ತುಮಕೂರು : ಹೊಸದುರ್ಗ ಪಾಳ್ಳೇಗಾರರು ಎಂಬ ವಿಶೇಷವಾದ ಪ್ರಬಂಧಕ್ಕೆ ಡಾ.ದಿನೇಶ್‍ಕುಮಾರ್.ಪಿ.ಎನ್. ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ.ದಿನೇಶ್‍ಕುಮಾರ್ ಪಿ.ಎನ್.ಅವರು ಡಾ.ಪ್ರಿಯಾಠಕೂರ್ ಮಾರ್ಗದರ್ಶನದಲ್ಲಿ ಹೊಸದುರ್ಗ ಪ್ರದೇಶದ ಪಾಳ್ಳೇಗಾರರು ಎಂಬ ವಿಷಯದಲ್ಲಿ ತುಮಕೂರು ವಿ.ವಿ.ಪುರಾತತ್ವ ಸಂಶೋಧನಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು.
ಪಾಳ್ಳೇಗಾರರು ಸುಮಾರು 18ನೇ ಶತಮಾನದಲ್ಲಿ ವಿಜಯನಗರ ಅರಸರ ಅಧೀನದಡಿಯಲ್ಲಿ ಆಳ್ವಿಕೆ ಮಾಡ ಬೇಕಾಗಿತ್ತು. ಇಂತಹ ಪಾಳ್ಳೇಗಾರರಲ್ಲಿ ಹಾಗಲವಾಡಿಯ ಶಿರಮನಾಯಕ ಎಂಬ ಪಾಳ್ಳೇಗಾರನು ತುಂಬಾ ಹೆಸರು ಪಡೆದ ಪಾಳ್ಳೇಗಾರನಾಗಿದ್ದ, ಈ ಹಿನ್ನಲೆಯಲ್ಲಿಯೇ 18ನೇ ಶತಮಾನದಿಂದಲೇ ಹಾಗಲವಾಡಿ ತುಂಬಾ ಯಶಸ್ವಿಯಾದ ಪಾಳೇಪಟ್ಟು ಕೇಂದ್ರ ಎನ್ನಿಸಿಕೊಂಡಿದೆ.
ಹೊಸದುರ್ಗ ಪ್ರದೇಶದ ಪಾಳ್ಳೇಗಾರರು ಕಂದಾಯ ಸಂಗ್ರಹಿಸಿ ವಿಜಯನಗರ ಅರಸರಿಗೆ ನೀಡುವುದಲ್ಲದೆ, ವಿಜಯನಗರ ಅರಸರು ಹೇಳಿದಂತೆ ಆಡಳಿತವನ್ನು ಮಾಡಬೇಕಿತ್ತು, ಕಂದಾಯ ಕೊಡದ, ಹೇಳಿದಂತೆ ಕೇಳದ ಪಾಳ್ಳೇಗಾರರನ್ನು ವಿಜಯನಗರ ಅರಸರು ಕಿತ್ತಾಕಿ ಬೇರೆಯವರನ್ನು ನೇಮಿಸುತ್ತಿದ್ದರು, ಯಾವುದೇ ತಿರ್ಮಾನ ತೆಗೆದುಕೊಳ್ಳುವಾಗಲೂ ವಿಜಯನಗರ ಸಂಸ್ಥಾನಕ್ಕೆ ಅಧೀನದಲ್ಲಿದ್ದಕೊಂಡು ವಿಜಯನಗರ ಅರಸರ ನಿರ್ದೇಶನದಂತೆ ಆಡಳಿತ ಮಾಡಬೇಕಿತ್ತು.
ಇದಲ್ಲದೆ ಈ ಪಾಳ್ಳೇಗಾರರಿಗೆ ಸ್ವತಂತ್ರವಾಗಿ ಕೋಟೆ ಕಟ್ಟುವ, ಅಧಿಕಾರವೂ ಇರಲಿಲ್ಲ, ಯುದ್ಧ ಕಾಲದಲ್ಲಿ ಈ ಪಾಳ್ಳೇಗಾರರು ಇಂತಿಷ್ಟು ಎಂದು ಸೈನಿಕರನ್ನು ಕಳಿಹಿಸುವುದಲ್ಲದೆ, ಯುದ್ಧದ ಮುಖಂಡತ್ವವನ್ನು ಸಹ ವಹಿಸಬೇಕಿತ್ತು.
ಡಾ.ದಿನೇಶ್‍ಕುಮಾರ ಪಿ.ಎನ್. ಡಾಕ್ಟರೇಟ್ ಪಡೆದ ಹೊಸದುರ್ಗ ಪ್ರದೇಶದ ಪಾಳ್ಳೇಗಾರರು ಎಂಬ ಪಿ.ಹೆಚ್.ಡಿ. ವಿಷಯದಲ್ಲಿ ಪಾಳ್ಳೇಗಾರರ ಹಿನ್ನಲೆ, ಆಡಳಿತ, ಆ ಪ್ರದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಸ್ಥಿತಿಗತಿಗಳನ್ನು ಮತ್ತು ಬೆಲಗೂರು, ಹಾಗಲವಾಡಿ, ಹೊಸದುರ್ಗ ಪ್ರಾಂತದಲ್ಲಿ ಬರುವ ದೇವಸ್ಥಾನ, ಮಾಸ್ತಿ ಕಲ್ಲುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಡಾಕ್ಟರೇಟ್ ಪಡೆದ ಡಾ.ದಿನೇಶ್‍ಕುಮಾರ ಪಿ.ಎನ್. ಅವರು ಮೈತ್ರಿನ್ಯೂಸ್‍ನೊಂದಿಗೆ ಮಾತನಾಡಿ ಇತಿಹಾಸವನ್ನು ಉಳಿಸಬೇಕು ಮತ್ತು ಮುಖ್ಯವಾಗಿ ಪಾಳ್ಳೇಗಾರರ ಕಾಲದಲ್ಲಿ ಆಡಳಿತ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಯುದ್ಧಗಳನ್ನು ಯಾವ ರೀತಿ ಮಾಡುತ್ತಿದ್ದರು, ಯಾವ ರೀತಿ ಕಂದಾಯ ವಿಧಿಸುವುದು ವಸೂಲಿ ಮಾಡುತ್ತಿದ್ದರು, ಬಹಳಷ್ಟು ದೇವಾಲಯಗಳನ್ನು ನಿರ್ಮಿಸಿದ್ದು ಆವುಗಳ ಹಿನ್ನಲೆ ಮುಂತಾದವುಗಳನ್ನೆಲ್ಲಾ ಬಹಳ ಪರಿಶ್ರಮ ಮತ್ತು ಒಂದು ಇತಿಹಾಸವನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸಂಶೋಧನೆ ಮಾಡಿರುವುದಾಗಿ ತಿಳಿಸುತ್ತಾರೆ.