ತುಮಕೂರು: ಬಸವ ಸಂಸ್ಕøತಿ ಅಥವಾ ಶರಣ ಚಳವಳಿ ಎಂಬುದು ವೈದಿಕರ ವಿರುದ್ದ ಅವೈದಿಕರು,ವರ್ಣ ಭೇಧ,ವರ್ಗ ಭೇಧ, ಲಿಂಗಭೇಧವನ್ನು ದಿಕ್ಕರಿಸಿ ನಡೆಸಿದ ಸಂಘಟಿತ ಹೋರಾಟವಾಗಿದೆ.ಹಾಗಾಗಿಯೇ ಲೋಕಾಯತರನ್ನ,ಚಾರ್ವಕರನ್ನು ಕೊಂದ ವೈದಿಕರೇ ಬಸವಣ್ಣ ಮತ್ತು ಆತನ ಅನುಯಾಯಿಗಳನ್ನು ಕಲ್ಯಾಣ ಕ್ರಾಂತಿಯ ಹೆಸರಿನಲ್ಲಿ ನಡೆಸಿದ ನರಮೇಧ. ಬಸವಣ್ಣ ಹಾಗೂ ಅವರ ಅನುಯಾಯಿಗಳನ್ನು ಕೊಲ್ಲುವ ಜೊತೆಗೆ, ಶರಣ ಸಾಹಿತ್ಯವನ್ನು ಸುಟ್ಟರು. ಇಂದು ನಾವು ಓದುತ್ತಿರುವುದು ತಿರುಚಲ್ಪಟ್ಟ ಶರಣ ಸಾಹಿತ್ಯ.ನಮಗೆ ಲಭ್ಯವಿರುವುದು ಶೇ10ರಷ್ಟು ಶರಣ ಸಾಹಿತ್ಯ ಮಾತ್ರ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ರಂಜಾನ್ ದರ್ಗಾ ನುಡಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವತಿಯಿಂದ ಆಯೋಜಿಸಿದ್ದ ಸಾಂಸ್ಕøತಿಕ ನಾಯಕ ಬಸವಣ್ಣ:ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಡೀ ಪ್ರಪಂಚದ ಮೊಟ್ಟ ಮೊದಲ ಒಳ್ಳಗೊಳ್ಳುವ ಸಂಸ್ಕøತಿ ಎಂದರೆ ಅದು ಬಸವ ಸಂಸ್ಕøತಿ. ಹಾಗಾಗಿಯೇ ಬಸವಣ್ಣನನ್ನು ಸಾಂಸ್ಕøತಿಕ ನಾಯಕನೆಂದು ಕರೆಯಲಾಗುತ್ತದೆ ಎಂದರು.
ನಮ್ಮದೇ ಶ್ರೇಷ್ಠ ಎಂಬ ವಾದದ ಮೂಲಕ ಇತರೆಯವರನ್ನು ಹೊರ ಹಾಕುವ ಮನುವಾದದ ವಿರುದ್ದ ಅತ್ಯಂತ ಸಂಘಟಿತವಾಗಿ ನಡೆದ ಹೋರಾಟವೇ ಎಲ್ಲರನ್ನು ಒಳಗೊಳ್ಳುವ ಶರಣ ಚಳವಳಿ,ಅದು ಕಲ್ಯಾಣದ ಕ್ರಾಂತಿಯಲ್ಲ, ಪರಿವರ್ತನೆಯ ಚಳವಳಿ ಎಂದು ಹಿರಿಯ ಸಾಹಿತಿ ಮತ್ತು ಬಸವತತ್ವದ ಪ್ರತಿಪಾದಕರಾದ ರಂಜಾನ್ ದರ್ಗಾ ಹೇಳಿದರು.
ಬಸವ ಧರ್ಮ ಅಥವಾ ಶರಣ ಧರ್ಮದಲ್ಲಿ ಎಲ್ಲವೂ ಹೊಸತನದಿಂದ ಕೂಡಿತ್ತು.ಮಠಗಳಿಗೆ ಬದಲಾಗಿ ಮಹಾಮನೆ, ಗಣಚಾರಕೆಕ ಬದಲಾಗಿ ಲಿಂಗಾಚಾರ, ಎಲ್ಲರನ್ನು ಒಳಗೊಳ್ಳುವ ಸಂಕುಲ ಪ್ರಜ್ಞೆ, ವರ್ಗ ಪ್ರಜ್ಞೆ ಜಾರಿಯಲ್ಲಿತ್ತು.ಇಡೀ ಪ್ರಪಂಚದ ಮೊಟ್ಟ ಮೊದಲ ದುಡಿಯುವ ವರ್ಗದ ನಾಯಕ,ಸ್ತ್ರೀವಾದಿ ಎಂದರೆ ಅದು ಬಸವಣ್ಣ.ಮನುವಾದ ಧರ್ಮದ ಮೂಲ ಬ್ರಾಹ್ಮಣನೆಂದರೆ, ಬಸವ ಸಂಸ್ಕøತಿಕ ದಯೆಯೇ ಧರ್ಮದ ಮೂಲ ಎಂದರು.ಸಕಲ ಚರಾಚರ ವಸ್ತುಗಳಿಗೂ ಜೀವವಿದೆ ಎಂದು ಪ್ರತಿಪಾದಿಸಿದವರು ಬಸವಣ್ಣ, ಹಾಗಾಗಿ ಬಸವಣ್ಣ ಮಹಿಳೆಯರ, ಬಡವರ, ಶ್ರಮಿಕವರ್ಗದ ಸಾಂಸ್ಕøತಿಕ ನಾಯಕರಾಗಿದ್ದಾರೆ ಎಂದು ರಂಜಾನ್ ದರ್ಗಾ ತಿಳಿಸಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ,12ಶತಮಾನದ ಬಸವಣ್ಣನವರನ್ನು 21ನೇ ಶತಮಾನದ ಯುವಜನತೆಗೆ ಪರಿಚಯಿಸುತ್ತಿರುವುದು ಅವರು ಇಂದಿಗೂ ಪ್ರಸ್ತುತ ಎಂಬುದನ್ನು ತೋರಿಸುತ್ತದೆ.ಕರ್ನಾಟಕ ಇಡೀ ಪ್ರಪಂಚಕ್ಕೆ ಅನೇಕ ಮಾದರಿ ನಾಯಕರನ್ನು ಕೊಡುಗೆಯಾಗಿ ನೀಡಿದೆ.ಅವರಲ್ಲಿ ಬಸವಣ್ಣ ಯಾವುದೇ ಡಿಗ್ರಿ ಪಡೆಯದ ವರ್ಗ, ವರ್ಣ, ಲಿಂಗ ಸಮಾನತೆ, ಸಮ ಸಮಾಜದ ಕನಸು ಕಂಡ ನಾಯಕ. ಇದನ್ನು ಇಂದಿನ ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಇಂತಹವರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿಕೊಳ್ಳಬೇಕೆಂದರು.
ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಮಾತನಾಡಿ,ಬಸವಣ್ಣನನ್ನು ಸಾಂಸ್ಕøತಿಕ ನಾಯಕನೆಂದಾಕ್ಷಣ ಚಪ್ಪಾಳೆ ತಟ್ಟುವುದರಿಂದ ಪ್ರಯೋಜನವಿಲ್ಲ.ಬಸವಣ್ಣ ಪ್ರತಿಪಾದಿಸಿದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು,ನಾವೆಲ್ಲರೂ ಸಾಂಸ್ಕøತಿಕ ನಾಯಕರಾಗಬೇಕು.ಬಸವಣ್ಣನನ್ನು ಒಂದು ಧರ್ಮದ ಚೌಕಟ್ಟಿಗೆ ಒಳಪಡಿಸಿದ್ದು ದೊಡ್ಡ ಅನಾಹುತ.ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನ ರೀತಿ ನಾವೆಲ್ಲರೂ ಬಾಳಬೇಕಿದೆ.ಇಂತಹ ಕಾರ್ಯಕ್ರಮಗಳ ವಿವಿಗಳಲ್ಲಿ ನಡೆದರೇ ಬಸವಣ್ಣ ಯುವಜನರ ಮನಸ್ಸಿನಲ್ಲಿ ಬೇರೂರಲು ಸಾಧ್ಯ ಎಂದರು.
ಶರಣರು ಮತ್ತು ಸ್ತ್ರೀ ಸಮಾನತೆಯ ಮಾನವೀಯ ನೆಲೆಗಳು ಎಂಬ ವಿಚಾರವಾಗಿ ಮಾತನಾಡಿದ ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ,ಇಂದಿನ ಕಾಲ ಕಡು ಕಷ್ಟದ ಕಾಲ.ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಜನರ ನಡುವೆ ವಿಷ ಬೀಜ ಬಿತ್ತುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಒಳಗೊಳ್ಳುವ ಬಸವಣ್ಣನಂತಹ ಸಾಂಸ್ಕøತಿಕ ನಾಯಕನ ಅಗತ್ಯತೆ ಇದೆ.ರಾಜಕೀಯ ನಾಯಕರಿಂದಾಗಲಿ, ಸಾಮಾಜಿಕ ನಾಯಕರಿಂದಾಗಲಿ ಸಮಸ್ಯೆಗೆ ಪರಿಹಾರ ಕಷ್ಟ ಸಾಧ್ಯವಾಗಿದೆ.ಹೆಣ್ಣು ಮಕ್ಕಳ ಮಾತುಗಳಿಗೆ ಮೊದಲು ಕಿವಿಯಾಗಿದ್ದ ಶರಣ ಸಂಸ್ಕøತಿ.ಹೆಣ್ಣು ದೇವಿ, ಇಲ್ಲ ದೆವ್ವ ಎಂಬ ತಪ್ಪು ಕಲ್ಪನೆಗಳ ವಿರುದ್ದ ಮಹಿಳೆಯ ಹೋರಾಡಲು ಶಕ್ತಿ ತುಂಬಿದ್ದೇ ಶರಣ ಸಂಸ್ಕøತಿ.ಈ ವೇಳೆ ಶರಣೆಯರಿಂದ ನಡೆದಿದ್ದು ಒಂದು ಮಹತ್ವದ ಚಳವಳಿ.ಹೆಣ್ಣು ಮಾಯೆಯಲ್ಲ ಎಂಬ ಅಲ್ಲಮ ಪ್ರಭುವಿನ ವಚನ,ಸೂಳೆ ಸಂಕವ್ವನ ವಚನಗಳು,ಹೆಣ್ಣು ಒಂದು ಸ್ವಾಯತ್ತ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.
ವಿದ್ಯಾವಾಹಿನಿಯ ಪ್ರದೀಪಕುಮಾರ್,ವೀರಶೈವ ಲಿಂಗಾಯಿತ ಮಹಾಸಭಾದ ಡಾ.ಪರಮೇಶ್,ಬಾ.ಹ.ರಮಾಕುಮಾರಿ ಅವರುಗಳು ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಿದ್ದರು.ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಎಲ್.ಎನ್.ಮುಕುಂದರಾಜ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ,ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಕಂಟಲಗೆರೆ ಸಣ್ಣ ಹೊನ್ನಯ್ಯ,ಎಂ.ಹೆಚ್.ನಾಗರಾಜು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಘಟನಾ ಸಂಚಾಲಕಿ ಶ್ರೀಮತಿ ಸುಮಾ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.