ತುಮಕೂರು:ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಮಾಜವಿದ್ರೋಹಿ, ವಿಚ್ಚೀದ್ರಕಾರಿ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ,ಪ್ರಗತಿಪರ,ಕಾರ್ಮಿಕ ಹಾಗೂ ಅಲ್ಪಸಂಖ್ಯಾತರ ಮುಖಂಡರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ.ಅವರಿಗೆ ಪ್ರಗತಿಪರ ಚಿಂತಕ ಕೆ.ದೊರೆರಾಜು ನೇತೃತ್ವದಲ್ಲಿ ಹತ್ತಾರು ಜನರು ನಿಯೋಗ ತೆರಳಿ ಮನವಿ ಸಲ್ಲಿಸಿದರು.ಗಣೇಶ ಚತುರ್ಥಿ ಮತ್ತು ಇದ್ ಮಿಲಾದ್ ಹಬ್ಬದ ಅಂಗವಾಗಿ ಕರೆದಿದ್ದ ಶಾಂತಿ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘನೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತುಮಕೂರು ನಗರದಲ್ಲಿ ಇತ್ತೀಚಗೆ ನಡೆದ ಕೆಲ ಘಟನೆ ಪ್ರಚೋದನಕಾರಿಯಾಗಿದೆ.ಸೆಪ್ಟಂಬರ್ 15ರ ವಿಶ್ವ ಪ್ರಜಾಪ್ರಭುತ್ವದಿನ ನಗರದ ಬಿಜಿಎಸ್ ವೃತ್ತದಲ್ಲಿ ಕಾರ್ಯಕ್ರಮ ನಡೆಯುವ ವೇಳೆ, ನಾಗರಕಟ್ಟೆ ಬಳಿ ಸ್ಥಾಪಿಸಿರುವ ಗಣಪತಿ ಪೆಂಡಾಲ್ನಲ್ಲಿ ಜೋರಾಗಿ ಮೈಕ್ ಹಾಕಿ ಸರಕಾರದ ಕಾರ್ಯಕ್ರಮಕ್ಕೂ ತೊಂದರೆ ನೀಡಲಾಗಿದೆ.ಅಲ್ಲದೆ ಇದ್ ಮಿಲಾದ್ ಚಾಂದಿನಿ ಮೆರವಣಿಗೆ ವೇಳೆಯೂ ಕೆಲವರು ಪ್ರಚೋದಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಇಂತಹ ಸಮಾಜ ವಿದ್ರೋಹಿ ಕೃತ್ಯಗಳನ್ನು ಎಸಗುವವರು ಯಾವುದೇ ಸಮುದಾಯವಾಗಿದ್ದರೂ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಎಸ್.ಪಿ. ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಗತಿಪರ ಚಿಂತಕ ಕೆ.ದೊರೈರಾಜು, ಕರ್ನಾಟಕ ರಾಷ್ಟçಕವಿ ಕುವೆಂಪು ಅವರು ಹೇಳಿದ ರೀತಿ ಸರ್ವ ಜನಾಂಗದ ಶಾಂತಿಯ ತೋಟ. ಕಲ್ಪತರು ನಾಡು ಶಾಂತಿಗೆ ಹೆಸರಾಗಿದೆ.ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಮಾಜವಿದ್ರೋಹಿ ಶಕ್ತಿಗಳ ವಿರುದ್ದ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಸಕಾರಾತ್ಮಕವಾಗಿ ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.
ಕಾರ್ಮಿಕ ಮುಖಂಡ ಬಿ.ಉಮಶ್ ಮಾತನಾಡಿ, ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲ ಸಮುದಾಯಗಳು ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶವಿದೆ. ಇನ್ನೊಂದು ಸಮುದಾಯಕ್ಕೆ ನೋವಾಗದ ರೀತಿ ಆಚರಿಸಿದರೆ ಹೆಚ್ಚು ಉತ್ತಮ.ಜನರ ಒಗ್ಗೂಡುವಿಕೆಯಿಂದ ದೇಶದ ಅಭಿವೃದ್ದಿ ಸಾಧ್ಯ. ವಿಘಟನೆಯಿಂದ ಅವನತಿಗೆ ದಾರಿ ಮಾಡಿದಂತಾಗುತ್ತದೆ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ನಗರದಲ್ಲಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.
ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಪ್ರಚೋಧನಾಕಾರಿ ಭಾಷಣಗಳಿಂದ ದೇಶಕ್ಕೆ ಉಪಯೋಗವಿಲ್ಲ. ಎಲ್ಲರೂ ಒಗ್ಗೂಡಿ ದೇಶ ಕಟ್ಟುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸಮಾಜ ವಿದ್ರೋಹಿ ಕೃತ್ಯಗಳಿಗೆ ತಡೆಯೊಡ್ಡುವ ಕೆಲಸ ಆಗಬೇಕೆಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ಕೆಲವರು ವಿನಾಕಾರಣ ಜನರನ್ನು ಪ್ರಚೋಧನೆಗೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಅವಕಾಶ ನೀಡಬಾರದು. ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮುಸ್ಲಿಂ ಮುಖಂಡರಾದ ತಾಜುದ್ದೀನ್ ಷರೀಫ್ ಮಾತನಾಡಿ,ಸಮಾಜದಲ್ಲಿ ಶಾಂತಿ ನೆಲೆಸಬೇಕು.ಇದು ಎಲ್ಲ ಧರ್ಮಗಳ ತಿರುಳಾಗಿದೆ.ಮುಂಬರುವ ದಿನಗಳಲ್ಲಿ ಮುನ್ನಚ್ಚರಿಕೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮೆಲ್ಲರ ಉದ್ದೇಶ ಎಂದರು.
ಈ ವೇಳೆ ಮುಖಂಡರಾದ ಕಂಬೇಗೌಡ, ಗಿರೀಶ್, ಸೈಯದ್ ಮುಜೀಬ್, ಕೆ.ನಯಾಜ್ ಅಹಮದ್, ಗೌಸ್ಪಾಷ ಷೇಖ್, ಅಕ್ರಮುಲ್ಲಾ ಖಾನ್,ರಫೀಕ್, ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್, ಅನುಪಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.