ತುಮಕೂರು – ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವ-2024ರ ಚಿತ್ತಾಕರ್ಷಕ ಜಂಬೂಸವಾರಿ ಮೆರವಣಿಗೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಅಕ್ಟೋಬರ್ 12ರಂದು ನಡೆಯಲಿರುವ ಜಂಬೂಸವಾರಿ ಕುರಿತು ಸೋಮವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ವಿಜಯ ದಶಮಿಯಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆ ಕುರಿತು ಅಂತಿಮ ಸಿದ್ಧತೆಗಳನ್ನು ಚರ್ಚಿಸಲಾಯಿತು.
ಜಿಲ್ಲೆಯ ಭವ್ಯ ಸಂಸ್ಕøತಿಯನ್ನು ಅನಾವರಣಗೊಳಿಸುವ ರೀತಿಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತಿದ್ದು, ಇತ್ತೀಚೆಗಷ್ಟೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಲಂಕೃತ ಆನೆಗಳ ಮೆರವಣಿಗೆ ತಾಲೀಮು ನಡೆಸಲಾಗಿತ್ತು.
ಮೆರವಣಿಗೆಯಲ್ಲಿ ಏನೆಲ್ಲಾ ಇರಲಿದೆ?
ಚಿತ್ತಾಕರ್ಷಕ ಜಂಬೂಸವಾರಿ ಮೆರವಣಿಗೆಯಲ್ಲಿ ಕ್ರಮವಾಗಿ ಪೆÇಲೀಸ್ ಇಲಾಖೆಯ ಅಶ್ವದಳ 10 ಮೀ. ಜಾನಪದ ಕಲಾ ತಂಡಗಳು 20 ಮೀ. ಗತವೈಭವ ಸಾರುವ ಆಕರ್ಷಕ 30 ವಿಂಟೇಜ್ ಕಾರುಗಳು 200 ಮೀ. ಪೊಲೀಸ್ ಹಾಗೂ ಎನ್.ಸಿ.ಸಿ ಬ್ಯಾಂಡ್ 20 ಮೀ. 20 ಜೊತೆ ಎತ್ತುಗಳ ರಾಸು 20 ಮೀ. ಅಲಂಕೃತಗೊಂಡ ಟ್ಯಾಕ್ಟರ್‍ನಲ್ಲಿ ಜಿಲ್ಲೆಯ 70 ದೇವರುಗಳು 700 ಮೀ. ನಂತರ ಕಲಾ ತಂಡಗಳ ಸಾಲು 100 ಮೀ. ಹೀಗೆ ಒಟ್ಟು ಜಂಬೂಸವಾರಿ ಮೆರವಣಿಗೆಯ ಉದ್ದ ಸುಮಾರು 1290 ಮೀಟರ್ ಇರಲಿದೆ. ಅಲ್ಲದೆ, ಬಹುಮುಖ್ಯವಾಗಿ ಅಲಂಕಾರಗೊಂಡ ಆನೆಯ ಮೇಲೆ ನಾಡ ದೇವತೆ ಶ್ರೀಚಾಮುಂಡೇಶ್ವರಿ ದೇವಿ ವಿರಾಜಮಾನವಾಗಿ ಸಾಗಲಿದ್ದು, ತುಮಕೂರು ನಗರವು ಇಂತಹ ಸುಂದರ ಭವ್ಯ ಕ್ಷಣಗಳಿಗೆ ಅಂದು ಸಾಕ್ಷಿಯಾಗಲಿದೆ.
ಎಲ್ಲಿಂದ ಎಲ್ಲಿಗೆ ಸಾಗಲಿದೆ ಜಂಬೂಸವಾರಿ?
ಮೊದಲ ಬಾರಿಗೆ ನಗರದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಸುತ್ತಿರುವುದರಿಂದ ಜಂಬೂ ಸವಾರಿ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಸಹಜ.
ಅ.12ರಂದು ಶನಿವಾರ ಮಧ್ಯಾಹ್ನ 1ಗಂಟೆಗೆ ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ಸೇರಿದಂತೆ ಜಿಲ್ಲೆಯ ಗಣ್ಯರು, ಅಧಿಕಾರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಆನೆಯ ಅಂಬಾರಿಯ ಮೇಲಿರುವ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ನಂತರ ಅಶೋಕ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಿಂದ ಅಮಾನಿಕೆರೆ ಮಾರ್ಗವಾಗಿ ಹನುಮಂತಪುರ, ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆ ಬಳಸಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಮೂಲಕ ಬಿ.ಎಚ್.ರಸ್ತೆ ಮಾರ್ಗವಾಗಿ ಸುಮಾರು ಸಂಜೆ 4.30ರ ಹೊತ್ತಿಗೆ ಮುಖ್ಯ ವೇದಿಕೆಯಿರುವ ಶಿಕ್ಷಣ ಭೀಷ್ಮ ಶ್ರೀ ಎಚ್.ಎಂ.ಗಂಗಾಧರಯ್ಯ ಅವರ ಮಹಾಧ್ವಾರ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಲಿದೆ.
ನಂತರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮೆರವಣಿಗೆ ಅಂತ್ಯಗೊಂಡು ಕಳೆದ ಒಂಭತ್ತು ದಿನಗಳ ಕಾಲ ವಿಶೇಷ ಅಲಂಕಾರ ಭೂಷಿತ ದೇವಿಯ ತಾತ್ಕಾಲಿಕ ದೇವಾಲಯ ಅನುಸರಿಸಿಕೊಂಡು ಎಲ್ಲ ಟ್ರ್ಯಾಕ್ಟರ್ ವಾಹನಗಳಲ್ಲಿನ ದೇವರುಗಳಿಗೆ ಶಮಿ ಪೂಜೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
ದಸರಾ ಜಂಬೂಸವಾರಿ ಮೆರವಣಿಗೆಯ ನೇತೃತ್ವವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮ ಅವರ ಅಧ್ಯಕ್ಷತೆಯ ಉಪ ಸಮಿತಿ ಸದಸ್ಯರ ತಂಡ ವಹಿಸಲಿದೆ. ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.