ಭ್ರಷ್ಟಾಚಾರ ನಿಮೂರ್ಲನೆಯ ಅರಿವು ವಿದ್ಯಾರ್ಥಿಗಳಿಂದ ಆರಂಭವಾಗಬೇಕು

ತುಮಕೂರು: ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೊಳಿಸಿವೆ. ಭ್ರಷ್ಟಾಚಾರ ನಿಮೂರ್ಲನೆಯ ಅರಿವು ವಿದ್ಯಾರ್ಥಿಗಳಿಂದ ಆರಂಭವಾಗಬೇಕು ಎಂದು ಜಿಲ್ಲಾ ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ ಎ. ವಿ. ಹೇಳಿದರು.

ಜಿಲ್ಲಾ ಕರ್ನಾಟಕ ಲೋಕಾಯುಕ್ತ ಇಲಾಖೆಯ ವತಿಯಿಂದ ತುಮಕೂರು ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವಿನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ, ಜಿಲ್ಲಾ ಕಾರಾಗೃಹದಲ್ಲಿ ಭ್ರಷ್ಟಾಚಾರದ ಮೊಕದ್ದಮೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ದುರಾಸೆಯ ಸ್ವಭಾವದಿಂದ ಮನುಷ್ಯನಲ್ಲಿ ನೈತಿಕ ಮೌಲ್ಯಗಳು ಕುಸಿದಿವೆ. ಎಲ್ಲೆಡೆ ಭ್ರಷ್ಟಾಚಾರದ ಬೇರು ವಿಸ್ತಾರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಸೌಲಭ್ಯಗಳಿದ್ದರೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುತ್ತಿರುವುದು ವಿಷಾದನೀಯ. ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಭ್ರಷ್ಟತೆಯನ್ನು ಮೈಗೂಡಿಸಿಕೊಂಡು, ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ಅಧಿಕಾರಿಗಳಿಗೆ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಆರ್. ಮಗದುಮ್ ಅವರು ಭ್ರಷ್ಟಾಚಾರದಿಂದ ಆಗುತ್ತಿರುವ ಅನಾಹುತಗಳು, ಸರ್ಕಾರಿ ಉದ್ಯೋಗ ಪಡೆಯಲು ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಸರ್ಕಾರಿ ಕಚೇರಿಗಲಲ್ಲಿ ನಡೆಯುತ್ತಿರವ ಭ್ರಷ್ಟಾಚಾರ, ಭ್ರಷ್ಟಾಚಾರ ನಿಗ್ರಹಿಸಲು ಕೇಂದ್ರ ಸರ್ಕಾರವು ರಚಿಸಿರುವ ಕೇಂದ್ರ ಜಾಗೃತ ಆಯೋಗ, ಭ್ರಷ್ಟಾಚಾರ ವಿರೋಧಿ ಇಲಾಖೆ, ಸಾರ್ವಜನಿಕ ಜಾಗೃತಿ, ಕಾನೂನುಗಳ ಕುರಿತು ತಿಳಿಸಿದರು.

ಜಿಲ್ಲಾ ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಉಪಾಧೀಕ್ಷಕ ರಾಮಕೃಷ್ಣ ಕೆ. ಜಿ. ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೆÇಲೀಸ್ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *