ಹೊಸ ಅಲೆ ನಾಟಕಗಳ ಶೆಕೆ ಆರಂಭವಾಗಿದೆ


ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳ ಶೆಕೆ ಆರಂಭವಾಗಿದೆ ಎಂದು ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತಾ ಅಭಿಪ್ರಾಯಪಟ್ಟರು.

ಅವರು ಕನ್ನಡ ಭವನದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ಬೇಸಿಗೆ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು
ಸಾಲು ಸಾಲು ಪ್ರಯೋಗಾತ್ಮಕ ನಾಟಕಗಳನ್ನು ಹೊರಗಿನಿಂದ ತಂದು ಪ್ರದರ್ಶಿಸಲಾಗಿದೆ. ಈ ಮೂಲಕ ಪ್ರೇಕ್ಷಕರನ್ನು ಹೊಸ ಅಲೆಯ ನಾಟಕಗಳನ್ನು ನೋಡಲು ಸಜ್ಜುಗೊಳಿಸಲಾಗುತ್ತಿದೆ ಎಂದರು.

ಪೌರಾಣಿಕ ರಂಗಭೂಮಿಯಲ್ಲಿ ತುಮಕೂರು ತನ್ನದೇ ಛಾಪು ಮೂಡಿಸಿದೆ. ಈಗ ಹೊಸ ಅಲೆಯ ನಾಟಕಗಳ ಮೂಲಕ ಗಮನಸೆಳೆಯುತ್ತಿದೆ. ತುಮಕೂರಿನಲ್ಲಿ ನೀನಾಸಂ, ಜಮುರಾ, ಶಿವಸಂಚಾರ, ಆಟಮಾಟ ಹೀಗೆ ಎಲ್ಲಾ ರೆಪರ್ಟರಿಗಳನ್ನು ಕರೆಸಿ ನಾಟಕ ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮೊದಲೆಲ್ಲ ನಾಟಕಕ್ಕೆ ಪ್ರೇಕ್ಷಕರ ತೀವ್ರ ಕೊರತೆ ಎದ್ದು ಕಾಣುತ್ತಿತ್ತು. ಈಗ ಹೊಸ ಅಲೆಯ ನಾಟಕಗಳಿಗೆ ಪ್ರೇಕ್ಷಕರು ಕೂಡ ಒಗ್ಗಿಕೊಂಡಿದ್ದು ಉತ್ತಮ ಸ್ಪಂದನೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು
ಸಮಾರೋಪ ನುಡಿಗಳನ್ನಾಡಿದ ಸತೀಶ್ ತಿಪಟೂರು ಅವರು ರಂಗಭೂಮಿಗೆ ಚಲನಶೀಲತೆ ಇದೆ. ಹೊಸ ಹೊಸ ಯುವ ನಿರ್ದೇಶಕರು ರಂಗಭೂಮಿಗೆ ಬರುತ್ತಿದ್ದು ರಂಗಭೂಮಿ ಮತ್ತಷ್ಟು ಚೈತನ್ಯದಿಂದ ಕೂಡಿದೆ ಎಂದರು. ರಾಜ್ಯಾದ್ಯಂತ ಹೊಸ ಬಗೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ ತುಮಕೂರು ಜಿಲ್ಲೆ ನಾಟಕಗಳ ತವರೂರು. ಹಲವಾರು ರಂಗ ದಿಗ್ಗಜರು ನಾಟಕ ಕಲೆ ಮೂಲಕ ರಾಜ್ಯದ ಗಮನವನ್ನು ಸೆಳೆದಿದ್ದಾರೆ. ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಸೇರಿದಂತೆ ಇಲ್ಲಿಯವರೆಗೂ ಹಲವಾರು ಮಂದಿ ನಾಟಕ ಕ್ಷೇತ್ರವನ್ನು ಬೆಳೆಸಿದ್ದಾರೆ. ಹೊಸ ತಲೆಮಾರು ಕೂಡ ನಾಟಕಗಳನ್ನು ಬೆಳೆಸುತ್ತಾ ಹೋಗಿದೆ. ರಾಜ್ಯಾದ್ಯಂತ ಹಲವಾರು ಪ್ರಯೋಗಾತ್ಮಕ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿದೆ ಎಂದರು. ಕಳೆದ 2 ದಶಕಗಳಿಂದಲೂ ತುಮಕೂರು ಜಿಲ್ಲೆಯಲ್ಲಿ ಭಿನ್ನ ನಾಟಕ ಪ್ರಯೋಗಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯಲ್ಲಿ ಹಲವಾರು ರಂಗ ತಂಡಗ ಳು ಸಕ್ರಿಯವಾಗಿದ್ದು ಹೊಸ ಹೊಸ ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.
ಈಗಾಗಲೇ ತುಮಕೂರಿನಲ್ಲಿ ರಂಗಾಯಣದ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ ಎಂದರು. ಎಲ್ಲಾ ನಾಟಕಗಳಿಗೆ ಕಸಾಪ ಯಾವತ್ತೂ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಕೀಲ ಹಾಗೂ ಪತ್ರಕರ್ತ ಸಾ.ಚಿ. ರಾಜಕುಮಾರ್, ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ಮತ್ತಿತರರು ಇದ್ದರು. ಬಳಿಕ ಶಕೀಲ್ ಅಹಮದ್ ನಿರ್ದೇಶನದ ಅನಾಮಿಕನ ಸಾವು ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *