ಕುಡಿಯುವ ನೀರಿನ ಕಾಮಗಾರಿಗಳಿಗೆ 8.5ಕೋಟಿ ಅನುದಾನ ಬಿಡುಗಡೆ

ತುಮಕೂರು : ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತತ್ತರಿಸುತ್ತಿರುವ ಜನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನದ ಕೊರತೆಯಿಲ್ಲ. ಹೊಸ ಕೊಳವೆ ಬಾವಿ ಕೊರೆಯಲು ಸರ್ಕಾರದಿಂದ ಎಲ್ಲಾ ತಾಲ್ಲೂಕಿಗೂ ತಲಾ 8.5 ಲಕ್ಷ ರೂ.ನಂತೆ ಒಟ್ಟು 8.5 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಶಿರಾ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಬರಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ನರೇಗಾ ಪ್ರಗತಿ, ಚುನಾವಣೆ ಕುರಿತು ಗುರುವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯಾವುದೇ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಮೂಲಭೂತ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರಿನ ಪೂರೈಕೆ ಮಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ.   ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಕಾರಣ ಹೇಳಿ ವಿಳಂಬ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ದೂರು ಬಂದ 24 ಗಂಟೆಯೊಳಗೆ ತುರ್ತು ಕ್ರಮಕೈಗೊಳ್ಳುವುದಲ್ಲದೆ  ಗ್ರಾಮೀಣ ಪ್ರದೇಶದ ರೈತರ ದೂರವಾಣಿ ಕರೆಗೆ ಸ್ಪಂದಿಸುವ ಮಾನವೀಯ ಗುಣ ಬೆಳೆಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ? ಗ್ರಾಮ ಪಂಚಾಯತಿವಾರು ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ, ಬತ್ತಿ ಹೋಗಿರುವ ಕೊಳವೆ ಬಾವಿ, ದುರಸ್ತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ, ಬಾಡಿಗೆ ಆಧಾರದ ಮೇಲೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯುತ್ತಿರುವ ಗ್ರಾಮಗಳ ಮಾಹಿತಿ ಪಡೆದ ಅವರು, ಬಾಡಿಗೆ ಆಧಾರದಲ್ಲಿ ಕುಡಿಯುವ ನೀರು ಪಡೆಯುತ್ತಿರುವ ಖಾಸಗಿ ಕೊಳವೆ ಬಾವಿಗಳು ಸೇರಿ ಪಂಚಾಯತಿ ಅಧೀನದಲ್ಲಿರುವ ಎಲ್ಲಾ ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ನಿರಂತರ ಜ್ಯೋತಿಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು  ಎಂದು ಬೆಸ್ಕಾಂ ಇಂಜಿನಿಯರ್‍ಗೆ ಖಡಕ್ ಸೂಚನೆ ನೀಡಿದರು.

ಬತ್ತಿ ಹೋದ ಕೊಳವೆ ಬಾವಿಗಳನ್ನು ಇನ್ನಷ್ಟು ಆಳ ಕೊರೆಯಲು ಕ್ರಮಕೈಗೊಳ್ಳಬೇಕು. ಮಳೆ ಬಾರದೆ ನೀರಿನ ಸಮಸ್ಯೆ ಹೀಗೆ ಮುಂದುವರೆದಲ್ಲಿ ಅಂತರ್ಜಲ ಮಟ್ಟ ಕುಸಿತವಾದರೆ ಹೊಸ ಕೊಳವೆ ಬಾವಿ ಕೊರೆಸಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ,     ಲೋಕಸಭಾ ಚುನಾವಣೆ ಪ್ರಯುಕ್ತ ಎಲ್ಲಾ ಪಂಚಾಯತಿಗಳೂ ವಿವಿಧ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಮತದಾನ ಜಾಗೃತಿಯನ್ನು ಯಶಸ್ವಿಯಾಗಿ ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರಲ್ಲದೆ, ಅದೇ ರೀತಿ ಏಪ್ರಿಲ್ 21ರಂದು ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನವನ್ನು ಹಮ್ಮಿಕೊಂಡು ಅಭಿಯಾನದಲ್ಲಿ ಎಲ್ಲಾ ಮತಗಟ್ಟೆಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಬೇಕು.  ಮತಗಟ್ಟೆಗಳಲ್ಲಿ ಅಗತ್ಯ ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ, ರ್ಯಾಂಪ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತದಾನ ದಿನದಂದು ಒಬ್ಬ ಮತದಾರನೂ ಮತದಾನ ಮಾಡಲು ಬಿಸಿಲಿನಲ್ಲಿ ನಿಲ್ಲದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಕನಿಷ್ಟ 30 ಮತಗಟ್ಟೆಗಳನ್ನು ಜಿಲ್ಲೆಯ ವನ್ಯಸಂಪತ್ತು, ಕಲೆ, ಸಂಸ್ಕøತಿಯನ್ನು ಬಿಂಬಿಸುವಂತೆ ವರ್ಣರಂಜಿತವಾಗಿ ಮತಗಟ್ಟೆಗಳನ್ನು ಸಜ್ಜುಗೊಳಿಸಬೇಕೆಂದು ಸೂಚಿಸಿದರು. 

ಶಿರಾ ತಾಲ್ಲೂಕಿನಲ್ಲಿ ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಏಪ್ರಿಲ್ 23ರಿಂದ ಕುರುಬರಾಮನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು.  ದನ-ಕರುಗಳ ಕುಡಿಯುವ ನೀರಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಗಳಿಗೆ ನೀರು ತುಂಬಿಸಬೇಕು ಎಂದು ನಿರ್ದೇಶಿಸಿದರು. 

ತಾಲ್ಲೂಕು ಪಂಚಾಯತಿ ಇಓ ಹನುಮಂತಪ್ಪ ಮಾತನಾಡಿ ಶಿರಾ ತಾಲೂಕಿನಲ್ಲಿರುವ 42 ಗ್ರಾಮ ಪಂಚಾಯಿತಿಗಳ ಪೈಕಿ 32 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಹಾಗೂ 19 ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ದತ್ತಾತ್ರೇಯ ಸೇರಿದಂತೆ ಎಲ್ಲಾ ಪಿಡಿಓಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *