ತುಮಕೂರು- ಆರ್.ಜಿ.ಕರ್ ಸರ್ಕಾರಿ ವೈದ್ಯಕಿಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಕಿರಿಯ ವೈದ್ಯರ ಉಪವಾಸ ಬೆಂಬಲಿಸಿ ದೇಶಾದ್ಯಂತ ನಡೆಸುತ್ತಿರುವ ಅಮರಣಾಂತ ಉಪವಾಸ ಬೆಂಬಲಿಸಿ ನಗರದಲ್ಲೂ ಸತ್ಯಾಗ್ರಹ ನಡೆಸಲಾಯಿತು.
ಕೊಲ್ಕತ್ತಾದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 11ನೇ ದಿನ ಪೂರ್ಣಗೊಳಿಸಿದ್ದು, ದೇಶಾದ್ಯಂತ ಈ ಹೋರಾಟ ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಸಿದ್ದಾರ್ಥ, ಸಿದ್ದಗಂಗಾ, ಶ್ರೀದೇವಿ ವೈದ್ಯಕಿಯ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಏಕದಿನ ಉಪನ್ಯಾಸ ಸತ್ಯಾಗ್ರಹ ಹೋರಾಟ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಕೊಲ್ಕತ್ತಾದಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ 11 ದಿನ ಪೂರ್ಣಗೊಳಿಸಿದ್ದು, ಅಲ್ಲಿನ ರಾಜ್ಯ ಸರ್ಕಾರ ಸತ್ಯಾಗ್ರಹ ಹೋರಾಟಕ್ಕೆ ಮಣಿಯುವಂತೆ ಕಾಣುತ್ತಿಲ್ಲ. ಮಾನವೀಯತೆ ಮರೆತು, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.
ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಬೆಚ್ಚಿ ಬೀಳುಸುವಂತಿದ್ದು, ಇಂತಹ ಸನ್ನಿವೇಶದಲ್ಲಿ ವೈದ್ಯಕಿಯ ಸಿಬ್ಬಂದಿ ಆರೋಗ್ಯ ಸೇವೆ ಒದಗಿಸುವುದು ಕಷ್ಟವಾಗಲಿದೆ. ಸರ್ಕಾರಿ, ಖಾಸಗಿ ವೈದ್ಯಕಿಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಕ್ಲಿನಿಕ್?ಗಳಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿಯ ರಕ್ಷಣೆಗೆ ನಮ್ಮ ರಾಜ್ಯದಲ್ಲಿ ಸರ್ಕಾರ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಾಯಿಸಿದರು.
ಸಿಎಂಗೆ ಮನವಿ
ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕಿಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಜಿಲ್ಲೆಯಲ್ಲು ವೈದ್ಯಕಿಯ ಸಿಬ್ಬಂದಿ ಸತ್ಯಾಗ್ರಹ ಹೋರಾಟ ಮಾಡಿದ್ದು ಆರೋಗ್ಯ ಸಿಬ್ಬಂದಿ ಜೀವಭಯದಿಂದ ಕರ್ತವ್ಯ ನಿರ್ವಹಿಸಬೇಕಿರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಒದಗಿಸುವಂತೆ, ನಿರ್ಭೀತಿಯಿಂದ ರೋಗಿಗಳ ಸೇವೆಗೆ ವಾತಾವರಣ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರ ಮೂಲಕ ಐಎಂಎ ಜಿಲ್ಲಾ ಶಾಖೆ ನಿಯೋಗವು ಸಲ್ಲಿಸಿತು.
ಈ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಎಸ್.ಭೂಷಣ್, ಮಾಜಿ ಜಿಲ್ಲಾಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ, ಕಾರ್ಯದರ್ಶಿ ಡಾ. ಪ್ರದಿಪ್ ಪ್ರಭಾಕರ್, ಡಾ.ಜೆ.ಬಿ.ನಿಜಗಲ್ಮಠ್, ಡಾ. ಗಿರಿಜಾ, ಡಾ. ರಾಜೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.