ತುಮಕೂರು : ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಅಮಾನಿಕೆರೆ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ನವೆಂಬರ್ 29 ಮತ್ತು 30ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನುಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ ಯೋಜನೆ ಮಾಡಲು ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಸಮ್ಮೇಳನವನ್ನು ಜಿಲ್ಲೆಯ ಸಾಹಿತ್ಯದ ಹಬ್ಬದಂತೆ ಆಚರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಮುಖ ವೃತ್ತಗಳಾದ ಬಿ.ಜಿ.ಎಸ್ ವೃತ್ತ, ಡಾ: ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ಛತ್ರದ ವೃತ್ತ, ಗುಂಚಿ ವೃತ್ತ, ಬಟವಾಡಿ ವೃತ್ತ, ಶೆಟ್ಟಿಹಳ್ಳಿ ವೃತ್ತ, ಕೋಡಿಬಸವಣ್ಣ ವೃತ್ತ, ಕೆ. ಲಕ್ಕಪ್ಪ ವೃತ್ತ, ಚರ್ಚ್ ವೃತ್ತ, ಕ್ಯಾತ್ಸಂದ್ರ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ವೃತ್ತಗಳಲ್ಲಿ ಕನ್ನಡದ ಬಾವುಟ, ಸಮ್ಮೇಳನದ ಪ್ಲೆಕ್ಸ್, ಕನ್ನಡದ ಕವಿಗಳ ಭಾವಚಿತ್ರಗಳನ್ನು ಪ್ರದರ್ಶಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಆಗಮಿಸುವುದರಿಂದ ಜನರಿಗೆ ಶುದ್ಧ ಕುಡಿಯುವ ನೀರು, ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಬೇಕು. ಸಮ್ಮೇಳನದ ಭಾಗವಾಗಿ ಬಿ.ಜಿ.ಎಸ್ ವೃತ್ತದಿಂದ ಹಮ್ಮಿಕೊಂಡಿರುವ ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕಲಾ ತಂಡಗಳನ್ನು ಕರೆ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ನಗರದ ಶಾಲಾ-ಕಾಲೇಜುಗಳ ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸುರೇಶ್ ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.