ಅ. 13 ರಂದು ರೈಲ್ವೇ ಪ್ರಯಾಣಿಕರ ವೇದಿಕೆ ದಶಮಾನೋತ್ಸವ

ತುಮಕೂರು: ರೈಲು ಪ್ರಯಾಣಿಕರನ್ನು ಸಾಂಸ್ಕøತಿಕ ಮನಸುಗಳನ್ನು ಒಗೂಡಿಸಿ, ಅವರ ಕುಂದುಕೊರತೆಗಳನ್ನು ರೈಲ್ವೆ ಅಧಿಕಾರಿಗಳ ಮೂಲಕ ಬಗೆಹರಿಸಿ ಪ್ರಯಾಣಿಕರ ಹಿತ ಕಾಪಾಡಿಕೊಂಡು ಬರುತ್ತಿರುವ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಗೆ ಈಗ ದಶಮಾನೋತ್ಸವ ಆಚರಿಸುತ್ತಿದೆ.

ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಈ ತಿಂಗಳ 13ರಂದು ಭಾನುವಾರ ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಕೇಂದ್ರದ ಜಲಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಈ ಸಂದರ್ಭವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಜಿಲ್ಲೆಯ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳೊಂದಿಗೆ ವೇದಿಕೆ ಚರ್ಚಿಸಿ ಜಿಲ್ಲೆಯಲ್ಲಿ ಆಗಬೇಕಿರುವ ರೈಲ್ವೇ ಯೋಜನೆಗಳ ಬಗ್ಗೆ ಸಿದ್ಧಪಡಿಸಿರುವ ಕಿರುಪುಸ್ತಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬಿಡುಗಡೆಗೊಳಿಸುವರು.

ದಶಮಾನೋತ್ಸವದ ಸವಿನೆನಪಿಗೆ ಬರೀ ರೈಲಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಹೊಂದಿರುವ `ನಮ್ಮ ರೈಲು’ ಸ್ಮರಣ ಸಂಚಿಕೆಯನ್ನು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಬಿಡುಗಡೆ ಮಾಡುವರು. ರೈಲಿಗೆ ಸಂಬಂಧಿಸಿದ ಬಹುತೇಕ ಎಲ್ಲ ಮಾಹಿತಿಯನ್ನು ಒಳಗೊಂಡಿರುವ ಈ ಸಂಚಿಕೆ ಸಂಗ್ರಹಯೋಗ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ಜಯಪ್ರಕಾಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್. ಆರ್.ಶ್ರೀನಿವಾಸ್, ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು ಎಂದರು.

ಈ ವೇಳೆ ಮಾಜಿ ಸಂಸದರಾದ ಜಿ.ಎಸ್.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ಮತ್ತು ನೈಋತ್ಯ ರೈಲ್ವೇ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಡಾ. ಅನೂಪ್ ದಯಾನಂದ್ ಸಾಧು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರೈಲಿನ ಬಗ್ಗೆ ಆಸಕ್ತಿ ಹೆಚ್ಚಿಸಲು ದಶಮಾನೋತ್ಸವದ ಅಂಗವಾಗಿ ತುಮಕೂರು ನಗರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗಿರುವ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು. ಅಲ್ಲದೆ, 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ರೈಲ್ವೇ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು ಎಂದು ಹೇಳಿದರು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್ ಮಾತನಾಡಿ, ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಜಿಲ್ಲೆಯ ರೈಲ್ವೇ ಪ್ರಯಾಣಿಕರಿಗೆ ಆಗಬೇಕಿರುವ ಎಲ್ಲ ರೀತಿಯ ಸೌಲಭ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.ರೈಲಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಆಗಬೇಕಿರುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ದಶಮಾನೋತ್ಸವ ಕಾರ್ಯಕ್ರಮ ಚಿಮ್ಮು ಹಲಗೆಯಾಗಲಿದ್ದು ಎಂದರು.

ವೇದಿಕೆ ಉಪಾಧ್ಯಕ್ಷರಾದ ಪರಮೇಶ್, ಮಾಧವ ಮೂರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್, ರವಿಶಂಕರ್ ಹಾಜರಿದ್ದರು.

Leave a Reply

Your email address will not be published. Required fields are marked *