ನಮ್ಮ ಅನುಭವಗಳೇ ನಮಗೆ ಗುರು: ಡಾ. ಜಿ. ಬಿ. ಹರೀಶ್

ತುಮಕೂರು: ನಮ್ಮ ಅನುಭವಗಳೇ ನಮಗೆ ಗುರುವಾಗಿದ್ದು, ಸ್ವಂತ ತಿಳುವಳಿಕೆಯನ್ನು ಅದರಿಂದ ಪಡೆಯಬೇಕೆಂದು ರಮಣ ಮಹರ್ಷಿಗಳು ಸಾರಿದರು ಎಂದು ಸಾಹಿತಿ ಡಾ. ಜಿ. ಬಿ. ಹರೀಶ್ ಹೇಳಿದರು.

ತುಮಕೂರು ವಿವಿಯ ರಮಣ ಮಹರ್ಷಿ ಅಧ್ಯಯನ ಪೀಠವು ಗುರುವಾರ ಆಯೋಜಿಸಿದ್ದ ‘ಆಧುನಿಕತೆಯ ಹಿನ್ನಲೆಯಲ್ಲಿ ರಮಣ ಮಹರ್ಷಿಗಳ ಚಿಂತನೆಗಳ ಪ್ರಸ್ತುತತೆ’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ರಮಣರು ಹೇಳಿದ ಹಾಗೆ ‘ದೇಹಕ್ಕೆ ಮಾತ್ರ ಸಾವು, ಆತ್ಮಕ್ಕೆ ಸಾವಿಲ್ಲ. ನಿಮ್ಮ ಬಿಂಬವನ್ನು ನೀವು ಅರಿಯಬೇಕು. ನಿಮ್ಮ ಎಚ್ಚರ ಎಂದಿಗೂ ಸತ್ಯವಲ್ಲ. ಜಾಗೃತ, ಸ್ವಪ್ನ, ಸ್ವಪ್ನವಲ್ಲದ ವಿಷಯಗಳನ್ನು ಪೂರ್ಣವಾಗಿ ಅರಿಯಬೇಕಿದೆ. ಪ್ರಜ್ಞೆಯನ್ನು ದಾಟಿದ ಉನ್ನತ ಪ್ರಜ್ಞೆಯನ್ನು ಕಂಡುಕೊಳ್ಳಬೇಕು. ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳುವ ಮೂಲಕ ಸಾರ್ಥಕತೆಯನ್ನು ಪಡೆಯಬಹುದಾಗಿದೆ’ ಎಂದು ತಿಳಿಸಿದರು.

ರಮಣರಿಗೆ ಗುರುಗಳಿರಲಿಲ್ಲ. ಯಾವುದೇ ಮಂತ್ರ, ಉಪದೇಶ, ಪದ್ಯಗಳನ್ನು ಪಠಿಸಲಿಲ್ಲ. ನಿಶ್ಯಬ್ಧ ಹಾಗೂ ಬದ್ಧವಾಗಿ ಒಂದೆಡೆ ಕುಳಿತುಕೊಂಡರು. ಎಂದಿಗೂ ತಮ್ಮನ್ನು ಮಹರ್ಷಿಗಳು ಎಂದು ಕರೆದುಕೊಳ್ಳಲಿಲ್ಲ. ಜಗತ್ತಿನ ಅನೇಕ ಮಹಾನ್ ವ್ಯಕ್ತಿಗಳು ಹಾಗೂ ಮಹರ್ಷಿಗಳನ್ನು ಭೇಟಿ ಮಾಡುತ್ತಿದ್ದರು. ಅವರದ್ದು ಎನ್ನುವುದು ಯಾವುದು ಇರಲಿಲ್ಲ. ತನ್ನ ಪಾಡಿಗೆ ತಾನು ಇದ್ದರು. ಹುಡುಕುವುದು ಏನೂ ಇಲ್ಲ ಹುಟ್ಟಿದ ಸಕಲರಲ್ಲಿ ಜ್ಞಾನ ಇದೆ. ಆದರೆ ಅದರ ಅನುಭವ ಇರುವುದಿಲ್ಲ. ಆ ಜ್ಞಾನವು ಅನುಭವವೆಂಬ ಗುರುಗಳ ಮೂಲಕ ಜಾಗೃತಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಸಿಂಡಿಕೇಟ್ ಸದಸ್ಯ ಡಾ. ರಾಜೀವಲೋಚನ, ರಮಣ ಮಹರ್ಷಿಗಳು ಭಾರತೀಯ ಋಷಿ ಮುನಿಗಳು ಅಧ್ಯಾತ್ಮದ ಬಗೆಗೆ ಹುಡುಕಾಟ ನಡೆಸುತ್ತಿದ್ದರು. ಬದುಕಿನ ಅಂತ್ಯದ ಬಗೆಗೆ ಸಾಕಷ್ಟು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದರು. ತನ್ನ ಬಗ್ಗೆ ಮೊದಲು ಅರಿಯಬೇಕು ಎಂಬ ತತ್ವವನ್ನು ಸಾರಿದರು ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ವಿವಿಯ ರಮಣ ಮಹರ್ಷಿ ಅಧ್ಯಯನ ಪೀಠದ ಸಂಯೋಜಕ ಡಾ. ಸುಬ್ರಹ್ಮಣ್ಯ ಶರ್ಮಾ ವಿ., ಪ್ರಸ್ತುತ ದಿನಗಳಲ್ಲಿ ಅಧ್ಯಾತ್ಮದ ಬಗೆಗೆ ಕೆಲವರಲ್ಲಿ ಅಸಡ್ಡೆ ಉಂಟಾಗುತ್ತಿದೆ. ಅಧ್ಯಾತ್ಮ ನಮ್ಮ ಮೂಲ ಬೇರು. ಸಮಾಜದ ಬಗ್ಗೆ ಎಷ್ಟೇ ಅರಿತರೂ ನಮ್ಮನ್ನು ನಾವು ಅರಿಯುವುದೇ ರಮಣರ ಮೂಲ ಉದ್ದೇಶವಾಗಿತ್ತು ಎಂದು ಹೇಳಿದರು.

‘ರಮಣ ಮಹರ್ಷಿ ಬಾಹ್ಯ ಜೀವನ, ಆಂತರಿಕ ಸಾಧನೆಯ ಮಜಲುಗಳು’ ಹಾಗೂ ‘ರಮಣ ಮಹರ್ಷಿಗಳ ಮತ್ತು ಭಾರತೀಯ ತತ್ವಶಾಸ್ತ್ರ’ ಕುರಿತು ಗೋಷ್ಠಿಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಗೀತಾ ವಸಂತ, ಶಿವಮೊಗ್ಗದ ಶ್ರೀ ರಮಣ ಮಹರ್ಷಿ ಅಧ್ಯಯನ ಕೇಂದ್ರದ ಉಪನ್ಯಾಸಕ ವಿನಾಯಕ ಭಾಗವಹಿಸಿದ್ದರು. ವಿವಿಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.. ಬಿ. ಕರಿಯಣ್ಣ ಹಾಗೂ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಶೇಟ್ ಎಂ. ಪ್ರಕಾಶ್ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಮಣ ಮಹರ್ಷಿ ಅಧ್ಯಯನ ಕೇಂದ್ರದ ಡಾ. ಶಾರದಾ ನಟರಾಜನ್ ಸಮಾರೋಪ ಭಾಷಣ ಮಾಡಿದರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜûಮ್ ಜûಮ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು. ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಟಿ. ಎನ್. ವಂದಿಸಿದರು.

Leave a Reply

Your email address will not be published. Required fields are marked *