ತುಮಕೂರು: ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಗುರುವಾರ ನಗರದ 6ನೇ ವಾರ್ಡಿನ ದಿಬ್ಬೂರು ಪ್ರದೇಶ ಬಹತೇಕ ಜಲಾವೃತವಾಗಿ ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿಬ್ಬೂರಿನ ಮುಖ್ಯರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೂ ಸಂಚಕಾರ ಎದುರಾಗಿದೆ.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ತಂಡ ಪರಿಹಾರ ಕ್ರಮಗಳನ್ನು ಆರಂಭಿಸಿದೆ.
ದಿಬ್ಬೂರಿನಲ್ಲಿ ಸುಮಾರು 50 ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದ್ದು, ಅಂತಹ ಮನೆಗಳ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಹಾಗೂ ನಗರಪಾಲಿಕೆ ಕ್ರಮ ತೆಗೆದುಕೊಂಡಿದೆ. ನಗರ ಸಮೀಪದ ಕರೆಗಳು ತುಂಬಿ ಕೋಡಿ ಹರಿದ ಪರಿಣಾಮ ಎಲ್ಲಾ ಕೆರೆಗಳ ನೀರು ಅಮಾನಿಕೆರೆ ಸೇರಿ ಅಲ್ಲಿಂದ ದಿಬ್ಬೂರು ಮೂಲಕ ಹೊರಗೆ ಹರಿಯುತ್ತಿರುವುದರಿಂದ ಈ ಭಾಗ ಜಲಾವೃತವಾಗಿ ಸಮಸ್ಯೆಯಾಗಿದೆ. ಇಲ್ಲಿನ ರಾಜಕಾಲುವೆಯ ಸಾಮಥ್ರ್ಯ ಮೀರಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಕಳೆದ ಒಂದೂವರೆ ತಿಂಗಳಿನಿಂದ ಮಳೆ ಬೀಳುತಿದ್ದು ಕೆರೆಗಳು ತುಂಬಿವೆ. ಸತ್ಯಮಂಗಲ ಕೆರೆ, ಅಕ್ಕತಂಗಿ ಕೆರೆ, ದೇವರಾಯಪಟ್ಟಣ ಕರೆಗಳು ತುಂಬಿ ಕೋಡಿ ಹರಿಯುತ್ತಿವೆ. ಈ ಎಲ್ಲಾ ಕೆರೆಗಳ ಕೋಡಿ ನೀರು ಅಮಾನಿಕೆರೆಗೆ ಹರಿದು ಬರುತ್ತಿದ್ದು, ಮಳೆ ಹೆಚ್ಚಾದರೆ ನೀರಿನ ಹರಿವಿನ ಪ್ರಮಾಣವೂ ಹೆಚ್ಚುತ್ತದೆ. ದಿಬ್ಬೂರು ಈ ಭಾಗದ ರಾಜಕಾಲುವೆಯನ್ನು ಅಗಲಗೊಳಿಸಿ ಹರಿವಿನ ಸಾಮಥ್ರ್ಯ ಹೆಚ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಶಾಸಕ ಜ್ಯೋತಿಗಣೇಶ್ ಅವರು ದಿಬ್ಬೂರು, ಗಾರ್ಡನ್ ರಸ್ತೆ, ಬಟವಾಡಿಯ ಅಕ್ಕತಂಗಿ ಕೆರೆ, ಹೊಸಳಯ್ಯನ ತೋಟ, ದೇವರಾಯಪಟ್ಟಣ ಕೆರೆಗಳಿಗೆ ಭೇಟಿ ನೀಡಿ ಅಲ್ಲಿನ ಮಳೆಯಿಂದ ಆಗಿರುವ ಹಾನಿ, ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಅಮಾನಿಕೆರೆ ಕೋಡಿ ಅಗಲ ಮಾಡಲಾಗಿದೆ. ಮುಂದೆ ರಿಂಗ್ ರಸ್ತೆಯಲ್ಲಿ ದೊಡ್ಡ ಗಾತ್ರದ ಸೇತುವೆ ನಿರ್ಮಾಣ ಮಾಡಿದ ಕಾರಣ ಎದುರಾಗಬಹುದಿದ್ದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
ನಾಗರೀಕರಿಗೆ ಮನವಿ
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸೂಚನೆ ಇರುವ ಕಾರಣ ನಗರದ ತಗ್ಗು ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಬೇಕು, ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹ ಪ್ರದೇಶದ ಜನರನ್ನು ಮನವೊಲಿಸಿ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ವಾಡಿಕೆಗಿಂಥಾ ಶೇಕಡ 50ರಷ್ಟು ಹೆಚ್ಚು ಮಳೆಯಾಗಿದೆ. ಹೇಮಾವತಿ ನೀರಿನಿಂದ ಸುಮಾರು 70 ಕೆರೆಗಳು ತುಂಬಿವೆ, ಶೇಕಡ 90ರಷ್ಟು ಇತರೆ ಕೆರೆಗಳು ತುಂಬಿವೆ. ದಿಬ್ಬೂರಿನಲ್ಲಿ ಕೆರೆ ನೀರು ಹರಿದು ಸಮಸ್ಯೆಯಾಗಿದೆ. ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮುಖ್ಯವಾಗಿ ಇಲ್ಲಿನ ರಾಜಕಾಲುವೆ ಸರ್ವೆ ಮಾಡಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ದಿಬ್ಬೂರು ಮುಖ್ಯ ರಸ್ತೆ ಹಾಗೂ ತೋಟದ ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಅಂತಹ ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮಾತನಾಡಿ, ಅಮಾನಿಕೆರೆಯ ಮೇಲ್ಭಾಗದ ಕೆರೆಗಳು ತುಂಬಿ ಕೋಡಿ ಹರಿದಿರುವುದರಿಂದ ಅಮಾನಿಕೆರೆ ಕೋಡಿ ನೀರಿನ ಪ್ರಮಾಣ ಹೆಚ್ಚಾಗಿ ದಿಬ್ಬೂರಿನಲ್ಲಿ ಇಂದು ಮಧ್ಯಾಹ್ನದಿಂದ ಈ ಸಮಸ್ಯೆಯಾಗಿದೆ. ರಾಜಕಾಲುವೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಪೊಲೀಸ್, ಕಂದಾಯ, ಅಗ್ನಿಶಾಮಕ ದಳ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ ಹಾಗೂ ಈ ಸಂದರ್ಭದಲ್ಲಿ ಮುಖಂಡರಾದ ಮನೋಹರಗೌಡ, ಮಹೇಶ್ಬಾಬು, ಶ್ರೀನಿವಾಸ್, ಡಿ.ಆರ್.ಬಸವರಾಜು, ಮುನಿಯಪ್ಪ ಮುಂತಾದವರು ಇದ್ದರು.