ತುಮಕೂರು : ಜಿಲ್ಲೆಯ 10 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರವು ಘೋಷಿಸಿದ್ದು, ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅರ್ಹ ಪ್ರತಿ ರೈತರಿಗೆ ಗರಿಷ್ಟ ರೂ. 2,000 ಗಳನ್ನು ರಾಜ್ಯ ಮಟ್ಟದಲ್ಲಿ ನೇರವಾಗಿ ರೈತರಿಗೆ ಪಾವತಿಸಲು ಸರ್ಕಾರವು ಆದೇಶಿಸಿದೆ. ಬರಪರಿಸ್ಥಿತಿ ನಿಭಾಯಿಸಲು ಕುಡಿಯುವ ನೀರು ಮತ್ತು ಜಾನುವಾರುಗಳ ಮೇವು ಪೂರೈಕೆಗೆ ಜಿಲ್ಲೆಗೆ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿರುತ್ತದೆ. ಈ ಪೈಕಿ 1.75ಕೋಟಿ ರೂ.ಗಳ ಅನುದಾನವನ್ನು ತುರ್ತು ಸಂದರ್ಭದಲ್ಲಿ ಅಗತ್ಯ ಪರಿಹಾರ ಕೈಗೊಳ್ಳಲು ತಾಲ್ಲೂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಪಶುಪಾಲಕರು ಮತ್ತು ರೈತರಿಗೆ ಪಶುಪಾಲನಾ ಇಲಾಖೆ ವತಿಯಿಂದ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಗೆ 3.04ಕೋಟಿ ವೆಚ್ಚದಲ್ಲಿ 1,08,401 ವಿವಿಧ ತಳಿಯ ಮೇವಿನ ಬೀಜದ ಮಿನಿ ಕಿಟ್‍ಗಳು ಸರಬರಾಜಾಗಿದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತವಾಗಿ ವಿತರಿಸಿ ಮೇವು ಉತ್ಪಾದನೆ ಹೆಚ್ಚಿಸಲು ಕ್ರಮವಹಿಸಲಾಗಿರುತ್ತದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗ್ರಾಮೀಣ ರಸ್ತೆ, ಸೇತುವೆ ಅಭಿವೃದ್ಧಿ ಮತ್ತು ನಿರ್ವಹಣೆ, ಕೆರೆ ನಿರ್ವಹಣೆ, ಇಲಾಖೆಗಳ ಕಟ್ಟಡ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಸದ್ಯ ಈ ಇಲಾಖೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ಒಟ್ಟು 5,446 ಲಕ್ಷಗಳಲ್ಲಿ ಒಟ್ಟು 576 ಕಾಮಗಾರಿಗಳು ಅನುಮೋದನೆಯಾಗಿದ್ದು, ಈಗಾಗಲೇ 388 ಕಾಮಗಾರಿಗಳು ಮುಗಿದಿದ್ದು, 138 ಕಾಮಗಾರಿಗಳು ಪ್ರಗತಿಯಲ್ಲಿವೆ.
ತುಮಕೂರು ಶೈಕ್ಷಣಿಕ ನಗರಿಯಾಗಿದು, ಇಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಅದರಂತೆ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರ್ಕಾರ ಬದ್ಧವಾಗಿದ್ದು, ಸರ್ಕಾರದ ವತಿಯಿಂದ ಸರ್ಕಾರಿ ಶಾಲಾ ಕಾಲೇಜುಗಳನ್ನು ನಿರ್ಮಾಣ ಮತ್ತು ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿವೇಕಾ ಶಾಲಾ ಕೊಠಡಿಗಳ ನಿರ್ಮಾಣ, ಸರ್ಕಾರಿ ಶಾಲೆಗಳ ತುರ್ತು ಕೊಠಡಿಗಳ ದುರಸ್ತಿ, ಅಂಗನವಾಡಿ ಕಟ್ಟಡ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ 26 ಜನವರಿ 1950 ಭಾರತೀಯರಾದ ನಾವೆಲ್ಲರೂ ಅತ್ಯಂತ ಹೆಮ್ಮೆ ಪಡುವಂತಹ ದಿನ. ಭಾರತ ಸರ್ವತಂತ್ರ ಸ್ವತಂತ್ರವಾದ ದಿನ. ಭಾರತೀಯರ ಸ್ವಾತಂತ್ರದ ಕನಸನ್ನು ನನಸಾಗಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಭಾರತೀಯರೆಲ್ಲರಿಗೂ ಸರ್ವಸಮ್ಮತವಾಗುವಂತೆ ರೂಪಿಸಿ, ಸಂವಿಧಾನದ ರೂಪದಲ್ಲಿ ಜಾರಿಗೊಳಿಸಿದ ದಿನವಾಗಿದೆ. ಉತ್ತಮ ಆದರ್ಶಗಳು, ಮೌಲ್ಯಗಳನ್ನು ಹೊಂದಿರುವ ಒಂದು ಬೃಹತ್ ಸಂವಿಧಾನವನ್ನು ಅಂಗೀಕರಿಸಿ ಸ್ವತಂತ್ರ್ಯ ದೇಶವಾಗಿ ಭಾರತವು ರೂಪುಗೊಂಡಿದೆ ಎಂದರು.
.
ಕರ್ನಾಟಕ ರಾಜ್ಯ ಘನ ಸರ್ಕಾರದ ಆದೇಶದಂತೆ ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರಗಳೊಂದಿಗೆ ಸಂವಿಧಾನದ ಮಹತ್ವ, ಆಶಯ ಮತ್ತು ಸಮಾನತೆ, ತತ್ವಗಳ ಬಗ್ಗೆ ಸಮಾಜದ ಸರ್ವರಿಗೂ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ನಗರಸಭೆ-ಪುರಸಭೆ-ಪಟ್ಟಣ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲಾ 330 ಗ್ರಾಮಪಂಚಾಯತಿಗಳಲ್ಲಿ ಇಂದಿನಿಂದ ಫೆಬ್ರವರಿ 23ರವರೆಗೆ ಸಂಚರಿಸಲಿದೆ. ಈ ಅವಿಸ್ಮರಣೀಯ ಜಾಥಾಕ್ಕೆ ಇಂದು ತುಮಕೂರು ಜಿಲ್ಲೆಯಲ್ಲಿ ತಾವು ಚಾಲನೆ ನೀಡಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ವಿಶ್ವಶ್ರೇಷ್ಠ ಭಾರತ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ, ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ..ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.