100 ಕುರಿ ಎಣಿಸಲು ಬಾರದವನು ಅದೇನು ಬಜೆಟ್ ಮಂಡಿಸುತ್ತಾನೆ-ಪತ್ರಿಕೆಗಳ ಟೀಕೆಯನ್ನೆ ಚಾಲೆಂಜಾಗಿ ಸ್ವೀಕರಿದೆ-ಸಿದ್ದರಾಮಯ್ಯ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರವು ವಿಕೇಂದ್ರಿಕರಣವಾಗಬೇಕು, ಕೇಂದ್ರಿಕರಣವಾದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭೀಪ್ರಾಯ ಪಟ್ಟರು.

ಅವರು ಭಾನುವಾರ (ಮೇ22ರಂದು) ತುಮಕೂರಿನ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಬೆಂಗಳೂರಿನ ಜನಮನ ಪ್ರತಿಷ್ಠಾನ ವತಿಯಿಂದ ಸಿದ್ಧರಾಮಯ್ಯ ಆಡಳಿತ ಅಂತರಂಗ-ಬಹಿರಂಗ ಗ್ರಂಥಾವಲೋಕನ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಧಿಕಾರವು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲೆ ಮತ್ತು ಹಳ್ಳಿ ಸೇರಿದಂತೆ ನಾಲ್ಕು ಹಂತಗಳಲ್ಲಿ ವಿಕೇಂದ್ರಿಕರಣಗೊಳ್ಳಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ ಎಂದ ಅವರು, ನಾನು ಸಂವಿಧಾನದ ಆಶಯದಂತೆ ನಡೆದಕೊಂಡಿದ್ದೇನೆ. ಜನಪರ ನಿಲುವುಗಳನ್ನು ತಳೆದಿದ್ದೇನೆ ಆದರೂ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ವ್ಯವಸ್ಥೆ ಎಲ್ಲೀವರೆಗೆ ಇರುತ್ತದೆಯೋ ಅಲ್ಲಿವರೆಗೆ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಯಾರು ಜೈಲಿಗೆ ಹೋಗಿ ಬಂದಿರುತ್ತಾರೋ ಅವರೆಲ್ಲ ಜನಪ್ರಿಯರಾಗುತ್ತಿದ್ದಾರೆ. ಇಂದು ಸಾಧನೆಗಳ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿಲ್ಲ. ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಜಾತಿಯಿಂದ ಅಳೆಯಲಾಗುತ್ತಿದೆ. ಈ ವಿಚಾರಗಳು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿವೆ.

ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಕೊಂಡವನು, ನಾನು ಮುಖ್ಯಮಂತ್ರಿಯಾಗಲು ಸಂವಿಧಾನವೇ ಕಾರಣ ಎಂದ ಅವರು, ಅವರು ನಾನು ಶಾಲೆಗೆ ಐದನೇ ತರಗತಿಗೆ ಸೇರಿಕೊಂಡವನು, ರಾಜಪ್ಪ ಎನ್ನುವ ಮಾಸ್ತರು ನನ್ನನ್ನು ನೇರವಾಗಿ ಐದನೇ ತರಗತಿಗೆ ದಾಖಲಾತಿ ಮಾಡಿಕೊಂಡರು, ನಮ್ಮ ತಂದೆಗೆ ನಾನು ವೈದ್ಯನಾಗಬೇಕೆಂಬ ಆಸೆಯಿತ್ತು, ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದೆ, ಆದರೆ ಪಿ.ಯು.ಸಿಯಲ್ಲಿ ನಾನು ಮೆಡಿಕಲ್‍ಗೆ ಹೋಗುವಷ್ಟು ಅಂಕಗಳು ಬರಲಿಲ್ಲ, ಬಿ.ಎಸ್ಸಿ ಮಾಡಿ ಹೋಗಲು ನಿರ್ಧರಿಸದೆ ಆದರೆ ಅದೂ ಆಗಲಿಲ್ಲ, ಕೊನೆಗೆ ನಮ್ಮಪ್ಪನ ಜೊತೆ ಜಗಳ ಮಾಡಿಕೊಂಡು ಎಲ್.ಎಲ್.ಬಿ.ಗೆ ಸೇರಿಕೊಂಡೆ. ಎಲ್.ಎಲ್.ಬಿ.ಗೆ ಸೇರಕೊಂಡ ಮೇಲೆ, ನಂಜುಂಡಸ್ವಾಮಿ ಲಾ-ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು, ಅವರ ಸಂಪರ್ಕದಿಂದ ರೈತ ಸಂಘ, ನಂತರ ಜಾರ್ಜ್‍ಪರ್ನಾಂಡಿಸ್ ಸಂಪರ್ಕ ಸಿಕ್ಕಿ ಸಮಾಜವಾದಿ ಪಕ್ಷ ಸೇರಿ 1979ರಲ್ಲಿ ಲೋಕದಳ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆಯಾದೆ ಎಂದು ತಮ್ಮ ರಾಜಕೀಯ ಹಿನ್ನಲೆಯನ್ನು ಮೆಲುಕು ಹಾಕಿದರು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ನನಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದರು, ತದ ನಂತರ ರೇಷ್ಮೆ ಮಂತ್ರಿಯನ್ನಾಗಿಯೂ ಮಾಡಿದರು.

ನಾನು ಹಣಕಾಸು ಮಂತ್ರಿಯಾದಾಗ ಕೆಲ ಮಂತ್ರಿಕೆಗಳು ನೂರು ಕುರಿ ಎಣಿಸಲು ಬಾರದ ಕುರುಬ ಬಜೆಟ್ ಹೇಗೆ ಮಂಡಿಸ ಬಲ್ಲ ಎಂದು ಬರೆದವು, ನಾನು ಇದನ್ನೇ ಚಾಲೆಂಜಾಗಿ ತೆಗೆದುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ ಮೇಲೆ ‘ದಿ ಹಿಂದು’ ಪತ್ರಿಕೆಯು ಇಡೀ ದೇಶಕ್ಕೆ ಮಾದರಿಯಾದ ಬಜೆಟ್ ಎಂದು ತನ್ನ ಸಂಪಾದಕಿಯದಲ್ಲಿ ಬರೆಯಿತು ಎಂದು ನೆನಪು ಮಾಡಿಕೊಂಡರು.
ನಾನು ಚಿಕ್ಕವನಿದ್ದಾಗ ಮಕ್ಕಳು ಕಾಯಿಲೆ ಬಿದ್ದರೆ ಅವರಿಗೆ ಬಡಿಸಲು ಅನ್ನವಿರುತ್ತಿರಲಿಲ್ಲ, ಬಡವರು ಅನುಕೂಲಸ್ತರ ಮನೆ ಹೋಗಿ ಮಗೂಗೆ ಉಷಾರಿಲ್ಲ ಹಿಡಿ ಅನ್ನ ಕೊಡಿ ಎಂದು ಬೇಡುತ್ತಿದದ್ದು ನನ್ನ ಮನಸ್ಸಿಗೆ ಬಹಳ ನಾಟಿತ್ತು, ಆದ್ದರಿಂದಲೇ ನಾನು ಮುಖ್ಯಮಂತ್ರಿಯಾದ ಕೂಡಲೇ ಯಾವ ಬಡವರು ಹಸಿವಿನಿಂದ ಇರಬಾರದು ಎಂದು ಒಬ್ಬ ವ್ಯಕ್ತಿಗೆ ಉಚಿತವಾಗಿ 7ಕೆ.ಜಿ. ಅಕ್ಕಿ, ಮಕ್ಕಳಿಗೆ ಕ್ಷೀರಭಾಗ್ಯ, ಹಾಸ್ಟಲ್ ವ್ಯವಸ್ಥೆ ಇಲ್ಲದ ಮಕ್ಕಳಿಗೆ ವಿದ್ಯಾಸಿರಿ, ಶೂಭಾಗ್ಯ, ಮುಂತಾದ ಯೋಜನೆಗಳನ್ನು ಜಾರಿ ಮಾಡಲು ನನ್ನ ಜೀವನದ ಅನುಭವೆ ಕಾರಣ ಎಂದರು.

ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದವರಿಗೆ 24.1 ರಷ್ಟು ಎಸ್‍ಸಿಪಿ ಮತ್ತು ಎಸ್‍ಟಿಪಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕಟ್ಟು ನಿಟ್ಟು ಕ್ರಮ ಕೈಗೊಳ್ಳಲಾಯಿತು, ಈ ಯೋಜನೆಗೆ 84ಸಾವಿರ ಕೋಟಿ ಖರ್ಜು ಮಾಡಿದೆವು.

ಇಷ್ಟೆಲ್ಲಾ ಕೆಲಸ ಮಾಡಿದರು ನಮ್ಮ ಪಕ್ಷವನ್ನು ಸೋಲಿಸಲಾಯಿತು, ಏಕೆಂದರೆ ಇತ್ತೀಚೆಗೆ ಜಾತಿ ಆಧಾರಿತ ಚುನಾವಣೆ ಮುನ್ನಲೆಗೆ ಬಂದು ಬಿಟ್ಟಿದೆ, ಈ ಕೆಟ್ಟ ವ್ಯವಸ್ಥೆ ಹೋಗ ಬೇಕು, ಏಕೆಂದರೆ ಸಮಾಜದಲ್ಲಿ ಗುರುತಿಸಿಕೊಳ್ಳಲಾಗದಂತಹ ಸಮುದಾಯಗಳಿದ್ದು ಅವುಗಳಿಗೆ ಇಂತಹ ಜಾತಿ ಆಧಾರಿತ ಚುನಾವಣೆಯಿಂದ ವಂಚಿತರಾಗುತ್ತವೆ, ಜಾತಿ ಆಧಾರಿತ ಚುನಾವಣೆಯಿಂದ ನನ್ನಂತಹವನನ್ನೆ ಸೋಲಿಸಿದರು ಎಂದು ಬೇಸರ ವ್ಯಕ್ತ ಪಡಿಸಿದರು.

5 ವರ್ಷ ಮುಖ್ಯಮಂತ್ರಿಯಾದಾಗ ಅವಕಾಶ ವಂಚಿತ ಜನರಿಗೆ ಸಾಧ್ಯವಾದ ಮಟ್ಟಿಗೆ ಅನುಕೂಲ ಮಾಡಿದ್ದೇನೆ ಎಂದ ಅವರು, ಸಭೆಯಲ್ಲಿ ಹಲವರೊಂದಿಗೆ ಸಂವಾದ ನಡೆಸಿದರು.

ಇದೇ ಸಂದರ್ಭದಲ್ಲಿ ಮಧುಗಿರಿ ತಾಲ್ಲೂಕಿನ ಗಂಗಾಧರ ಎಂಬುವವರ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಲಾಯಿತು.
ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಗ್ರಂಥ ಸಂಪಾದಕ ಕಾ. ತಾ. ಚಿಕ್ಕಣ್ಣ ಹಾಗೂ ಚಿಂತಕರಾದ ನಟರಾಜ ಭೂದಾಳು, ಮೋಹನ ಚಂದ್ರಗುತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *