ಚುನಾವಣೆ ಭದ್ರತೆಗೆ 4400 ಪೊಲೀಸ್ ಸಿಬ್ಬಂದಿ ನಿಯೋಜನೆ-ಎಸ್ಪಿ ಕೆ.ವಿ.ಅಶೋಕ್

ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಭದ್ರತಾ ಕಾರ್ಯಕ್ಕಾಗಿ 4400 ಮಂದಿ ಪೊಲೀಸ್ ರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜಿನಿಂದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಲೋಕಸಭಾ ಕ್ಷೇತ್ರಗಳಿಗೆ ಒಳಪಡುವ ಈ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತೆಯಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 4400 ಪೊಲೀಸ್ ರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.

ಚುನಾವಣಾ ಭದ್ರತಾ ಕಾರ್ಯಕ್ಕಾಗಿ ಓರ್ವ ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ, 9 ಮಂದಿ ಡಿವೈಎಸ್ಪಿ, 33 ಮಂದಿ ಇನ್ಸ್‍ಪೆಕ್ಟರ್‍ಗಳು, 80 ಜನ ಸಬ್ ಇನ್ಸ್‍ಪೆಕ್ಟರ್‍ಗಳು, 161 ಮಂದಿ ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳು, 546 ಮಂದಿ ಹೆಡ್ ಕಾನ್‍ಸ್ಟೇಬಲ್‍ಗಳು, 1850 ಮಂದಿ ಕಾನ್‍ಸ್ಟೇಬಲ್‍ಗಳು, 1600 ಮಂದಿ ಹೋಂಗಾರ್ಡ್ಸ್, 7 ಕೆಎಸ್‍ಆರ್‍ಪಿ ತುಕಡಿಗಳು, 1 ಸಿಐಎಸ್‍ಎಫ್, 3 ಕೇರಳ ಸ್ಯಾಪ್, 1 ತಮಿಳುನಾಡು ಸ್ಯಾಪ್ ಸೇರಿದಂತೆ 4400 ಮಂದಿ ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 11 ಮಸ್ಟರಿಂಗ್ ಕೇಂದ್ರಗಳಿವೆ. ಎಲ್ಲಾ ಸ್ಟ್ರಾಂಗ್ ರೂಂಗಳು ಓಪನ್ ಆಗಿವೆ. ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಸ್‍ಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು ಎಂದರು.

ಏ. 26 ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಲಿದ್ದು, 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ನಡೆಯಲಿದೆ. ಯಾರು ಕ್ಯೂ ನಲ್ಲಿ ಇರುತ್ತಾರೋ ಅವರಿಗೆ ಟೋಕನ್ ಕೊಟ್ಟು, ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳ ಬಂದೋ ಬಸ್ತ್‍ಗಾಗಿ ಒಟ್ಟು 5 ವಿವಿಧ ಪೊಲೀಸ್ ಪಡೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಸಿಐಎಸ್ ಎಫ್, ಕೇರಳ, ತಮಿಳುನಾಡು ಸಶಸ್ತ್ರ ಮೀಸಲು ಪೊಲೀಸ್ ಪಡೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಒಂದು ಪಡೆಯಿಂದ 18 ಹಾಪ್ ಸೆಕ್ಷನ್ ಸಿಗುತ್ತವೆ. ನಾವು ಅವುಗಳನ್ನ ಬಳಸಿಕೊಳ್ಳುತ್ತೇವೆ. ಈ ಐದು ಪಡೆಗಳಲ್ಲಿ 2 ಪಡೆಗಳನ್ನು ಕುಣಿಗಲ್‍ಗೆ ಕೊಟ್ಟಿದ್ದೀವಿ ಎಂದರು.

180 ಸೆಕ್ಟರ್ ಮೊಬೈಲ್ಸ್, ಸೂಪರ್‍ವೈಸರ್ ಮೊಬೈಲ್ಸ್, ಡಿವೈಎಸ್ಪಿ ಮೊಬೈಲ್ಸ್‍ಗಳು ಇರುತ್ತವೆ. ಪ್ರತಿ ಬೂತ್‍ಗೆ ಒಂದು ಸೆಕ್ಟರ್ ಮೊಬೈಲ್ಸ್ ಇರುತ್ತೆ. ಪ್ರತಿ ಅಸೆಂಬ್ಲಿಗೆ ಮೂರು ಸೂಪರ್‍ವೈಸರ್ ಮೊಬೈಲ್ಸ್ ಇರುತ್ತೆ, ಪ್ರತಿಯೊಂದು ಅಸೆಂಬ್ಲಿಗೆ ಒಂದು ಡಿವೈಎಸ್ಪಿ ಮೊಬೈಲ್ಸ್ ಇರುತ್ತೆ. ಅವರು ಎಲ್ಲರನ್ನ ಸೂಕ್ಷ್ಮವಾಗಿ ಗಮನಿಸ್ತಾರೆ. ಮತದಾನಕ್ಕೂ 72 ಗಂಟೆ ಮೊದಲೇ ಎಲ್ಲಾ ವೈನ್ ಶಾಪ್, ಬಾರ್‍ಗಳನ್ನು ಬಂದ್ ಮಾಡಿಸಿದ್ದೀವಿ, ಲಾಡ್ಜ್‍ಗಳನ್ನು ಪರಿಶೀಲನೆ ಮಾಡಿಸಿದ್ದೀವಿ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲದವರು ಅಂದರೆ ಹೊರಗಡೆಯವರು ಯಾರು ಕ್ಷೇತ್ರದಲ್ಲಿ ಇರಬಾರದು. ಒಂದು ವೇಳೆ ಅವರು ಬಿಸಿನೆಸ್ ಕೆಲಸದ ಮೇಲೆ ಬಂದಿದ್ದರೆ ಪೋಲಿಂಗ್ ಸ್ಟೇಷನ್‍ಗಳ ಬಳಿ ಹೋಗಬಾರದು.

ಚೆಕ್ ಪೋಸ್ಟ್ ಗಳನ್ನು ಹಾಗೇ ಕಂಟಿನ್ಯೂ ಮಾಡಲಾಗಿದೆ. ಪೊಲೀಸ್ ಭದ್ರತೆ ಬಿಟ್ಟು, ಸಿಸಿಟಿವಿ ಕಣ್ಗಾವಲು, ಮೈಕ್ರೋ ಅಬ್ಸರ್ವರ್ಸ್ ಇರುತ್ತಾರೆ. ಚುನಾವಣೆಗೆ ನಿಯೋಜಿತವಾಗಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಲ್ಲಾ ವಾಹನಗಳ ಮೇಲೆ ನಿಗಾ ಇಡಲಾಗಿದೆ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ 55 ರೌಡಿಶೀಟರ್‍ಗಳ ಪಟ್ಟಿಯಲ್ಲಿ 32 ರೌಡಿಶೀಟರ್‍ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *