25 ವರ್ಷಗಳ ಅಮರ ಪ್ರೇಮ, ಮಂತ್ರ ಮಾಂಗಲ್ಯದ ಮೂಲಕ ಅಂತ್ಯ

ತುಮಕೂರು : ಅದು ಅಂತಿಂತಹ ಮದುವೆಯಲ್ಲ, ಆ ಮದುವೆ ನಾ ಕಂಡ ಶ್ರೇಷ್ಠ ಪ್ರೇಮ ಕಥನದ ಮದುವೆ, ಹಿಂದೆ ಕಂಡಿಲ್ಲ, ಮುಂದೆ ಕಾಣುತ್ತೇವೋ ಇಲ್ಲವೋ ಗೊತ್ತಿಲ್ಲ.

ಆ ಇಬ್ಬರೂ ಈ ಜಗತ್ತಿನ ಪ್ರೇಮಿಗಳು. ನಾವು ಕೇಳಿದ ಪ್ರೇಮ ಕಥೆಗಳೆಲ್ಲಾ ಬಹುತೇಕ ಪ್ರೇಮಿಸಿ ಅಮರರಾದರೇ ವಿನಃ ಅವರು ವಿವಾಹವಾಗಲಿಲ್ಲ, ಆದರೆ ಈ ಜೋಡಿ ಸತತ 25 ವರ್ಷಗಳ ಕಾಲ ತಮ್ಮ ಪ್ರೇಮವನ್ನು ಕಾಪಾಡಿಕೊಂಡು, ಸುಮಾರು 54ನೇ ವರ್ಷದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು ಎಂದರೆ ಪಕಾರನೇ ನಕ್ಕಾರು, ನಾನು ಇಂತಹ ಮದುವೆಗೆ ಹೋಗುತ್ತಿದ್ದೇನೆ ಎಂದಾಗ ಕೆಲವರು ಸುಳ್ಳು ಎಂದರೆ, ಮತ್ತೆ ಕೆಲವರು ಮೂಗು ಮುರಿದರು.

ನಿಜಕ್ಕೂ ಈ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹವಾಗಿದ್ದು ನನ್ನ ಜೀವಮಾನದಲ್ಲಿ ಕಂಡ ಶ್ರೇಷ್ಠ ಪ್ರೇಮ ಮತ್ತು ಪ್ರೀತಿಯ ಮದುವೆ, ಪ್ರೇಮ ಸೋಲುತ್ತದೆ, ಪ್ರೇಮಿಸುವವರು ಮನೆಯವರ ಒತ್ತಡಕ್ಕೆ ಬೇರೆ ಬೇರೆಯಾಗುತ್ತಾರೆ ಎಂಬುದನ್ನು ಈ ಜೋಡಿಗಳು ದೀರ್ಘ ಕಾಲ ಕಾಪಾಡಿಕೊಂಡು ಬಂದು ಕೊನೆಗೂ ಪ್ರೇಮ ವಿವಾಹವಾಗಿದ್ದು ಎಂತಹವರನ್ನೂ ಸೆಳೆಯುವಂತಹವುದು.

ಅವರಿಬ್ಬರೂ ತುಂಬಾ ಹೋರಾಟಗಾರರೂ, ಹುಟ್ಟು ಹೋರಾಟದಲ್ಲಿ ಬೆಳೆದವರು, ಇಬ್ಬರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಉತ್ತುಂಗದಲ್ಲಿದ್ದಾಗ ಬಿ.ಕೆ.ಸುಂದರೇಶ್ ಅವರ ಜೊತೆ ಹಲವಾರು ಚಳುವಳಿಯಲ್ಲಿ ಭಾಗವಹಿಸಿದವರು, ಚಳುವಳಿಗಳನ್ನು ಮುಂಚೂಳಿಯಲ್ಲಿ ನಿಂತು ಕಟ್ಟಿದವರು.

ಇವರಿಬ್ಬರೂ ಮೈಸೂರಿನಲ್ಲಿರುವ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯಲ್ಲಿ ಪಂಚಾಯತ್ ರಾಜ್ ನೌಕರರು, ಅಧಿಕಾರಿಗಳು ಮತ್ತು ಜನಪ್ರತಿನಿಧೀಗಳಿಗೆ ತರಬೇತಿ ಸಂಪನ್ಮೂಲ ಮಾಸ್ಟರ್ ಟ್ರೇನರ್ಸ್ ಆಗಿ ತರಬೇತಿ ನೀಡುವವರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮಪಂಚಾಯಿತಿ ನೌಕರರಿಗೆ ಮತ್ತು ಪಂಚಾಯಿತಿ ಸದಸ್ಯರುಗಳಿಗೆ ತರಬೇತಿ ನೀಡುವ ತರಬೇತಿದಾರರಾಗಿ ಇಡೀ ರಾಜ್ಯವನ್ನು ಸುತ್ತಿದ ಇವರು, ಸುಮಾರು 20ನೇ ವಯಸ್ಸಿಗೇನೆ ಸಿಪಿಐ(ಎಂ) ಚಳುವಳಿಗೆ ದುಮಿಕಿದವರು, ಇಬ್ಬರೂ ಪ್ರಜ್ಞಾವಂತರು, ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಂಡವರು, ಇವರಂತೆ ಹಲವರನ್ನು ಚಳುವಳಿಗಳ ಮೂಲಕ ಪ್ರಗತಿಪರರನ್ನಾಗಿ ಮಾಡಿದರು, ರೈತ ಸಂಘದಲ್ಲಿ ಹೋರಾಟ ಮತ್ತು ಚಳುವಳಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾಗವಹಿಸಿದವರು. ಸುಮಾರು 90ರ ದಶಕದಲ್ಲಿ ಬಿ.ಕೆ.ಸುಂದರೇಶ್ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿ ಕಾರ್ಯನಿರ್ವಹಿಸಿದವರು.

ಜೊತೆಗೆ ಪ್ರಗತಿಪರ ಸಂಘಟನೆಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧ್ಯಯನ ಶಿಬಿರ, ಪ್ರಗತಿಪರ ಚಳುವಳಿಗಳು, ಪ್ರಗತಿಪರರ ಕಾರ್ಯಕ್ರಮದಲ್ಲಿ ಜೊತೆ-ಜೊತೆಯಲ್ಲಿ ಕೆಲಸ ನಿರ್ವಹಿಸಿದವರು. ಭಾರತೀಯ ವಿಜ್ಞಾನ ಪರಿಷತ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಚಳುವಳಿಗಳ ಕಾವು ಕಡಿಮೆಯಾದಾಗ ಮೋಹನ್‍ಕುಮಾರ್ ಅವರು ನವಕರ್ನಾಟಕ ಪಬ್ಲಿಕೇಷನ್‍ನಲ್ಲಿ ಕಾರ್ಯ ನಿರ್ವಹಿಸಿದ ನಂತರ, ಹೆಚ್‍ಎಎಲ್‍ನಲ್ಲಿ ಕಾರ್ಮಿಕರಾಗಿ ಕೆಲ ವರ್ಷ ಕೆಲಸ ನಿರ್ವಹಿಸಿದರು.

2004-05ರಲ್ಲಿ ಮೈಸೂರಿನಲ್ಲಿನ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯಲ್ಲಿ ಈ ಇಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಆಯ್ಕೆಯಾದವರು. ಇಂದಿಗೂ ತರಬೇತಿ ನೀಡುತ್ತಿದ್ದಾರೆ. ಪಂಚಾಯತ್ ರಾಜ್ ನೌಕರರು, ಜನಪ್ರತಿನಿಧಿಗಳು ಇವರಿಬ್ಬರೂ ಸತಿ-ಪತಿಗಳಿರಬಹುದು ಎಂದುಕೊಂಡಿದ್ದರು, ಆದರೆ ಇವರಿಗೆ ಇವರುಗಳ ಮನೆಯವರು ಎಲ್ಲರಿಗೂ ತಡೆಗೋಡೆಯಾದಂತೆ ಒಂದು ದೊಡ್ಡ ತಡೆಗೋಡೆಯಾಗಿ ಇವರಿಬ್ಬರ ಮದುವೆ ತಡೆದರೇ ವಿನಃ ಪ್ರೇಮವನ್ನು ತಡೆಯಲು ಸಾಧ್ಯವಾಗಲಿಲ್ಲ.

ಈ ಇಬ್ಬರ ತಾಯಂದಿರಿಗೆ ವಯಸ್ಸಾಯಿತು, ಇವರ ಪ್ರೇಮ ಮಾತ್ರ ತಾಜ್ ಮಹಲ್‍ಗಿಂತ ಗಟ್ಟಿಯಾಗಿ ನಿಂತಿದ್ದನ್ನು ಕಂಡ ಈ ಹಿರಿಯ ಜೀವಿಗಳು, ಹಿಂದೆ ವಿರೋಧಿಸಿದ್ದರೂ ಕೊನೆಗಾಲದಲ್ಲಿ ಮಕ್ಕಳ ಮದುವೆಯನ್ನಾದರೂ ನೋಡೋಣ ಎಂದು ಈ ಇಬ್ಬರೂ ನಮ್ಮ ಕಣ್ಣ ಮುಂದೆಯೇ ಮದುವೆಯಾಗಲಿ, ಸತ್ತ ಮೇಲೇಯಾದರೂ ಮದುವೆಯಾಗುವವರೇ ಎಂದು ತಿಳಿದು ಒಪ್ಪಿಗೆ ಕೊಟ್ಟರು.

ಈ 25 ವರ್ಷದ ಅಮರ ಪ್ರೇಮಿಗಳು ಯಾರಿರಬಹುದು ಎಂಬುದು ನಿಮಗೆ ತೀವ್ರ ಕುತೂಹಲವಿರಬಹುದು. ಅವರೇ ಗುಬ್ಬಿ ತಾಲ್ಲೂಕಿನ ಮೋಹನ್‍ಕುಮಾರ್ ಮತ್ತು ಅಜ್ಜಂಪುರದ ಸುಧಾ ಅವರುಗಳು.

ಈಗ ವಾರದ ಹಿಂದೆ ಮೋಹನ್‍ಕುಮಾರ್ ಅವರು ಪೋನ್ ಮಾಡಿ ನಿಮ್ಮ ಆಸೆ ಈಡೇರಿಸುತ್ತಿದ್ದೇವೆ ಅಂದರು, ಅದೇನು ಅಂದಾಗ ನಾನು ಸುಧಾ 2024ರ ಮೇ 12ರಂದು ಮದುವೆಯಾಗುತ್ತಿರುವುದಾಗಿ ತಿಳಿಸಿ ಖಂಡಿತ ಬರಲೇಬೇಕೆಂದರು.

ಇವರು ಇಬ್ಬರೂ ಸುಮಾರು 25 ವರ್ಷಗಳಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಪ್ರೇಮಿಗಳಾಗಿದ್ದವರು, ಮನೆಯವರ ವಿರೋಧವಿದ್ದುದರಿಂದ ಇವರುಗಳ ಮದುವೆಯೂ ಸುಮಾರು ಕಾಲು ಶತಮಾನದಷ್ಟು ದೂರ ಪ್ರೇಮಿಗಳಾಗಿ ಪ್ರೇಮಕ್ಕೆ, ಪ್ರೇಮ ವಿವಾಹಕ್ಕೆ ಒಂದು ಸಾರ್ಥಕತೆಯನ್ನು ತಂದು ಕೊಟ್ಟವರು.

ಇವರು ಜಾತಕ ನೋಡಲಿಲ್ಲ,‌ ಪುರೋಹಿತರು ಮಂತ್ರ ಹೇಳಲಿಲ್ಲ, ಮಾನವ ಪ್ರೀತಿ, ಸಮಾಜದ ಒಳಿತು ಮತ್ತು ಮೈತ್ರಿ, ಕರುಣೆ, ಪ್ರೀತಿಯನ್ನಿಟ್ಟುಕೊಂಡು ಈ ಭೂಮಿಯೇ ನಮ್ಮ ಬದುಕಿನ ದೇವರು, ಗಾಳಿ,ಬೆಳಕು ನಮ್ಮ ಉಸಿರು ಎಂಬಂತೆ ಮಂತ್ರ ಮಾಂಗಲ್ಯ ಮೂಲಕ ಜಗಕ್ಕೆ ಸರಳತೆ ಮತ್ತು ಮನುಷ್ಯ ಪ್ರೀತಿಯನ್ನು ಸಾರಿದರು, ಇಲ್ಲಿ ಜಾತಿ, ಧರ್ಮ ಮುಖ್ಯವಲ್ಲ ಮನುಜ ಮತ ಜಗದ ಪ್ರೇಮ, ಸಹಬಾಳ್ವೆ ಮುಖ್ಯ ಎಂಬುದನ್ನು ಸಾರಿದರು.

25 ವರ್ಷಗಳ ಕಾಲ ಇವರು ಪ್ರೇಮಿಗಳಾಗಿ ಮುಂದುವರೆಯಲು ಇರುವ ತಾಳ್ಮೆಯನ್ನು ನಾವು ಮೆಚ್ಚಬೇಕು, ಹುಡುಗಿಯ ಮನೆಯವರು ಒಪ್ಪಲಿಲ್ಲ ಅಂತ ಕೊಲೆ ಮಾಡುವುದು, ಆಸಿಡ್ ಹಾಕುವುದು, ಓಡಿ ಹೋಗಿ ಪ್ರೇಮ ವಿವಾಹವಾಗಿ ಸಂಕಷ್ಟಕ್ಕೆ ಸಿಲುಕಿ ಬೇರೆ ಬೇರೆಯಾಗುವುದು ಮಾಡುವವರು ಇವರ ಅಮರ ಪ್ರೇಮವನ್ನು ನೋಡಿ ಕಲಿಯ ಬೇಕಿರುವುದು ಸಾಕಷ್ಠಿದೆ.

ಇಷ್ಟೇ ಅಲ್ಲದೆ ಈ ಇಬ್ಬರೂ ಕುವೆಂಪುರವರ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ಮದುವೆಯಾಗಿದ್ದು ಆಧುನಿಕ ಕಾಲದಲ್ಲಿ ಮಾದರಿಯಾಗಿತ್ತು, ಇಂದಿನ ಅದ್ದೂರಿ ಮದುವೆಗಳಿಗೆ ಪ್ರೀ ವೆಡ್ಡಿಂಗ್ ಶೂಟ್, ಅರಮನೆಯಂತಹ ಛತ್ರಗಳಲ್ಲಿ ಮದುವೆ, ಆರತಕ್ಷತೆ ನೋಡಿದಾಗ ದುಂದು ವೆಚ್ಚ ಮಾಡಿ ಕೆಲವರನ್ನು ಸಾಲಕ್ಕೆ ದೂಡುವುದು, ಮತ್ತೆ ಕೆಲವರು ನಮ್ಮಲ್ಲಿ ಹಣವಿದೆ ಎಂಬುದನ್ನು ತೋರಿಸಲೇ ಇಂತಹ ಮದುವೆಗಳನ್ನು ಮಾಡುವುದು ನಿಜಕ್ಕೂ ಒಂದು ರೀತಿ ನಾಚಿಕೆ ಮತ್ತು ಸಮ ಸಮಾಜ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಮದುವೆಗಳಾಗಿವೆ.

ಇಂತಹ ಕಾಲದಲ್ಲಿ ಸುಧಾ ಮತ್ತು ಮೋಹನ್‍ಕುಮಾರ್ ಅವರುಗಳು ತರೀಕೆರೆ ಸಮೀಪದ ಅಮೃತಾಪುರದ ಅಮೃತೇಶ್ವರ ಸ್ವಾಮಿ ದೇವಾಲಯದ ಮರಗಳ ಸಾಲಿನ ನೆರಳಲ್ಲಿ ಮಂತ್ರಮಾಂಗಲ್ಯದ ಮದುವೆ ನಿಜಕ್ಕೂ ಮೆಚ್ಚುವಂತಹವುದು ಏಕೆಂದರೆ ಅದು 25 ವರ್ಷಗಳ ಪ್ರೀತಿಯ ಇಬ್ಬರೂ ಮನೆಯವರು ಒಪ್ಪಿ ಮದುವೆಯನ್ನು 54ನೇ ವಯಸ್ಸಿನಲ್ಲಿ ಅಮರಪೇಮಿಗಳಾಗಿ ಈ ಜಗಕ್ಕೆ ಪ್ರೇಮ ಸೋಲದು ಎಂಬುದನ್ನು ತೋರಿಸಿ ಕೊಟ್ಟರು.

ಮೋಹನ್‍ಕುಮಾರ್ ಅವರು ಇಂತಹ ಕೆಲಸ ಬರುವುದಿಲ್ಲ ಎಂದು ಹೇಳುವುದಿಲ್ಲ, ಅವರೊಂದು ತರಹ “ಆಡು ಮುಟ್ಟದ ಸೊಪ್ಪಿಲ್ಲ, ಮೋಹನ್‍ಕುಮಾರ್ ಮಾಡದ ಕೆಲಸವಿಲ್ಲ” ಬಹುತೇಕ ಎಲ್ಲಾ ಕೆಲಸವನ್ನು ಕಲಿತಿದ್ದಾರೆ, ಅವರ ಹೊಲ, ತೋಟಕ್ಕೆ ಬೇಕಾದ ಸಾಮಾಗ್ರಗಳನ್ನು ತಮ್ಮದೇ ಆದ 800 ಮಾರುತಿ ಕಾರಿಗೆ ಟ್ರೇಲರ್ ಅಳವಡಿಸಿ ಹಾಕಿಕೊಂಡು ಎಲ್ಲಿಗೆ ಬೇಕಾದರೂ ಹೋಗಿ ಯಾವ ತರಹದ ಡಿಸೈನ್ ವೆಲ್ಡಿಂಗ್ ಸಹ ಮಾಡಬಲ್ಲರು, ಮನೆಯನ್ನೂ ಕಟ್ಟಬಲ್ಲರು, ಅವರ ಮನೆಯನ್ನು ಅವರೇ ಪ್ಲಾನ್ ಹಾಕಿ ಅವರೇ ಸಿಮೆಂಟ್ ಚಪ್ಪಡಿಗಳನ್ನು ತಯಾರಿ ಮಾಡಿ, ಅವರೇ ಡಿಸೈನ್ ಮಾಡಿ ತುಂಬಾ ಕಡಿಮೆ ವೆಚ್ಚದಲ್ಲಿ ಸುಂದರ ಮನೆಯನ್ನು ಕಟ್ಟಿದ್ದಾರೆ.

ಇವರ ಬೈಕ್, ಕಾರು ಕೆಟ್ಟರೆ ಅವರೇ ರಿಪೇರಿ ಮಾಡುತ್ತಾರೆ, ಎಲೆಕ್ಟ್ರಿಕಲ್ ಕೆಲಸ ಮತ್ತು ಎಲೆಕ್ಟ್ರಾನಿಕ್ಸ್ ಅಂದರೆ ಲಾಪ್ ಟ್ಯಾಪ್, ಕಂಪ್ಯೂಟರ್ ರಿಪೇರಿ ಸಹ ಮಾಡಬಲ್ಲರು, ತೋಟದಲ್ಲಿ ಆಧುನಿಕ ಕೃಷಿ ಬೆಳೆ, ಮಾವು, ತೆಂಗು, ಅಡಿಕೆ ಜೊತೆಗೆ ಮೀನು ಕೃಷಿಯನ್ನೂ ಮಾಡುತ್ತಿದ್ದಾರೆ.

ಒಂದೆರಡು ವರ್ಷ ಮೈಸೂರು ದಸರದ ಸ್ಥಬ್ದ ಚಿತ್ರಗಳ (ಟಾಬ್ಲೋಗಳನ್ನು)ನ್ನು ಸಹ ಮಾಡಿದ್ದಾರೆ, ಕೆಲ ಕಾಲ ಪತ್ರಕರ್ತರಾಗಿಯೂ ಕೆಲ ಮಾಡಿದ್ದಾರೆ, ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ತಮ್ಮ ಕಾರಿನಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ತಾವೇ ಬೀದಿ ಬದಿಯಲ್ಲಿ ನಿಂತು ಮಾರಿದ್ದಾರೆ, ಇವರು ಏನು ಕೆಲಸ ಮಾಡಿಲ್ಲ, ಮಾಡುತ್ತಿಲ್ಲ ಎಂಬುದನ್ನು ಒಮ್ಮೆ ಕೇಳಬೇಕು, ಹಾಗೆ ಕೇಳಿದ ಕೂಡಲೇ ಪಕಾರನೇ ನಗುವ ಮೋಹನ್‍ಕುಮಾರ್ ಅವರು ಮನಸ್ಸು ಮತ್ತು ಹೃದಯದಲ್ಲಿ ಯಾವ ಅಳುಕು, ಕಲ್ಮಶವಿಲ್ಲದೆ ಅದ್ಯಾವ ದೊಡ್ಡ ಸಾಹಸ, ಕೆಲಸ ಅನ್ನುತ್ತಾರೆ, ಈ ಕಲ್ಮಶವಿಲ್ಲದ, ಸದಾ ಎಂತಹ ಸಂದರ್ಭವಿದ್ದರೂ ಎಂತಹ ಕಠಿಣವಾದ ಸಮಸ್ಯೆ ಇದ್ದರೂ ನಕ್ಕು ನೋಡೋಣ ಅದನ್ನು Solve ಮಾಡಬಹುದಾ ಎಂದು ಮತ್ತೊಮ್ಮೆ ನಗುತ್ತಾರೆ.

ಇಂತಹ ನಗುವಿರುವುದರಿಂದಲೇ ಅವರು ಯಾವುದಕ್ಕೂ ತಲೆ ಬಿಸಿ ಮಾಡಿಕೊಳ್ಳದೆ, LOVE ನ್ನು (ಪ್ರೀತಿ) 25ವರ್ಷಗಳ ಕಾಲ ತಮ್ಮ ಹೃದಯ ಸಾಮ್ರಾಜ್ಯದಲ್ಲಿ ಕಾಪಾಡಿಕೊಂಡು ಬಂದು ಅಮರಪ್ರೇಮಕ್ಕೆ ಸುಂದರವಾದ ಅರ್ಥ ಕೊಟ್ಟ ಮೋಹನ್‍ಕುಮಾರ್ ಮತ್ತು ಸುಧಾ ಅವರ ಜೀವನ ತಂಗಾಳಿಯಂತೆ ಸೂರ್ಯ-ಚಂದ್ರರಂತೆ ಬೆಳಗಲಿಯೆಂದು ಅವರ ಗೆಳೆಯರು, ಹಿತೈಶಿಗಳ ಹಾರೈಕೆಗಳು.

-ವೆಂಕಟಾಚಲ.ಹೆಚ್.ವಿ.

One thought on “25 ವರ್ಷಗಳ ಅಮರ ಪ್ರೇಮ, ಮಂತ್ರ ಮಾಂಗಲ್ಯದ ಮೂಲಕ ಅಂತ್ಯ

  1. ಸುಧ ನನ್ನ ತಂಗಿ ಸುನೀತಾಳ ಗೆಳತಿ ಆದುದರಿಂದ ಒಮ್ಮೆ ನಾನು ಹಾಗೂ ನನ್ನ ಮಡದಿ ಅಜ್ಜಮ್ ಪುರದಲ್ಲಿರುವ ಸುಧ ಅವರ ನಿವಾಸಕ್ಕೆ ಹೋಗಿದ್ದವು, ಹಾಗೆ ಅವರ ತಾಯಿಯ ಪರಿಚಯವೂ ಆಯಿತು… ಆಗಲೇ ನನಗೇ ತಿಳಿದುಬಂದದ್ದು ಆಕೆ ಮದುವೆ ಆಗದೆ ಇರೋ ಕಾರಣ ಏನು ಅಂತ… ಆಕೆಯ ತಾಯಿ ವಯ್ಯಸ್ಸಾದ ವೃದ್ದೆ ಹಾಗೂ ಅನಾರೋಗ್ಯದಿಂದ್ದ ಬಳಲುತ್ತಿದ್ದ ಕಾರಣ ಅವರನ್ನು ನೋಡಿಕೊಳ್ಳುವ ಸಲುವಾಗಿ ಮೋಹನ್ ಕುಮಾರ್ ಅವರ ಸಹಕಾರದಿಂದ ಸುಧ ತನ್ನ ಮನೆಯಲ್ಲೇ ತನ್ನ ವೃತ್ತಿಯ ಜೊತೆ ಜೊತೆ ಗೆ ತಾಯಿಯ ಯೋಗಕ್ಷೇಮವನ್ನ ಬಹಳಷ್ಟು ಜಾಗೃಕಥೆ ವಹಿಸಿ ನೋಡಿಕೊಂಡು ಬರುತಿದ್ದರು ಅಂತ ಹೇಳ ಬಯಸುತ್ತೇನೆ… ಈಗ ಅವರಿಬ್ಬರೂ ಪಟ್ಟ ಕಷ್ಟಗಳಿಗೆ ಪ್ರತಿಯಾಗಿ ಆ ಭಗವಂತ ಮೋಹನ್ ಕುಮಾರ್ ಹಾಗೂ ಸುಧ ಇಬ್ಬರನ್ನು ಒಟ್ಟುಗೂಡಿಸಿಸ ಯಂಬುದನ್ನು ತಿಳಿದು ಹರುಷವಾಯಿತು…. ನವ ದಂಪತಿಗಳಿಬ್ಬರಿಗೂ ತುಂಬು ಹೃದಯದ ಶುಭಾಶಯಗಳನ್ನ ತಿಳಿಸಲು ಬಯಸುತ್ತೇನೆ…. ಇಬ್ಬರಿಗೂ ಒಳ್ಳೆಯದಾಗಲಿ ಹಾಗೂ 100 ವರುಷಗಳ ಕಾಲ ಸುಖ ಶಾಂತಿ ನೆಮ್ಮದಿಯ ಬಾಳ್ವೆ ಅವರದಾಗಿರಲಿ…. wishing you both a very Happy married life Mrs sudha and Mr. Mohan kumar….

Leave a Reply

Your email address will not be published. Required fields are marked *