ಅನಧಿಕೃತ ಆಸ್ತಿಗಳನ್ನು ಬಿ-ಖಾತಗೆ 3 ತಿಂಗಳ ಕಾಲಾವಕಾಶ

ತುಮಕೂರು : ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳನ್ನು ಹೊಂದಿರುವವರು ಬಿ-ಖಾತಾಗೆ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ಕೊಟ್ಟಿದೆ. ಬಿ-ಖಾತಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು-ನಿವೇಶನದಾರರು ಮೂರು ತಿಂಗಳೊಳಗೆ ಬಿ-ಖಾತಾಗೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು-ನಿವೇಶನದಾರರಿಗೆ ಬಿ-ಖಾತಾ ನೀಡಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 18 (ಇಂದಿನಿಂದ)ರಿಂದ ಮೂರು ತಿಂಗಳೊಳಗೆ ನಗರ ಸ್ಥಳೀಯ ಸಂಸ್ಥೆಯ ಅನಧಿಕೃತ ಬಡಾವಣೆಯಲ್ಲಿನ ನಿವೇಶನದಾರರಿಗೆ ಬಿ-ಖಾತಾ ನೀಡುವ ಕಾರ್ಯವನ್ನು ಆಂದೋಲನ ರೀತಿಯಲ್ಲಿ ಆರಂಭಿಸಿದ್ದೇವೆ ಎಂದು ಹೇಳಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 70,000ಕ್ಕೂ ಅಧಿಕ ಅನಧಿಕೃತ ಆಸ್ತಿಗಳಿದ್ದು, ಅರ್ಹವಾದ ಆಸ್ತಿಗಳಿಗೆ  ಬಿ-ಖಾತಾ ನೀಡಲು ಫೆ.18ರಿಂದ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಆಸ್ತಿದಾರರು 2024ರ ಸೆಪ್ಟೆಂಬರ್ 10ಕ್ಕಿಂತ ಮುಂಚೆ  ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ-ಖಾತಾ ಮಾಡಿಸಲು ಅರ್ಹರಿರುತ್ತಾರೆ. ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಹಾಗೂ ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ  ನಿವೇಶನ-ಕಟ್ಟಡಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿ ಬಿ-ಖಾತಾದಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು. 

ಬಿ-ಖಾತಾದಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ 2ರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಬಿ-ಖಾತಾದಲ್ಲಿ ದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸ್ವಾಧೀನಪಡಿಸುವ ನೋಂದಾಯಿತ ಮಾರಾಟ ಪತ್ರ-ದಾನ ಪತ್ರ-ವಿಭಾಗ ಪತ್ರಗಳನ್ನು ಹೊಂದಿರಬೇಕು. ಸರ್ಕಾರಿ ಜಾಗದಲ್ಲಿರುವ ಸ್ವತ್ತು, ಸರ್ಕಾರದ ನಿಗಮ ಮಂಡಳಿಗಳ ಜಾಗ, ನಗರ ಸ್ಥಳೀಯ ಸಂಸ್ಥೆಗಳ ಜಾಗದಲ್ಲಿರುವ ಸ್ವತ್ತುಗಳನ್ನು ಬಿ-ಖಾತಾದಲ್ಲಿ ನಮೂದಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು. 

ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮಾತನಾಡಿ, ಅನಧಿಕೃತ ಸ್ವತ್ತುಗಳಿಗೆ ನಮೂನೆ-2ಎ/3ಎ ನೀಡಿದ್ದಲ್ಲಿ ಸದರಿ ಆಸ್ತಿಯನ್ನು ಸಕ್ರಮಗೊಳಿಸಲಾಗಿದೆ ಎಂದು ಆಸ್ತಿ ಮಾಲೀಕರು ಭಾವಿಸುವಂತಿಲ್ಲ. ಬಿ-ಖಾತಾಗೆ ಅನಧಿಕೃತ ಆಸ್ತಿಯನ್ನು ದಾಖಲಿಸಲಿಚ್ಛಿಸುವವರಿಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗುವುದು. ಈ ಕೌಂಟರ್‍ಗಳು ರಜಾ ದಿನಗಳಂದೂ ಸಹ ಕಾರ್ಯನಿರ್ವಹಿಸಲಿವೆ. ಆಸ್ತಿದಾರರು ಬಿ-ಖಾತೆಗೆ ದಾಖಲಿಸಲು ಮದ್ಯವರ್ತಿಗಳನ್ನು  ಸಂಪರ್ಕಿಸದೆ ನೇರವಾಗಿ ಕೌಂಟರ್‍ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. 

ಆಸ್ತಿದಾರರು ಬಿ-ಖಾತಾಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ತುಮಕೂರು ಮಹಾನಗರ ಪಾಲಿಕೆ (9945212919/9449872599), ತಿಪಟೂರು ನಗರಸಭೆ(9448596379), ಸಿರಾ ನಗರಸಭೆ(8133270041), ಕುಣಿಗಲ್ ಪುರಸಭೆ(08132-220225), ಪಾವಗಡ ಪುರಸಭೆ (9742821910), ಚಿಕ್ಕನಾಯಕನಹಳ್ಳಿ ಪುರಸಭೆ (8660353951), ಮಧುಗಿರಿ ಪುರಸಭೆ (6361773631) ಕೊರಟಗೆರೆ ಪಟ್ಟಣ ಪಂಚಾಯಿತಿ (9964645923) ಗುಬ್ಬಿ ಪಟ್ಟಣ ಪಂಚಾಯಿತಿ (7406644909), ತುರುವೇಕೆರೆ ಪಟ್ಟಣ ಪಂಚಾಯಿತಿ (7026250340) ಹುಳಿಯಾರು ಪಟ್ಟಣ ಪಂಚಾಯಿತಿ(8133256056)ಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *