ಲಾಧ್ಯಕ್ಷರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ.ನಮ್ಮಲ್ಲಿ ಬಣ ರಾಜಕೀಯವಿಲ್ಲ. ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಸಾಕಷ್ಟು ಒತ್ತಡಗಳಿರುತ್ತೇವೆ.ಹೆಚ್ಚು ಸಮಯ ಪಕ್ಷ ಸಂಘಟನೆಯಲ್ಲಿಯೇ ಕಳೆಯಬೇಕಾಗುತ್ತದೆ.ಪಕ್ಷ ಅವರನ್ನು ಕೈಬಿಟ್ಟಿಲ್ಲ.ಅವರಾಗಿಯೇ ಪಕ್ಷ ವಹಿಸಿದ್ದ ಅಧ್ಕಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಮಕೂರು ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ರವಿಶಂಕರ್ ಹೆಬ್ಬಾಕ ಮಾತನಾಡಿ,ನನ್ನ ಮೇಲೆ ಭರವಸೆಯಿಟ್ಟು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನಕುಮಾರ್ ಕಟೀಲ್ ಅವರು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.ನನ್ನ ಶಕ್ತಿ ಮೀರಿ ಪಕ್ಷವನ್ನು ಸಂಘಟಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಗೆ ಬರುವ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅವರ ನಂಬಿಕೆಯನ್ನು ಉಳಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲಾ ನಾಯಕರೊಂದಿಗೆ ಸೇರಿ ಜಿಲ್ಲಾ ಪ್ರವಾಸ ಕೈಗೊಂಡು, ಪಕ್ಷ ಸಂಘಟನೆ ಮಾಡಲಿದ್ದೇನೆ ಎಂದರು.
ಇದೇ ವೇಳೆ ನೂತನ ಜಿಲ್ಲಾಧ್ಯಕ್ಷರಾದ ರವಿಹೆಬ್ಬಾಕ ಅವರನ್ನು ಜಿಲ್ಲಾಧ್ಯಕ್ಷರಾಗಿ ಘೋಷಿಸಿ, ಹೂಗುಚ್ಚ ನೀಡಿ, ಕೆ.ಎಸ್.ನವೀನ್ ಸೇರಿದಂತೆ ಪಕ್ಷದ ನಾಯಕರುಗಳು ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಶಿವಪ್ರಸಾದ್, ಪ್ರೇಮಹೆಗಡೆ,ಪ್ರಧಾನ ಕಾರ್ಯದರ್ಶಿಗಳಾದ ಸಂಪಿಗೆ ಶ್ರೀಧರ್, ಭೈರಪ್ಪ,ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಸನತ್ ಮತ್ತಿತರರು ಉಪಸ್ಥಿತರಿದ್ದರು.