ತುಮಕೂರು: ಶೇ.77.71%ರಷ್ಟು ಮತದಾನ, ಸ್ಟ್ರಾಂಗ್ ರೂಂ ಸೇರಿದ ಇವಿಎಂ-ಜೂನ್ 4ಕ್ಕೆ ಅಭ್ಯರ್ಥಿಗಳ ಹಣೆ ಬರಹ

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನದಲ್ಲಿ ಸಂಜೆ 6ಗಂಟೆಗೆ ಶೇಕಡ. 77.71% ರಷ್ಟು ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಶೇಕಡ 82.12%ರಷ್ಟು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಆಗಿ ಮೊದಲ ಸ್ಥಾನದಲ್ಲಿದ್ದರೆ, ತುಮಕೂರು ನಗರದಲ್ಲಿ ಶೇ 67.18% ರಷ್ಟು ಮತದಾನ ನಡೆದು ಕೊನೆಯ ಸ್ಥಾನದಲ್ಲಿದೆ.

ತುಮಕೂರು ಲೋಕಸಭಾ ವ್ಯಾಪ್ತಿಯ ಚಿ.ನಾ.ಹಳ್ಳಿ 77.27%, ಗುಬ್ಬಿ 82.12%, ಕೊರಟಗೆರೆ 79.98%, ಮಧುಗಿರಿ 76.95%, ತಿಪಟೂರು 80.56%, ತುಮಕೂರು 67.18%, ತುಮಕೂರು ಗ್ರಾಮಾಂತರ 81.66% ಮತ್ತು ತುರುವೇಕೆರೆ70.93% ಶೇಕಡ ಮತದಾನವಾಗಿದ್ದು ಒಟ್ಟು 77.71% %ರಷ್ಟು ಮತದಾನವಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ್ಲ 16,61,309 ಮತದಾರರಿದ್ದು, ಪುರುಷ ಮತದಾರರು 819065 ಇದ್ದು, 842170 ಮಹಿಳಾ ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರು 6,46,849 ಮಂದಿ ಮತ ಚಲಾಯಿಸಿದ್ದರೆ, ಮಹಿಳಾ ಮತದಾರರು 6,44,118 ಮತ ಚಲಾಯಿಸಿದ್ದಾರೆ, ಇತರೆ 20 ಮಂದಿ ಮತ ಚಲಾಯಿಸಿದ್ದು, ಒಟ್ಟು 12,90,087 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತದಾನದಲ್ಲಿ ಪುರುಷರು ಮುಂದೆ ಇದ್ದಾರೆ, ಮಹಿಳೆಯರಿಗಿಂತ 2731 ಪುರುಷ ಮತದಾರರು ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ.3,70,322 ಮತದಾರರು ಮತ ಚಲಾಯಿಸಿಲ್ಲ.

ಬಹುತೇಕ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಅಲ್ಲಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಬಿಟ್ಟರೆ ಮತದಾನಕ್ಕೆ ಶಾಂತಿಭಂಗ ಉಂಟು ಮಾಡುವುದು, ಮತದಾನಕ್ಕೆ ಅಡ್ಡಿ ಪಡಿಸುವುದು ನಡೆದಿಲ್ಲ. ಇವಿಎಂ ಯಂತ್ರಗಳು ಎಲ್ಲಿಯೂ ಕೈಕೊಟ್ಟ ಬಗ್ಗೆ ವರದಿಯಾಗಿಲ್ಲ.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರು ಹಲವಾರು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ನಡೆಯುತ್ತಿರುವ ಬಗ್ಗೆ ಮತ್ತು ಪೊಲೀಸ್ ಭದ್ರತೆಯ ಬಗ್ಗೆ ಮಾಹಿತಿ ಪಡೆದರು.

ಚುನಾವಣೆಯ ಸಂಬಂಧ ಹಲವಾರು ಕಡೆ ಭೇಟಿ ನೀಡಿದಾಗ ಸಂಜೆಯ ವೇಳೆಯಲ್ಲಿಯೂ ಮತಗಟ್ಟಗಳ ಮುಂದೆ ದೊಡ್ಡ ಸರತಿ ಸಾಲು ನಿಂತಿರುವುದು ಕಂಡು ಬಂದಿತು.

ಸಿದ್ದಗಂಗಾ ಕಾಲೇಜಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು.

ಬೆಳಿಗ್ಗೆ 7ಗಂಟೆಯಿಂದ 11 ಗಂಟೆಯವರೆಗೆ ಚುರುಕಾಗಿ ನಡೆದ ಮತದಾನವು, ಆ ನಂತರ ಬಿಸಿಲ ಜಳಕ್ಕೆ ಮತದಾರರು ಅಷ್ಟಾಗಿ ಮತಗಟ್ಟಗೆ ಬರಲಿಲ್ಲ. ಇಳಿ ಹೊತ್ತಾದ 4ಗಂಟೆಯ ನಂತರ ಮತದಾರರು ಮತಗಟ್ಟೆಗೆ ಧಾವಿಸಿದ್ದರಿಂದ ರಾತ್ರಿ ಏಳು ಗಂಟೆಯಾದರೂ ಹಲವಾರು ಮತದಾನ ಕೇಂದ್ರದಲ್ಲಿ ಮತದಾನ ನಡೆಯಿತು.

ಈ ಚುನಾವಣೆಯ ವಿಶೇಷವೆಂದರೆ ವೃದ್ದರಿಗೆ ಮತ್ತು ಅಂಗವಿಕಲರಿಗೆ ವ್ಹೀಲ್ ಚೇರ್ ವಾಹನದ ವ್ಯವಸ್ಥೆಯನ್ನು ಮಾಡಲಾಗಿತ್ತು, ವೃದ್ದರು ತಮ್ಮ ಬಂಧುಗಳ ಜೊತೆಯಲ್ಲಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು.

ಕ್ಷೇತ್ರದಲ್ಲಿ ಪುರುಷ ಮತದಾರರೇ ಹೆಚ್ಚು ಮತದಾನ ಮಾಡಿದ್ದು, ಮಹಿಳಾ ಮತದಾರರು ಹಿಂದೆ ಬಿದ್ದಿದ್ದಾರೆ. ಮತದಾನ ಕೇಂದ್ರಗಳಲ್ಲಿ ಮತದಾರರು ಹುರುಪಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತಿದದ್ದು ಕಂಡು ಬಂದಿತು.

ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್ ಮುಚ್ಚಿದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್‍ಗೆ ರವಾನೆಯಾದವು.

ಮುಂಜಾನೆಯಿಂದಲೇ ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೇಸಿಗೆ ಬಿಸಿಲು ಹೆಚ್ಚಿರಬಹುದು ಎಂಬ ಕಾರಣಕ್ಕೆ ಮುಂಜಾನೆ ಅವಧಿಯಲ್ಲಿ ಮತಗಟ್ಟೆಗಳ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು. ಕೆಲವೊಂದು ಜನನಿಬಿಡ ಮತಗಟ್ಟೆಗಳಲ್ಲಿ 2 ಗಂಟೆಗಳಷ್ಟು ಕಾಲ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

ಮತಗಟ್ಟೆಗೆ ಹೋಗಿ ಮತದಾನ ಮಾಡಿ ಹಿಂತಿರುತ್ತಿದ್ದಾಲೇ, ಹೃದಯಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ.

ತುಮಕೂರು ಲೋಕಸಭಾ ಮತಯಂತ್ರಗಳನ್ನು (ಇವಿಎಂ) ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕಗ ಕಾಲೇಜಿನಲ್ಲಿ ಬಿಗಿ ಮಿಲಿಟರಿ ಭದ್ರತೆಯೊಂದಿಗೆ ಇಡಲಾಗಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಹಣೆ ಬರಹ ತಿಳಿಯಲಿದೆ.

ದೇಶದಲ್ಲಿ ಹೆಚ್ಚು ದಿನಗಳ ಕಾಲ ಚುನಾವಣೆ ನಡೆಯುತ್ತಿರುವ ಚೆನಾವಣೆ ಇದಾಗಿದ್ದು, 7 ಹಂತಗಳಲ್ಲಿ ದೇಶದಲ್ಲಿ ಮತದಾನ ನಡೆಯಲಿದ್ದು ಜೂನ್ 4ರಂದು ಫಲಿತಾಂಶ ಪ್ರಕಟವಾಗುವುದರಿಂದ ತುಮಕೂರಿನ ಲೋಕಸಭಾ ಫಲಿತಾಂಶಕ್ಕಾಗಿ 39 ದಿನಗಳು ಕಾಯಬೇಕು.

ಈ ರೀತಿ ಫಲಿತಾಂಶಕ್ಕಾಗಿ ಸುಧೀರ್ಘ ಕಾಲ ಕಾಯಬೇಕಾದ ಮೊದಲ ಚುನಾವಣೆ ಇದಾಗಿದೆ.


-ವೆಂಕಟಾಚಲ ಹೆಚ್.ವಿ.

Leave a Reply

Your email address will not be published. Required fields are marked *