ತುಮಕೂರು ಜಿಲ್ಲೆಗೆ 4 ನರೇಗಾ ಪ್ರಶಸ್ತಿ

ತುಮಕೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ನೀಡಲಾಗುವ 2022-23ನೇ ಸಾಲಿನ ರಾಜ್ಯಮಟ್ಟದ ಮಕ್ಕಳ ಸ್ನೇಹಿ ಪಂಚಾಯತ್ ಪುರಸ್ಕಾರಕ್ಕೆ ತುಮಕೂರು ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಾರ್ಚ್ 24ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ನಡೆಯಲಿರುವ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್ ಬೊಮ್ಮಾಯಿರವರಿಂದ ಪುರಸ್ಕಾರವನ್ನು ಸ್ವೀಕರಿಸಲಾಗುವುದು ಎಂದು ಡಾ.ಕೆ.ವಿದ್ಯಾಕುಮಾರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು 3719 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಪೈಕಿ ಮಹಾತ್ಮಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನಗಳೊಂದಿಗೆ ಒಗ್ಗೂಡಿಸುವಿಕೆ ಮುಖಾಂತರ ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಅಂಗನವಾಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಮಧುಗಿರಿ ತಾಲ್ಲೂಕಿನ ಸಜ್ಜೆಹೊಸಹಳ್ಳಿ ಮತ್ತು ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನಿರ್ಮಿಸಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ವಿದ್ಯಾಕುಮಾರಿ ಅವರು ವಿವರಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಟಾನ ಇಲಾಖೆಯಾದ ರೇಷ್ಮೆ ಇಲಾಖೆಯು 2022-23ನೇ ಸಾಲಿನಲ್ಲಿ 57172 ಮಾನವ ದಿನಗಳ ಗುರಿ ನಿಗಧಿಯಲ್ಲಿ 65449 ಮಾನವ ದಿನಗಳನ್ನು ಸೃಜಿಸಿ ಶೇ.114ರಷ್ಟು ಪ್ರಗತಿ ಸಾಧಿಸಿದ ಪರಿಣಾಮ ಶಿರಾ ತಾಲ್ಲೂಕಿನ ರೇಷ್ಮೆ ಇಲಾಖೆಗೆ 2022-23ನೇ ಸಾಲಿನ ರೇಷ್ಮೆ ಸ್ನೇಹಿ ಪಂಚಾಯತ್ ಪುರಸ್ಕಾರ ಲಭಿಸಿದೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಯು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ 2022-23ನೇ ಸಾಲಿನ ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಅದೇ ರೀತಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮ ಪಂಚಾಯಿತಿಯು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಶಾಲಾ ಆಟದ ಮೈದಾನ, ಪೌಷ್ಟಿಕ ಕೈತೋಟ, ಮಳೆ ನೀರು ಕೊಯ್ಲು ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಮೂಲಕ 2022-23 ನೇ ಸಾಲಿನ ಶಿಕ್ಷಣ ಸ್ನೇಹಿ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಒಟ್ಟಾರೆ ತುಮಕೂರು ಜಿಲ್ಲೆಗೆ ರಾಜ್ಯಮಟ್ಟದ 4 ಪ್ರಶಸ್ತಿಗಳು ಲಭಿಸುವ ಮೂಲಕ ಜಿಲ್ಲೆಯ ಕೀರ್ತಿಯು ಹೆಚ್ಚಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ಕೆ.ವಿದ್ಯಾಕುಮಾರಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಗಾಂಧಿ ಗ್ರಾಮ ಪುರಸ್ಕಾರ:
2019-20, 2020-21 ಹಾಗೂ 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತುಮಕೂರು ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಚಿ.ನಾ.ಹಳ್ಳಿ ತಾಲ್ಲೂಕಿನ ಮತ್ತಿಘಟ್ಟ, ಜೆ.ಸಿ.ಪುರ, ಹೊನ್ನೆಬಾಗಿ ಗ್ರಾ.ಪಂ.ಗಳು, ಗುಬ್ಬಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ, ಸಿ.ಎಸ್.ಪುರ, ಹೇರೂರು ಗ್ರಾ.ಪಂ.ಗಳು, ಕೊರಟಗೆರೆ ತಾಲ್ಲೂಕಿನ ಚಿನ್ನಹಳ್ಳಿ, ತುಂಬಾಡಿ ಗ್ರಾ.ಪಂ.ಗಳು, ಕುಣಿಗಲ್ ತಾಲ್ಲೂಕಿನ ಮಡಿಕೆಹಳ್ಳಿ, ಸಂತೆ ಮಾವತ್ತೂರು, ಯಲಿಯೂರು ಗ್ರಾ.ಪಂ.ಗಳು, ಮಧುಗಿರಿ ತಾಲ್ಲೂಕಿನ ಸಿದ್ದಾಪುರ, ಚಿಕ್ಕಮಾಲೂರು, ರಂಗಾಪುರ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದೆ.

ಅದೇ ರೀತಿ ಪಾವಗಡ ತಾಲ್ಲೂಕಿನ ನಲಿಗಾನಹಳ್ಳಿ, ಸಾಸಲುಕುಂಟೆ, ಪೊನ್ನಸಮುದ್ರ ಗ್ರಾ.ಪಂ.ಗಳು, ಶಿರಾ ತಾಲ್ಲೂಕಿನ ಮಾಗೋಡು, ಕೊಟ್ಟ, ಯಲಿಯೂರು ಗ್ರಾ.ಪಂ.ಗಳು, ತಿಪಟೂರು ತಾಲ್ಲೂಕಿನ ಹಿಂಡಿಸ್ಕೆರೆ, ಕರಡಿ ಗ್ರಾ.ಪಂ.ಗಳು, ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರ, ಮಣಿಚಂಡೂರು ಗ್ರಾ.ಪಂ.ಗಳು, ತುಮಕೂರು ತಾಲ್ಲೂಕಿನ ಹರಳೂರು,

ಮೈದಾಳ, ಕೆಸರುಮಡು ಗ್ರಾಮ ಪಂಚಾಯಿತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ ಎಂದು ಡಾ.ಕೆ.ವಿದ್ಯಾಕುಮಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *