ಮೊಬೈಲ್ ನಿಂದ ಹೊರಬಂದು ವಿದ್ಯಾರ್ಥಿಗಳು ಆರೋಗ್ಯಕರ ಸಮಾಜ ನಿರ್ಮಿಸಬೇಕು: ಬಾ. ಹ. ರಮಾಕುಮಾರಿ

ತುಮಕೂರು: ಮೊಬೈಲ್ ವ್ಯಸನಿಗಳಾಗಿರುವ ವಿದ್ಯಾರ್ಥಿಗಳು ಅದರಿಂದ ಹೊರಬಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸಮಾಜಮುಖಿಗಳಾಗಬೇಕು ಎಂದು ಲೇಖಕಿ ಬಾ. ಹ. ರಮಾಕುಮಾರಿ ಹೇಳಿದರು.

ವಿವಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗವು ಮಂಗಳವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ‘ಯುವಜನತೆಯ ಮುಂದಿರುವ ಸವಾಲುಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಬಲ ಮನಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಹುಟ್ಟಬೇಕು. ಸಮಾಜದ ಸಮಸ್ಯೆಗಳಿಗೆ ಕಿವಿಗೊಡದೆ, ಕ್ರಿಯಾಶೀಲತೆ ಇಲ್ಲದ ಬದುಕನ್ನು ಸಾಗಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಪಂಚೇದ್ರಿಯಗಳು ಸ್ತಬ್ಧವಾಗಿವೆ. ವೃತ್ತಿ ಮತ್ತು ಪ್ರವೃತ್ತಿಯ ವ್ಯತ್ಯಾಸ ತಿಳಿಯದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೆರಿಟ್ ಶಿಕ್ಷಣಕ್ಕಿಂತ ಅನುಭವ-ಅನುಭಾವದ ಶಿಕ್ಷಣ ಮುಖ್ಯ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ, ವಾಸ್ತವತೆಯನ್ನು ಎತ್ತಿತೊರಿಸುವ ಜ್ಞಾನದ ಅವಶ್ಯಕತೆಯಿದೆ. ದುರ್ಬಲ ಹಾಗೂ ಸಮತೋಲನದ ಮನಸ್ಥಿತಿಯಿಂದ ಸಮಸ್ಯೆಗಳೇ ಹೆಚ್ಚು. ಪ್ರಬಲ ಮನಸ್ಥಿತಿ ಬದುಕಿಗೆ ಅವಕಾಶಗಳನ್ನು ತೆರೆದಿಡುತ್ತವೆ ಎಂದು ತಿಳಿಸಿದರು.

ಕವಯತ್ರಿ ರಂಗಮ್ಮ ಹೊದೇಕಲ್ ಮಾತನಾಡಿ, ಯುವಸಮೂಹವನ್ನು ಒಂದೇ ತಕ್ಕಡಿಯಲ್ಲಿ ತೂಗಿ, ವ್ಯಕ್ತಿತ್ವಕ್ಕೆ ಪೆಟ್ಟಾಗುವ ತೀರ್ಪು ನೀಡಬಾರದು. ಅವರಲ್ಲಿ ಕನಸುಗಳನ್ನು ಬಿತ್ತಬೇಕು. ಸಾಹಿತ್ಯ-ಕಲೆಯ ಆಸ್ಥೆ ಚಿಗುರಿಸಬೇಕು. ಸ್ವಂತಿಕೆ, ಸ್ವಂತದ ಚಹರೆಯ ಮಹತ್ವವನ್ನು ತಿಳಿಸಿಕೊಡಬೇಕು. ಅವರ ಆಸೆ ಕನಸುಗಳನ್ನು ಕೊಂದು ಬದುಕನ್ನು ಬಂಜರು ಮಾಡಬಾರದು ಎಂದರು.

ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ಹಿರಿಯ ಪ್ರಾಧ್ಯಾಪಕ ಪ್ರೊ. ಪರಶುರಾಮ ಕೆ. ಜಿ. ಅವರು ಪದವಿಯಲ್ಲಿ ಸಮಾಜಕಾರ್ಯ ವಿಷಯವನ್ನು ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ವಿವಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಂಯೋಜಕಿ ಡಾ. ಗಿರಿಜಾ ಕೆ. ಎಸ್., ಉಪನ್ಯಾಸಕರಾದ ಡಾ. ತೋತ್ಯಾ ನಾಯ್ಕ, ಪ್ರಹ್ಲಾದ ಜಿ., ಭಾನುನಂದನ್ ಬಿ. ಸಿ., ಹೇಮಂತ್ ಕುಮಾರ್ ಕೆ. ಪಿ., ರಮೇಶ್ ಎಸ್., ಸಿದ್ದೇಶ್ ಸಿ., ಡೈಸನ್ ಪಿ. ಟಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *