ತುಮಕೂರು: ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಇಂದು ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ದೇವಾಲಯಕ್ಕೆ ಭೇಟಿ ನೀಡಿ, ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗೂಳೂರು ಗಣೇಶ ದೇವಾಲಯ ಸಮಿತಿ ಅಧ್ಯಕ್ಷರಾದ ಗೂಳೂರು ಶಿವಕುಮಾರ್, ಮುಖಂಡರಾದ ವಿಜಯಕುಮಾರ್, ಷಣ್ಮುಖಪ್ಪ, ಮರಿಚನ್ನಮ್ಮ, ಹೆಬ್ಬೂರು ಶ್ರೀನಿವಾಸಮೂರ್ತಿ, ಗೀತಾ ರುದ್ರೇಶ್, ಗೀತಮ್ಮ, ಅಬ್ಬಾಸ್, ಸುಕನ್ಯ, ವಸುಂಧರ, ಸಿದ್ದಲಿಂಗೇಗೌಡ, ಅದಿಲ್, ಗಿರೀಶ್ ಇವರುಗಳೊಂದಿಗೆ ಪೂಜೆಗೆ ಸಿದ್ದಗೊಳ್ಳುತ್ತಿರುವ ಗಣೇಶಮೂರ್ತಿ ನಿರ್ಮಾಣವನ್ನು ವೀಕ್ಷಿಸಿದ ನಂತರ, ಹಿರಿಯರಾದ ಗೂಳೂರು ಭೀಮರಾವ್ ಅವರಿಂದ ಗೂಳೂರು ಗಣೇಶ ಪ್ರತಿಷ್ಠಾನ ಹಿಂದಿನ ಪೌರಾಣಿಕ ಹಿನ್ನೆಲೆಯನ್ನು ತಿಳಿದರು.
ಈ ವೇಳೆ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ದಸರಾ ಉತ್ಸವವನ್ನು ಆಚರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ತಾಯಿ ಚಾಮುಂಡಿಗೆ ಎಲ್ಲಾ ರೀತಿಯ ಧಾರ್ಮಿಕ ಪೂಜಾ ವಿಧಿ, ವಿಧಾನಗಳು ಜರುಗುತ್ತಿದ್ದು, ಆರ್ಚಕರೊಬ್ಬರ ಸಲಹೆಯಂತೆ ಇಂದು ಗೂಳೂರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ದಸರಾ ಉತ್ಸವಕ್ಕೆ ಯಾವುದೇ ವಿಘ್ನಗಳು ಬಾರದಂತೆ ಬೇಡಿಕೊಳ್ಳಲಾಗಿದೆ. ಈ ವರ್ಷದ ದಸರಾ ತುಮಕೂರು ಜಿಲ್ಲೆಯ ಜನರ ಮನಸ್ಸಿನಲ್ಲಿ ಹತ್ತಾರು ವರ್ಷ ಉಳಿಯುವಂತಹ ದಸರಾ ಆಗಬೇಕು ಎಂಬುದು ನಮ್ಮ ಕೋರಿಕೆ ಹಾಗಾಗಿ ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಬೇಡಿಕೊಂಡಿದ್ದೇವೆ ಎಂದರು.
ಗೂಳೂರು ಗಣೇಶ ದೇವಾಲಯ ಸಮಿತಿ ಅಧ್ಯಕ್ಷ ಗೂಳೂರು ಶಿವಕುಮಾರ್ ಮಾತನಾಡಿ, ಗೂಳೂರು ಗಣೇಶನಿಗೆ ಐತಿಹಾಸಿಕ ಹಿನ್ನೆಲೆಯಲ್ಲಿದೆ. ಹೊಯ್ಸಳರ ಕಾಲದಲ್ಲಿ ಬೃಗು ಮಹರ್ಷಿಗಳಿಂದ ಸ್ಥಾಪಿಸಲ್ಟಟ ಗೂಳೂರು ಗಣೇಶನಿಗೆ ಕರ್ನಾಟಕದಲ್ಲಿಯೇ ಅಲ್ಲ, ಹೊರ ರಾಜ್ಯಗಳಲ್ಲಿಯೂ ಭಕ್ತರಿದ್ದಾರೆ. ಸಾಮಾನ್ಯವಾಗಿ ಗಣೇಶಮೂರ್ತಿ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿಸ್ಠಾಪಿಸುವುದು ವಾಡಿಕೆ. ಆದರೆ ಗೂಳೂರು ಗಣೇಶನನ್ನು ಗಣೇಶ ಚುತುರ್ಥಿಯಂದು ಊರಿನ 18 ಕೋಮಿನ ಜನರು ಮಂಗಳ ವಾದ್ಯದೊಂದಿಗೆ ಗ್ರಾಮದ ಕೆರೆಗೆ ತೆರಳಿ ಪೂಜೆ ಸಲ್ಲಿಸಿ, ಗಣೇಶಮೂರ್ತಿ ನಿರ್ಮಾಣಕ್ಕೆ ಬೇಕಾದ ಮಣ್ಣನ್ನು ತಂದು, ಶಿಲ್ಪಿ ಗುರುಮೂರ್ತಿ ಕುಟುಂಬದವರು ಗಣೇಶ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾರೆ ಎಂದರು. ಹೀಗೆ ನಿರ್ಮಾಣವಾದ ಗಣೇಶಮೂರ್ತಿಗೆ ವಿಜಯದಶಮಿಯ ದಿನ ಹೊಟ್ಟೆಯೊಳಗೆ ಕಡುಬು ಮತ್ತು ಮೊದಕವನ್ನು ತುಂಬಲಾಗುತ್ತದೆ. ನರಕ ಚತುರ್ದಶಿಯ ದಿನ ಗಣೇಶಮೂರ್ತಿಗೆ ದೃಷ್ಟಿಯಿಟ್ಟು, ಪೂಜಾ ವಿಧಿವಿಧಾನಗಳು ಆರಂಭಗೊಳ್ಳುತ್ತವೆ. ಸುಮಾರು ಒಂದು ತಿಂಗಳ ಕಾಲ ಪೂಜೆ ಸಲ್ಲಿಸಿದ ನಂತರ ಗಣೇಶ ಮೂರ್ತಿಯನ್ನು ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದೆ. ಈ ಉತ್ಸವದಲ್ಲಿ 18 ಕೋಮಿನ ಜನರು ಪಾಲ್ಗೊಳ್ಳುವುದು ಒಂದು ವಿಶೇಷ ಗೂಳೂರು ಶಿವಕುಮಾರ್ ನುಡಿದರು.
ಗಣೇಶಮೂರ್ತಿಯ ಶಿಲ್ಪಿ ಗುರುಮೂರ್ತಿ ಮಾತನಾಡಿ, ಹತ್ತಾರು ವರ್ಷಗಳಿಂದ ನಮ್ಮ ಕುಟುಂಬಸ್ಥರೇ ಈ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಇದು ಗಜ ಗಣೇಶ ಮೂರ್ತಿಯಾಗಿದ್ದು, ವಿಸರ್ಜನೆ ಸಂದರ್ಭದಲ್ಲಿ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಅಲಂಕೃತ ವಾಹನಕ್ಕೆ ಏರಿಸುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಇದನ್ನು ಅನೇಕ ವರ್ಷಗಳಿಂದ ಹೊನ್ನೇನಹಳ್ಳಿಯ ಭೋವಿ ಸಮುದಾಯ ನಡೆಸಿಕೊಂಡು ಬರುತ್ತಿದೆ. ಇವರೊಂದಿಗೆ ಇತರೆ ಸಮುದಾಯದವರು ತಮ್ಮಗೆ ವಹಿಸಿದ ಕಾರ್ಯವನ್ನು ಚಾಚುತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಹಿರಿಯ ಆರ್ಚಕರಾದ ಜಿ.ಕೆ.ಭೀಮರಾವ್ ಮಾತನಾಡಿ, ಬೃಗು ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟ ಗಣೇಶನಿಗೆ ಮೋದಕ, ಇಡುಗಾಯಿ, ಕಡುಬು ಎಂದರೆ ಬಲು ಪ್ರೀತಿ, ಅದನ್ನೇ ಪ್ರತಿನಿಧಿ ನೇವೆದ್ಯಕ್ಕೆ ಬಳಕೆ ಮಾಡಲಾಗುತ್ತದೆ. ಕಾರ್ತಿಕ ಮಾಸದ ಆರಂಭದಿಂದ ಮಾರ್ಗಶಿರ ಮಾಸದ ಆರಂಭದವರೆಗೆ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು.