ತುಮಕೂರು:ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸುಮಾರು 3500ಕ್ಕೂ ಹೆಚ್ಚು 108 ಸಿಬ್ಬಂದಿಗಳಿಗೆ ವೇತನ ಕಡಿತಗೊಳಿಸುವುದರ ಜೊತೆಗೆ,ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಮನೆ ನಿರ್ವಹಣೆಯ ಕಷ್ಟವಾಗಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಮಂಜುನಾಥ್.ಸಿ. ತಿಳಿಸಿದರು.
ಜಿಲ್ಲಾ ಪ್ರತಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಿ.ವಿ.ಕೆ.ಎಎಂಆರ್‍ಐ ಸಂಸ್ಥೆಯ ಅಡಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ 750ಕ್ಕೂ ಹೆಚ್ಚು 108 ಅಂಬ್ಯುಲೆನ್ಸ್ ಚಾಲಕರು,ಸ್ಟಾಪ್ ನರ್ಸಗಳಿಗೆ ಕಳೆದ ಡಿಸೆಂಬರ್‍ನಿಂದ ಇದುವರೆಗೂ ವೇತನ ನೀಡಿಲ್ಲ.ಹಾಲಿ ನೀಡುತ್ತಿದ್ದು ಮಾಸಿಕ 36 ಸಾವಿರ ವೇತನದಲ್ಲಿ 2023ರ ಮಾರ್ಚ್‍ನಿಂದ ನವೆಂಬರ್‍ವರೆಗಿನ ವೇತನದಲ್ಲಿ ಮಾಸಿಕ 6 ಸಾವಿರ ರೂಗಳನ್ನು ಕಡಿತಮ ಮಾಡಿ,ಮೂವತ್ತು ಸಾವಿರ ರೂಗಳಂತೆ ನೀಡಲಾಗಿದೆ.ಅಲ್ಲದೆ ಡಿಸೆಂಬರ್ 2023ರಿಂದ 2024ರ ಫೆಬ್ರವರಿವರೆಗೆ ನೀಡಬೇಕಾಗಿದ್ದ ವೇತನ ನೀಡಿಲ್ಲ ಎಂದು ದೂರಿದರು.
ಸರಕಾರ ಮತ್ತು ನಮ್ಮಗೆ ವೇತನ ನೀಡುವ ಜಿವಿಕೆ ಇಎಂಆರ್‍ಸಿ ಸಂಸ್ಥೆ ಕಳೆದ ಐದು ವರ್ಷಗಳಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ.2023ರ ಡಿಸೆಂಬರ್‍ನಿಂದ ಇದುವರೆಗೂ ವೇತನ ಬಿಡುಗಡೆಯಾಗದ ಕಾರಣ, ಮಕ್ಕಳಿಗೆ ಶಾಲಾ ಫೀ ಕಟ್ಟಲು ಸಾಧ್ಯವಾಗದೆ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಿಲ್ಲ. ಮನೆ ಬಾಡಿಗೆ,ದಿನನಿತ್ಯದ ಖರ್ಚುಗಳಿಗೆ ಹಣವಿಲ್ಲದ ಸಾಲ, ಸೋಲ ಮಾಡಿ, ಇಲ್ಲವೇ ಮನೆಯಲ್ಲಿ ವಡವೆ, ವಸ್ತ್ರ ಅಡವಿಟ್ಟು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ತುಮಕೂರು ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಮೂವತೈದು 108 ಅಂಬೆಲೆನ್ಸ್‍ಗಳಿದ್ದು, ಇವುಗಳಲ್ಲಿ ಐದಾರು ಅಂಬ್ಯುಲೆನ್ಸ್‍ಗಳು ಕೆಲಸ ಮಾಡುತ್ತಿಲ್ಲ. ಉಳಿದಂತೆ 28 ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ.ಒಂದು ದಿನಕ್ಕೆ ಕನಿಷ್ಠವೆಂದರೂ 5-6 ಟ್ರಿಫ್‍ಗಳನ್ನು ಒಂದು ವಾಹನ ಮಾಡುತ್ತದೆ.ಮೂರು ಪಾಳಿಯಲ್ಲಿ ಕೆಲಸ ಮಾಡುವ 75 ಜನ ವಾಹನ ಚಾಲಕರು, 85ಕ್ಕೂ ಹೆಚ್ಚು ಜನ ಸ್ಟಾಫ್ ನರ್ಸಗಳಿಗೆ ಕಳೆದ ಮೂರುವರೆ ತಿಂಗಳಿಂದ ವೇತನವಿಲ್ಲ. ಪರೀಕ್ಷಾ ಸಮಯದಲ್ಲಿ ಮಕ್ಕಳ ಶಾಲಾ ಶುಲ್ಕ ಕಟ್ಟಿಲ್ಲ ಅಂತ ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ವಿಧಿಯಿಲ್ಲ ಶಾಲಾ ಅಡಳಿತ ಮಂಡಳಿ ಕೈಕಾಲು ಹಿಡಿದು ಪರೀಕ್ಷೆ ಬರಯಲು ಅನುಮತಿ ಪಡೆಯಲಾಗಿದೆ.ಮನೆ ಬಾಡಿಗೆ ಕಟ್ಟಿಲ್ಲ, ದಿನಸಿ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸರಕಾರ ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಬಾಕಿ ಇರಿಸಿಕೊಂಡಿರುವ ವೇತನ ಬಿಡುಗಡೆ ಮಾಡಬೇಕು.ಮುಂದಿನ 10 ದಿನಗಳ ಒಳಗೆ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಮುಷ್ಕರ ಅನಿವಾರ್ಯ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷರಾದ ಗೋವಿಂದರಾಜು ಮಾತನಾಡಿದರು.