ತುಮಕೂರು : 14ನೇ ರಾಷ್ಟ್ರೀಯ ಮತದಾರರ ದಿನ-2024 ದಿನಾಚರಣೆಯನ್ನು ಜನವರಿ 25, 2024ರಂದು ಬೆಳಿಗ್ಗೆ 10 ಗಂಟೆಗೆ ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಆಚರಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತುಮಕೂರು ನಗರ/ ಗ್ರಾಮಾಂತರ ಮತದಾರರ ನೋಂದಣಾಧಿಕಾರಿಗಳಾದ ತುಮಕೂರು ಮಹಾನಗರಪಾಲಿಕೆ ಆಯುಕ್ತರು ಮತ್ತು ತುಮಕೂರು ಉಪವಿಭಾಗದ ಉಪವಿಭಾಗಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಸೂಚಿಸಿದರು.
14ನೇ ರಾಷ್ಟ್ರೀಯ ಮತದಾರರ ದಿನ-2024ರ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಗೌರವಾನ್ವಿತ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ಮತ್ತು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಮತ್ತು ವೇದಿಕೆ, ಆಸನ ವ್ಯವಸ್ಥೆ, ಬ್ಯಾನರ್ ಅಳವಡಿಕೆ, ಮೈಕ್‍ಸೆಟ್, ವಿಡಿಯೋಗ್ರಫಿ-ಫೋಟೋಗ್ರಫಿ ಇತರೆ ಅಗತ್ಯ ಶಿಷ್ಟಾಚಾರ ವ್ಯವಸ್ಥೆಯನ್ನು ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.
ಅಂದು ಎಂಪ್ರೆಸ್ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಎಎಲ್‍ಸಿ (ಎಲೆಕ್ಟರೋಲ್ ಎಲೆಕ್ಟ್ರಿಸಿಟಿ ಕ್ಲಬ್) ಮತ್ತು ಎನ್‍ಸಿಸಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಮಹಾನಗರಪಾಲಿಕೆ ಕಚೇರಿ/ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಿಂದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಜಾಥಾ ನಡೆಸುವಂತೆ ಸಂಬಂಧ ಕ್ರಮ ಕೈಗೊಳ್ಳುವಂತೆ ಮತ್ತು ಜಾಥಾ ಸಮಯದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಬ್ಯಾನರ್, ಪೋಸ್ಟರ್‍ಗಳನ್ನು ಪ್ರದರ್ಶಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಯುವ ಮತದಾರರಿಗೆ ಎಪಿಕ್ ಕಾರ್ಡ್‍ಗಳನ್ನು ವಿತರಿಸಲು ಅವಕಾಶ ಕಲ್ಪಿಸಿದಲ್ಲಿ ಯುವ ಮತದಾರರಾಗಿ ನೋಂದಣಿಯಾಗಿರುವ 18, 19 ವರ್ಷದ ಮತದಾರರಿಗೆ ಗಣ್ಯರಿಂದ ಎಪಿಕ್ ಕಾರ್ಡ್‍ಗಳನ್ನು ವಿತರಿಸುವ ವ್ಯವಸ್ಥೆ ಮಾಡುವುದು ಮತ್ತು ಹೊಸದಾಗಿ ನೋಂದಣಿಯಾಗಿರುವ ವಿಕಲಚೇತನ ಮತದಾರರಿಗೆ ಹಕ್ಕಿಪಿಕ್ಕಿ ಮತ್ತು ಬುಡಕಟ್ಟು ಮತದಾರರಿಗೂ ಸಹ ಎಪಿಕ್ ಕಾರ್ಡ್‍ಗಳನ್ನು /ಬ್ರೈಲ್ ಎಪಿಕ್ ಕಾರ್ಡ್‍ಗಳನ್ನು ವಿತರಿಸುವ ವ್ಯವಸ್ಥೆ ಮಡುವಂತೆ ಸೂಚಿಸಿದರು.
ಇದೇ ರೀತಿ ತಾಲ್ಲೂಕು ಮಟ್ಟದಲ್ಲಿ ಸಂಬಂಧಪಟ್ಟ ತಹಶೀಲ್ದಾರ್, ಇಓ, ಬಿಇಓ ಹಾಗೂ ಇತರೆ ಇಲಾಖಾ ಮುಖ್ಯಸ್ಥರುಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಮತಗಟ್ಟೆ ಮಟ್ಟದಲ್ಲಿ ಬಿಎಲ್‍ಓಗಳು ರಾಷ್ಟ್ರೀಯ ಮತದಾರರ ದಿನ ಆಚರಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.