ಬೆಳಗುಂಬ ಅಭಿವೃದ್ಧಿಗೆ ಸಚಿವ ಸೋಮಣ್ಣ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ

ತುಮಕೂರು:ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ದತ್ತು ಪಡೆದಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಮಸ್ಯೆಗಳು ಹಾಗೂ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಬೆಳಗುಂಬಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ ಸ್ಥಳೀಯ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ, ದಲಿತ ಮುಖಂಡ ಬೆಳಗುಂಬ ವೆಂಕಟೇಶ್ ಅವರ ಮನೆಗೆ ಭೇಟಿ ನೀಡಿ ಈ ಸಂಬಂಧ ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಹೆಚ್.ನಿಂಗಪ್ಪ ಮತ್ತಿತರ ಮುಖಂಡರು ಹಾಜರಿದ್ದರು. ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿಲು ಮುಂದಾಗಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಿದ ಬೆಳಗುಂಬ ವೆಂಕಟೇಶ್, ತುಮಕೂರಿನ ಬಡಾವಣೆಯ ರೂಪದಲ್ಲಿ ಬೆಳವಣಿಗೆಯಾಗುತ್ತಿರುವ ಬೆಳಗುಂಬದಲ್ಲಿ ವ್ಯವಸ್ಥಿತವಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಅಭಿವೃದ್ಧಿ ಚಿಂತಕರೆಂದು ಹೆಸರಾಗಿರುವ ಸಚಿವ ಸೋಮಣ್ಣ ಹಾಗೂ ಶಾಸಕ ಸುರೇಶ್‌ಗೌಡರು ಒಟ್ಟಾಗಿ ಪ್ರಯತ್ನಿಸಿದರೆ ಬೆಳಗುಂಬ ಗ್ರಾಮ ಪಂಚಾಯ್ತಿ ಸರ್ವತೋಮುಖ ಅಭಿವೃದ್ಧಿಯಾಗುವಲ್ಲಿ ಸಂಶಯವಿಲ್ಲ. ಈ ನಾಯಕರು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಭಾಗದ ಸುಸಜ್ಜಿತ ನಾಗರೀಕ ಸೌಕರ್ಯ ಒದಗಿಸುವ ಇಂಗಿತ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ ಅವರು, ಈ ಸಂಬAಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಭರವಸೆ ನೀಡಿದರು. ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಒಟ್ಟಾಗಿ ಶ್ರಮಿಸಿ ತಮ್ಮ ಗೆಲುವಿಗೆ ಸಹಕರಿಸಿದ್ದಾರೆ, ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗಂಗಾAಜನೇಯ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಮಲ್ಲಿಕಾರ್ಜುನ್, ರಮೇಶ್, ರಾಮಚಂದ್ರಯ್ಯ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *