ತುಮಕೂರು : ಜಿಲ್ಲೆಯಲ್ಲಿ ಸರ್ಕಾರದಿಂದ ಭೂಮಂಜೂರಾತಿಯಾದ ಜಮೀನುಗಳನ್ನು ಸಾಗುವಳಿ ಮಾಡುವ ರೈತರಿಗೆ ಎರಡು ಮೂರು ತಲೆ ಮಾರುಗಳಿಂದ ಪೋಡಿ ದುರಸ್ಥಿಯಾಗದೇ ಕ್ರಯ, ವಿಭಾಗ, ಹದ್ದುಬಸ್ತು ಕಾರ್ಯಗಳಿಗೆ ಹಾಗೂ ಹಕ್ಕು ವರ್ಗಾವಣೆಗಳಿಗೆ ಅನಾನುಕೂಲವಾಗುತ್ತಿದ್ದು, 1003 ದುರಸ್ಥಿಯಾಗಿರುವ ದರಖಾಸ್ತು ಕಡತಗಳ ಪ್ರಗತಿ ಸಾಧಿಸಿ ವಿಲೇವಾರಿ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ದರಖಾಸ್ತು ಪೋಡಿ ದುರಸ್ಥಿ ಸಂಬಂಧ ಸಾವಿರಾರು ಸಂಖ್ಯೆಯಲ್ಲಿ ರೈತರು ಕಚೇರಿಗಳಿಗೆ ಅಲೆದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ನಂತರ ಇತ್ತೀಚೆಗೆ ಸರ್ಕಾರದಿಂದ ದರಖಾಸ್ತು ಪೋಡಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಆದೇಶಿಸಲಾಗಿದೆ. ಈ ಆದೇಶದ ಮೇರೆಗೆ ನಮೂನೆ 1 ರಿಂದ 5ರವರೆಗಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಭರ್ತಿ ಮಾಡಿ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಅನುಬಂಧ-1ನ್ನು ಸೃಜಿಸಿ ಭೂದಾಖಲೆಗಳ ಇಲಾಖೆಗೆ ಪೋಡಿ ದುರಸ್ತಿಗಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತಂದಿದೆ. ಇಂತಹ ಭೂ ಮಂಜೂರಿದಾರರಿಗೆ ತಹಸೀಲ್ದಾರರು ಅನುಬಂಧ-1ರ ನಂತರ ಎಲ್ಲಾ ಭೂ ಮಂಜೂರಾತಿದಾರರಿಗೆ ನಿಯಾನುಸಾರ ಅಳತೆ ಮಾಡಿ ಹೊಸ ಸರ್ವೆ ನಂಬರು ನೀಡಿ ಅವರವರ ವಿಸ್ತೀರ್ಣಕ್ಕೆ ಪ್ರತ್ಯೇಕವಾಗಿ ಪಕ್ಕಾ ಟಿಪ್ಪಣಿ, ನಕ್ಷೆ ಆಕಾರ್‍ಬಂದ್ ದಾಖಲಾತಿಗಳನ್ನು ತಯಾರಿಸಿ ಪೋಡಿ ದುರಸ್ಥಿ ಕ್ರಮವಹಿಸಿ ಪ್ರತ್ಯೇಕ ಹೊಸ ಪಹಣಿಗಳನ್ನು ಸೃಜಿಸಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳಲ್ಲಿ ಕೇವಲ 94 ದುರಸ್ಥಿಯಾಗಿರುವ ದರಖಾಸ್ತು ಕಡತಗಳ ಪಗ್ರತಿ ಸಾಧಿಸಲಾಗಿದ್ದು, ಭೂದಾಖಲೆಗಳ ಇಲಾಖೆಯ ಅಧಿಕಾರಿ-ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ನೌಕರರಿಗೆ ಸೂಕ್ತ ತರಬೇತಿ ನೀಡಿ ಇವರುಗಳ ಸಹಕಾರದಲ್ಲಿ ಕಳೆದ ಜನವರಿ 2025 ರಿಂದ ಇದುವರೆಗೆ ಜಿಲ್ಲೆಯಲ್ಲಿ ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಇದುವರೆವಿಗೂ 1003 ದುರಸ್ಥಿಯಾಗಿರುವ ದರಖಾಸ್ತು ಕಡತಗಳ ಪ್ರಗತಿ ಸಾಧಿಸಿ ವಿಲೇವಾರಿ ಮಾಡಲಾಗಿದೆ. ಇದರಿಂದ ಜಮೀನಿಗೆ ಸರ್ವೆ ನಂಬರ್ ಸಹಿತ ಪಹಣಿ, ಬ್ಯಾಂಕ್ ಸಾಲ, ಸರ್ಕಾರದ ಸವಲತ್ತು ಹಾಗೂ ಜಮೀನನ್ನು ಪರಭಾರೆ ಮಾಡಲು ಅನುಕೂಲವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು, ವಿಶೇಷವಾಗಿ ಭೂ ಮಂಜೂರಾತಿ ಜಮೀನುಗಳ ಹಕ್ಕುದಾರರು ಹಾಗೂ ರೈತರಿಗೆ ಈ ಅಭಿಯಾನವನ್ನು ಸರಿಯಾಗಿ ಬಳಸಿಕೊಂಡು ಅಳತೆಗೆ ಸಹಕರಿಸಲು ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಕೈಗೆತ್ತಿಕೊಂಡಿರುವ 3000 ಪ್ರಕರಣಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ರೋವರ್ ಮುಖಾಂತರ ಅಳತೆ ಕೆಲಸ ನಿರ್ವಹಿಸಿ ಅತಿ ಶೀಘ್ರವಾಗಿ 10,000 ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.