ತುಮಕೂರು: ಕುಚ್ಚಂಗಿ ಕೆರೆಯ ಅಂಗಳದಲ್ಲಿ ಕಾರಿನಲ್ಲಿ ಮೂವರನ್ನು ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 2ಜನರನ್ನು ಬಂಧಿಸಸಿದ್ದು, ಉಳಿದವರಿಗೆ ತಲಾಷ್ ಮಾಡುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ತಿಳಿಸಿದರು.
ಅವರಿಂದು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾ ಗೇಟಿನ ಪಾತರಾಜು ಮತ್ತು ಸತ್ಯಮಂಗಲದ ಗಂಗರಾಜು ಎಂಬುವವರು ಕಳೆದ ಆರೇಳು ತಿಂಗಳ ಹಿಂದೆ ನಿಧಿ ಸಿಕ್ಕಿದ್ದು ಅದನ್ನು ಮಾರಾಟ ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡದ ಬೆಳ್ತಂಗಡಿಯ ಕೊವೆಟ್ಟು ಗ್ರಾಮದ ಇಶಾಕ್ ಸೀಮಮ್, ಪೆರ್ಮಾನ ಗ್ರಾಮದ ಶಾಹುಲ್ ಹಮೀದ್ ಮತ್ತು ಶಿರ್ಲಾಲು ಗ್ರಾಮದ ಸಿದ್ದಿಕ್ ಎಂಬುವರಿಂದ 6 ಲಕ್ಷ ರೂಪಾಯಿಗಳನ್ನು ಪಡೆದಿದ್ದರು.
ನಿಧಿ ಕೊಡದೆ ಇದ್ದಾಗ ಕೊಟ್ಟಿರುವ ಹಣವನ್ನು ಕೇಳಿದ್ದು, ಕೊವೆಟ್ಟು ಗ್ರಾಮದ ಇಶಾಕ್ ಸೀಮಮ್, ಪೆರ್ಮಾನ ಗ್ರಾಮದ ಶಾಹುಲ್ ಹಮೀದ್ ಮತ್ತು ಶಿರ್ಲಾಲು ಗ್ರಾಮದ ಸಿದ್ದಿಕ್ ಇವರನ್ನು ತುಮಕೂರಿಗೆ ಕರೆಸಿಕೊಂಡು ಬೀರನಕಲ್ಲು ಬೆಟ್ಟದ ಬಳಿ ಮೂವರನ್ನು ಶಿರಾ ಗೇಟಿನ ಪಾತರಾಜು ಮತ್ತು ಸತ್ಯಮಂಗಲದ ಗಂಗರಾಜು ಇತರರು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಕುಚ್ಚಂಗಿ ಕೆರೆಗೆ ಅವರದೇ ಆದ ಕಾರಿನಲ್ಲಿ ತಂದು ಸುಟ್ಟು ಹಾಕಿದ್ದರು ಎಂದು ತಿಳಿಸಿದರು.
ಇದರ ಬೆನ್ನು ಹತ್ತಿದ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ಆರ್.ಚಂದ್ರಶೇಖರ್, ಕೆ.ಎಸ್.ಪಿ.ಎಸ್‍ರವರ ನೇತೃತ್ವದಲ್ಲಿ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅಮರೇಶ್ ಗೌಡ, ತುಮಕೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ದಿನೇಶ್ ಕುಮಾರ್, ಡಿ.ಎಸ್.ಬಿ ನಿರೀಕ್ಷಕರಾದ ಅವಿನಾಶ್, ತುಮಕೂರು ಗ್ರಾಮಾಂತರ ಮತ್ತು ಕೋರಾ ಪೆÇಲೀಸ್ ಠಾಣೆಯ ಪಿ.ಎಸ್.ಐ ಗಳಾದ ಮೋಹನ್, ಸಾಗರ್ ಆಸ್ಕಿ ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು, ರಮೇಶ್, ದುಶ್ಯಂತ್‍ರವರು ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು, ಸ್ಥಳೀಯ ಮಾಹಿತಿ, ತಾಂತ್ರಿಕ ಮತ್ತು ವೈಜ್ಞಾನಿಕ ವಿಧಾನದ ಮೂಲಕ ಕೊಲೆಗೀಡಾಗಿರುವವರ ಪತ್ತೆ ಹಚ್ಚಿ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂಬಂಧ ಪಾತರಾಜು, ಗಂಗರಾಜು, ಎಂಬುವರನ್ನು ಬಂಧಿಸಿದ್ದು, ಕೊಲೆಯಲ್ಲಿ ಭಾಗಿಯಾದ ಮಧುಸೂದನ್, ನವೀನ್, ಕೃಷ್ಣ, ಗಣೇಶ, ಕಿರಣ್ ಮತ್ತು ಸೈಮನ್ ಎಂಬುವರನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮರಿಯಪ್ಪ, ಅಬ್ದುಲ್ ಖಾದರ್, ಮತ್ತು ಡಿವೈಎಸ್ಪಿ ಕೆ.ಆರ್.ಚಂದ್ರಶೇಖರ್ ಉಪಸ್ಥಿತರಿದ್ದರು.