
ತುಮಕೂರು : ಆ ಹೆದ್ದಾರಿಗೆ 80 ದಶಕದಿಂದಲೂ ಯಮಧೂತ ರಸ್ತೆ ಎಂದು ಕರೆಯಲಾಗುತ್ತಿದೆ, ಎಲ್ಲಿಂದಲೋ ಬರುತ್ತಿದ್ದವರು, ಎಲ್ಲಿಗೋ ಹೋಗುತ್ತಿದ್ದವರು ಒಮ್ಮೆಲೇ ಅಪಘಾತಕ್ಕೊಳಗಾಗಿ ಸಾವನ್ನಪ್ಪಿ ಬಿಡುತ್ತಾರೆ.
ಅಂತಹ ಹೆದ್ದಾರಿಯೇ ಬೆಂಗಳೂರು-ಪುಣೆ(ಪಿ.ಬಿ.ರೋಡ್), ಎನ್‌ಹೆಚ್-48 ಎಂದು ಕರೆಯಲಾಗುತ್ತಿದ್ದೆ, ಪದೇ ಪದೇ ಅಪಘಾತಗಳಾಗುವುದರಿಂದ ಈ ಹೆದ್ದಾರಿಯನ್ನು ಯಮಧೂತ ಹೆದ್ದಾರಿ ಅಂತಲೂ ಕರೆಯುತ್ತಾರೆ, ಇಂತಹ ರಸ್ತೆಯಲ್ಲಿ ಕಣ್ಣು ಮುಚ್ಚಿ, ಕಣ್ಣು ಬಿಡುವುದರೊಳಗೆ ಅಪಘಾತಗಳಾಗುತ್ತವೆ, ಅಪಘಾತಗಳನ್ನು ತಡೆದು ಪ್ರಾಣಗಳನ್ನು ಉಳಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲೆ ಇರುತ್ತದೆ.
ಈ ಹಿನ್ನಲೆಯಲ್ಲಿಯೇ ಅಲೋಕ್‌ಕುಮಾರ್ ಅವರು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಆಗಿ ನೇಮಕವಾದ ಮೇಲೆ ತುಮಕೂರು ಸರ ಹದ್ದಿನಿಂದ-ಬೆಂಗಳೂರು ಸರಹದ್ದು ಒಳಗೆ ಅಪಘಾತಗಳು ಹೆಚ್ಚು ಆಗುತ್ತಿರುವುದನ್ನು ಮನಗಂಡು ಖುದ್ದು ಭೇಟಿ ನೀಡಿ ಹೆದ್ದಾರಿಯಲ್ಲಿ ಅಪಘಾತಕ್ಕೆ ಕಾರಣವೇನಿರಬಹುದು ಎಂಬುದನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಪಂಡಿತನಹಳ್ಳಿ, ಕೋರಾ ಮತ್ತು ಶಿರಾ ಬಳಿಯ ಚಿಕ್ಕನಹಳ್ಳಿ ಹೆದ್ದಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭೇಟಿಯ ಸಂದರ್ಭದಲ್ಲಿ ಹೆದ್ದಾರಿಯ ಅಧಿಕಾರಿಗಳೊಂದಿಗೂ ಮಾಹಿತಿ ಪಡೆದ ಎಡಿಜಿಪಿ ಅಲೋಕ್‌ಕುಮಾರ್ ಅವರು, ಹೆದ್ದಾರಿಯು ಸಂಚಾರಕ್ಕೆ ಸುಗಮವಾಗಿದ್ದು, ಬಹುತೇಕ ಅಪಘಾತಗಳು ಅತಿ ವೇಗ ಮತ್ತು ಬೆಳಗಿನ ಜಾವದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್‌ಕುಮಾರ್ ಅವರು ತುಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ಎನ್‌ಹೆಚ್-48 ನಲ್ಲಿ ಪಂಡಿತನಹಳ್ಳಿ, ಕೋರ ಮತ್ತು ಚಿಕ್ಕನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಅಪಘಾತದ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು, ಅಪಘಾತಗಳು ಏಕೆ ಹೆಚ್ಚಾಗುತ್ತಿವೆ ಎಂಬುದನ್ನು ಕಂಡು ಹಿಡಿಯಲು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ 10 ಸಿ.ಸಿ. ಕ್ಯಾಮರಗಳನ್ನು ಅಳವಡಿಸಲಾಗಿದೆ, ಹಾಗೆಯೇ ಬೆಂಗಳೂರು ಗ್ರಾಮಾಂತರ 8 ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ 8 ಕ್ಯಾಮರಗಳು ಸೇರಿದಂತೆ ಹೆದ್ದಾರಿಯಲ್ಲಿ 72 ಸಿ.ಸಿ.ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಏಳೆಂಟು ಕಡೆ ಅಪಘಾತದ ಸ್ಥಳಗಳಿವೆಯೆಂದು ಗುರುತಿಸಲಾಗಿದೆ ಅಪಘಾತಕ್ಕೆ ಚಾಲನೆ ಮಾಡುವಾಗ ಮೊಬೈಲ್ ಪೋನ್‌ನಲ್ಲಿ ಮಾತನಾಡುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವುದು ಕಂಡು ಬಂದಿದೆ, ಈ ಹೆದ್ದಾರಿಯಲ್ಲಿ ಸಂಚಾರಿ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ, ಕಾನೂನು ಉಲ್ಲಂಘನೆಯಾಗುತ್ತಿದ್ದು, ದಿನವೊಂದಕ್ಕೆ 5ಸಾವಿರ ಜನ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ, ಅಷ್ಟು ಜನರನ್ನು ಹಿಡಿದು ಒಂದೇ ದಿನದಲ್ಲಿ ದಂಡ ಹಾಕುವುದು ಕಷ್ಟ ಇದೆ ಎಂದು ತಿಳಿಸಿದರು.
ಕೆಲವು ಕಡೆ ಪಾದಚಾರಿಗಳು ಚಲಿಸಲು ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ, ರಸ್ತೆ ಹದಗೆಟ್ಟಿರುವ ಕಡೆ ಕಾಮಗಾರಿಗಳನ್ನು ಮಾಡಿಸಲು ಸಂಬಂಧಪಟ್ಟ ಇಲಾಖೆಗೆ ಮೂರು ತಿಂಗಳ ಅವಕಾಶವನ್ನು ನೀಡಿದ್ದೇವೆ, 3 ತಿಂಗಳಲ್ಲಿ ಕಾಮಗಾರಿಗಳನ್ನು ಮುಗಿಸದಿದ್ದರೆ ಹೆದ್ದಾರಿ ಅಧಿಕಾರಿಗಳ ಮೇಲೂ ನಮ್ಮ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 762 ಅಪಘಾತಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ, ರಾಜ್ಯದಲ್ಲಿ ತುಮಕೂರು ಜಿಲ್ಲೆಯೇ ಅಪಘಾತದಲ್ಲಿ ಪ್ರಥಮ ಸ್ಥಾನ ಹೊಂದಿದೆ ಏಕೆಂದರೆ ಈ ಜಿಲ್ಲೆಯಲ್ಲಿ ಮೂರು ಹೆದ್ದಾರಿಗಳು ಹಾದು ಹೋಗಿವೆ, ಪುಣೆ ಹೆದ್ದಾರಿ, ಶಿವಮೊಗ್ಗ, ಹಾಸನ ಹೆದ್ದಾರಿಗಳು ಇರುವುದರಿಂದ ಅಪಘಾತಗಳು ಹೆಚ್ಚು ಆಗುತ್ತಿವೆ ಎಂದು ತಿಳಿಸಿದರು.
ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಅತಿವೇಗವಾಗಿ ವಾಹನ ಚಾಲನೆ, ಕುಡಿದು ವಾಹನ ಓಡಿಸುವುದು, ರಸ್ತೆ ನಿಯಮ ಪಾಲಿಸದೆ ಓವರ್ ಟೇಕ್ ಮಾಡುವುದು, ಬಲ ಬದಿಯಲ್ಲಿಯೇ ಓವರ್‌ಟೇಕ್ ಮಾಡಬೇಕು ಆದರೆ ಕೆಲವರು ಎಡ ಬದಿಯಲ್ಲಿ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಮಾಡುತ್ತಾರೆ, ಜೀವ ಅಮೂಲ್ಯವಾದದ್ದು, ಆ ಜೀವವನ್ನು ಉಳಿಸಲು ಪೊಲೀಸ್ ಇಲಾಖೆಯಿಂದ ಎಷ್ಟು ಸಾಧ್ಯವೋ ಅಷ್ಟು ಕಾರ್ಯ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಎಡಿಜಿಪಿ ಅಲೋಕ್‌ಕುಮಾರ್ ಅವರು ಹೇಳಿದ್ದೆಲ್ಲಾ ಸರಿ ಇದೆ ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ವಾಹನ ಸವಾರರೇ ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಅಪಘಾತಗಳನ್ನು ತಡೆಯಲು ಯಾವ ಪೊಲೀಸ್, ಯಾವ ಕಾನೂನು ಇದ್ದೆರೇನು ಪ್ರಯೋಜನ.
ವಾಹನ ಸವಾರರು ಜೀವ ಅತ್ಯಮೂಲ್ಯ, ನಮನ್ನು ನಂಬಿಕೊಂಡು ಇತರೆ ಜೀವಗಳು ಇರುತ್ತವೆ ನಾವು ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂಬ ಅರಿವು ಬಂದಲ್ಲಿ ಅಪಘಾತಗಳನ್ನು ತಪ್ಪಿಸಬಹುದು.
ಇಲ್ಲಪ್ಪ ನಾವು ಓಡಿಸಿದ್ದೇ ದಾರಿ, ನಾವು ಹೋದಂತೆ ಇತರರು ದಾರಿ ಬಿಡಬೇಕು ಎಂದು ನಿಯಮಗಳನ್ನು ಪಾಲಿಸದೇ ವಾಹಗಳನ್ನು ಚಾಲನೆ ಮಾಡಿದರೆ ಮುಗ್ಧ ಜೀವಗಳು ಹೆದ್ದಾರಿಯಲ್ಲಿ ಉರುಳುತ್ತಲೇ ಇರುತ್ತವೆ. ವಾಹನ ಸವಾರರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡರೆ ಮೊದಲನೆಯದು ಅಪಘಾತ ತಪ್ಪಿಸಬಹದು, ಎರಡನೆಯದು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು.
ಎಡಿಜಿಪಿ ಒಬ್ಬರು ಹೆದ್ದಾರಿಗೆ ಭೇಟಿ ಕೊಟ್ಟ ನಂತರವಾದರೂ ಹೆದ್ದಾರಿಗಳಲ್ಲಿ ಅಪಘಾತಗಳು ಕಡಿಮೆಯಾಗಬಹುದಾ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಯಾಕೆಂದರೆ ಶರವೇಗದಲ್ಲಿ ಬರುವ ವಾಹನಗಳು, ನಿಯಮಗಳನ್ನು ಬ್ರೇಕ್ ಮಾಡುವುದು, ಕುಡಿದು ಅಡ್ಡಾದಿಡ್ಡಿ ವಾಹನಗಳನ್ನು ಓಡಿಸುವುದು ತಪ್ಪಿದರೆ ಕೆಲವರ ಜೀವಗಳು ಉಳಿಯ ಬಹುದು.
ಎಡಿಜಿಪಿ ಅಲೋಕ್‌ಕುಮಾರ್ ಜೊತೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್‌ಕುಮಾರ್ ಶಹಪೂರ್‌ವಾಡ್, ಅಡಿಷನಲ್ ಎಸ್ಪಿ ಮರಿಯಪ್ಪ, ಪ್ರೊಭೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಇದ್ದು ಮಾಹಿತಿ ನೀಡಿದರು.