ತುಮಕೂರು : ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣ ಹಾಗೂ ತಿಪಟೂರು ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿ 50 ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶದ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, 1500 ರಸ್ತೆ ಮೇಲ್ಸೇತುವೆ ಹಾಗೂ ಅಂಡರ್ ಪಾಸ್‍ಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ ನಂತರ ನಗರದ ರೈಲ್ವೇ ನಿಲ್ದಾಣದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರವು ಜನಪರವಾದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಕ್ಕೆ ತಂದಿದೆ. ಇತರೆ ಸಾರಿಗೆ ಪ್ರಯಾಣ ವೆಚ್ಚಗಳಿಗೆ ಹೋಲಿಸಿದರೆ ರೈಲ್ವೆ ಪ್ರಯಾಣ ದರ ಅತ್ಯಂತ ಕಡಿಮೆ ಇರುವುದರಿಂದ ರೈಲು ಜನಸಾಮಾನ್ಯರ ಸಾರಿಗೆಯಾಗಿದೆ ಎಂದರು.
ಭಾರತೀಯ ರೈಲ್ವೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪುರಾಭಿವೃದ್ಧಿಗೊಳಿಸುತ್ತಿರುವ ದೇಶದ ಒಟ್ಟು 554 ರೈಲ್ವೆ ನಿಲ್ದಾಣಗಳ ಪೈಕಿ ಜಿಲ್ಲೆಯ ತುಮಕೂರು ಮತ್ತು ತಿಪಟೂರು ರೈಲ್ವೆ ನಿಲ್ದಾಣಗಳು ಸೇರಿರುವುದು ಸಂತೋಷದ ಸಂಗತಿ ಎಂದರು.
ತುಮಕೂರು ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗಾಗಿ 20 ಕೋಟಿ ರೂ. ಹಾಗೂ ತಿಪಟೂರು ನಿಲ್ದಾಣ ಪುನರಾಭಿವೃದ್ಧಿಗಾಗಿ 30 ಕೋಟಿ ರೂ. ಸೇರಿ ಒಟ್ಟು 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ಲಾಟ್‍ಫಾರ್ಮ್ ವಿಸ್ತರಣೆ, ಎಸ್ಕಲೇಟರ್ ಮತ್ತು ಲಿಫ್ಟ್‍ಗಳ ಅಳವಡಿಕೆ, ಟಿಕೇಟ್ ಬುಕಿಂಗ್ ಕೌಂಟರ್ ನವೀಕರಣ, ವಿದ್ಯುತ್ ನವೀಕರಣ, ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ, ವಿ.ಐ.ಪಿ. ಲಾಂಜ್ ಮತ್ತು ನಿರೀಕ್ಷಣಾ ಕೊಠಡಿಗಳ ನಿರ್ಮಾಣ ಸೇರಿದಂತೆ ಅತ್ಯಾಧುನಿಕ ರೈಲ್ವೆ ಸ್ಟೇಷನ್‍ಗಳಾಗಿ ತುಮಕೂರು ಮತ್ತು ತಿಪಟೂರು ರೈಲ್ವೆ ಸ್ಟೇಷನ್‍ಗಳು ಅಭಿವೃದ್ಧಿ ಹೊಂದಲಿವೆ ಎಂದುs ತಿಳಿಸಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿ ಗಣೇಶ್, ಪ್ರತೀ ನಿತ್ಯ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿಯೇ ಕೇಂದ್ರ ಸರ್ಕಾರ ರೈಲ್ವೇ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಭಾರತೀಯ ರೈಲ್ವೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರವು ತನ್ನ ಅವಧಿಯಲ್ಲಿ ಈವರೆಗೂ 25,000 ಕಿ.ಮೀ. ರೈಲ್ವೇ ಮಾರ್ಗ ಹಾಗೂ ಶೇ.94ರಷ್ಟು ಡೀಸೆಲ್ ರೈಲುಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣಗೊಂಡಿದೆ. ಮಾನವ ರಹಿತ ಕ್ರಾಸಿಂಗ್‍ಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ರೈಲ್ವೇ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ವಿನ್ಯಾಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೆÇಲೀಸ್ ವರಿμÁ್ಠಧಿಕಾರಿ ಅಶೋಕ್ ಕೆ.ವಿ., ರೈಲ್ವೇ ಮ್ಯಾನೇಜರ್ ನಿವೇದ್ ತಾಲಿಮ್ ಸೇರಿದಂತೆ ರೈಲ್ವೇ ಅಧಿಕಾರಿಗಳು, ಸಾರ್ವಜನಿಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.