ತುಮಕೂರು : ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯನ್ನು ಶನಿವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಗರಕ್ಕೆ ಬರಮಾಡಿಕೊಂಡರು.
ರಾಜ್ಯದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಭುವನಗಿರಿಯ ನಾಡದೇವತೆ ಶ್ರೀ ಭುವನೇಶ್ವರಿ ದೇವಿಯ ದೇವಾಲಯದಿಂದ ಹೊರಟು ರಾಜ್ಯದಾದ್ಯಂತ ಸಂಚರಿಸಿ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಭಿಮಾನ ಪೂರಕವಾಗಿ ಸ್ವಾಗತಿಸಲಾಯಿತು.
ಕನ್ನಡ ಜ್ಯೋತಿ ರಥದಲ್ಲಿದ್ದ ಭುವನೇಶ್ವರಿ ದೇವಿಗೆ ಪುಷ್ಪಮಾಲಿಕೆ ಅರ್ಪಿಸಿ ಆರತಿ ಬೆಳಗಿದ ನಂತರ ಮಾತನಾಡಿದ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರಕ್ಕೆ ಆಗಮಿಸಿರುವ ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ನವೆಂಬರ್ 18ರವರೆಗೆ ಸಂಚರಿಸಿ ಕನ್ನಡದ ನೆಲ, ಜಲ, ಸಂಸ್ಕøತಿಯ ಕಂಪನ್ನು ಪಸರಿಸಲಿದೆ. ರಥಯಾತ್ರೆಯು ಸಮ್ಮೇಳನದ ಉದ್ಘಾಟನೆ ದಿನದಂದು ಮಂಡ್ಯ ನಗರವನ್ನು ತಲುಪಲಿದ್ದು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಲಿ ಎಂದು ಹಾರೈಸಿದರು.
ವೀರಗಾಸೆ ಕುಣಿತದ ಮೂಲಕ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಟೌನ್ ಹಾಲ್ ವೃತ್ತದವರೆಗೆ ಸಾಗಿ ಗುಬ್ಬಿ ತಾಲೂಕಿಗೆ ತೆರಳಿ ಚೇಳೂರಿನಲ್ಲಿ ತಂಗಲಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್ ತಿಪ್ಪೇಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಶಬ್ಬೀರ್ ಅಹಮದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.