ತುಮಕೂರು : ದಸರಾ ಉತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 11ರಂದು ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಂಡಿರುವ ಮಿನಿ ಮ್ಯಾರಥಾನ್‍ಗೆ ಗೃಹ ಹಾಗೂ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ದಸರಾ ಉತ್ಸವದ ಅಂಗವಾಗಿ ಈ ಮ್ಯಾರಾಥಾನ್ ಅನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಸಾರ್ವಜನಿಕರು, ಸರ್ಕಾರಿ ನೌಕರರು, ಮಹಿಳೆಯರು, ಯುವಕರು, ಸಂಘ-ಸಂಸ್ಥೆಗಳು, ಹೋಂ-ಗಾಡ್ರ್ಸ್ ಸೇರಿದಂತೆ ಮತ್ತಿತರ ಸಂಘಟನೆಗಳು ಮ್ಯಾರಥಾನ್‍ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮ್ಯಾರಥಾನ್ ಮಾರ್ಗ :
ಮ್ಯಾರಥಾನ್ ಅಂದು ಬೆಳಿಗ್ಗೆ 7 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಡಾ|| ಶ್ರೀ ಶಿವಕುಮಾರಸ್ವಾಮೀಜಿ ವೃತ್ತ, ಎಸ್‍ಐಟಿ ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಎಸ್. ಪುರಂ ಮುಖ್ಯರಸ್ತೆ, ಭದ್ರಮ್ಮ ಛತ್ರ, ಬಿ.ಜಿ.ಎಸ್. ಸರ್ಕಲ್, ಕಾಲ್‍ಟ್ಯಾಕ್ಸ್, ಗುಬ್ಬಿ ಗೇಟ್, ದಿಬ್ಬೂರು ಕ್ರಾಸ್, ಡಬಲ್ ರೋಡ್, ಅಮಾನಿಕೆರೆ ರಸ್ತೆ, ಡಿಸಿ ಕಚೇರಿ ರಸ್ತೆ, ಕೆಇಬಿ ಚೌಲ್ಟ್ರಿ, ಕೋತಿ ತೋಪು ವೃತ್ತ, ತಮ್ಮಯ್ಯ ಹಾಸ್ಪಿಟಲ್ ವೃತ್ತದ ಮೂಲಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.
ವಿಜೇತರಿಗೆ ನಗದು ಬಹುಮಾನ :
ಮ್ಯಾರಥಾನ್‍ನಲ್ಲಿ ಪಾಲ್ಗೊಂಡ ವಿಜೇತ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುವುದು. ನಿಗಧಿತ ಮಾರ್ಗವನ್ನು ತಲುಪಿದ ಮೊದಲ 6 ಪುರುಷರಿಗೆ ಹಾಗೂ 6 ಮಹಿಳಾ ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ., ದ್ವಿತೀಯ 8,000 ರೂ., ತೃತೀಯ 6,000 ರೂ., ನಾಲ್ಕನೇ ಬಹುಮಾನ 4,000 ರೂ., ಐದು ಹಾಗೂ ಆರನೇ ಬಹುಮಾನವಾಗಿ ತಲಾ 2,000 ರೂ.ಗಳ ನಗದು ಬಹುಮಾನ ನೀಡಲಾಗುವುದು. ಮ್ಯಾರಥಾನ್‍ನಲ್ಲಿ ಪಾಲ್ಗೊಂಡ ಎಲ್ಲರಿಗೂ ಇ-ಪ್ರಮಾಣಪತ್ರ ಹಾಗು ಟೀ-ಶರ್ಟ್, ಕ್ಯಾಪ್‍ಗಳನ್ನು ವಿತರಿಸಲಾಗುವುದೆಂದು ತಿಳಿಸಿದರು.
ಮ್ಯಾರಥಾನ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಯಶಸ್ವಿಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಸರಾ ಕ್ರೀಡಾ ಸಮಿತಿಗೆ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ಬಿ. ವಿ. ಅಶ್ವಿಜ ಮಾತನಾಡಿ, ನಗರ ವ್ಯಾಪ್ತಿಯ ತುಮಕೂರು ವಿವಿ ಕಾಲೇಜು, ಮೆಡಿಕಲ್, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಾನೂನು, ಐಟಿಐ ಸೇರಿದಂತೆ ಎಲ್ಲಾ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು. ಪಾಲಿಕೆಯಿಂದ ಪೌರ ಕಾರ್ಮಿಕರು ಸೇರಿದಂತೆ ಸುಮಾರು 500 ನೌಕರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮ್ಯಾರಾಥಾನ್ ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಬ್ಬಡಿ, ಖೋ-ಖೋ, ವಾಲಿಬಾಲ್ ಮತ್ತು ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು, ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.