ಸ್ವಾತಂತ್ಯ್ರ ಬಂದು 77 ವರ್ಷವಾದರೂ ದಲಿತರಿಗೆ ಮನೆ,ನಿವೇಶನ, ಸ್ಮಶಾನ ಇಲ್ಲ- ಎಸ್,ಸಿ-ಎಸ್.ಟಿ.ಕುಂದು-ಕೊರತೆ ಸಭೆಯಲ್ಲಿ ಮೊಬೈಲ್ ನೋಡಿಕೊಂಡು ನಗುತ್ತಿದ್ದ ಅಧಿಕಾರಿಗಳು

ತುಮಕೂರು : ದೇಶಕ್ಕೆ ಸ್ವಾತಂತ್ಯ್ರ ಬಂದು 77 ವರ್ಷಗಳು ಕಳೆದರು ದಲಿತರಿಗೆ ಇನ್ನೂ ಮನೆ, ನಿವೇಶನ, ಸ್ಮಶಾನ, ಉಳಿಮೆ ಮಾಡಲು ಜಮೀನು ಇಲ್ಲದಿರುವುದು ಇಂದು ನಡೆದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಕುಂದು-ಕೊರತೆ ಸಭೆಯಲ್ಲಿ ಪ್ರಮುಖವಾಗಿ ಕಂಡು ಬಂದಿತು.

ತುಮಕೂರು ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ನಡೆದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಕುಂದು ಕೊರತೆ ಸಭೆಯಲ್ಲಿ ಬಹುತೇಕ ದಲಿತರಿಗೆ ಮೂಲಭೂತವಾಗಿ ದಕ್ಕಬೇಕಾದ ನಿವೇಶನ, ಮನೆ, ಸ್ಮಶಾನ ಇಲ್ಲದಿರುವ ಬಗ್ಗೆಯೇ ದೂರುಗಳು ಹೆಚ್ಚಿನದಾಗಿ ಕಂಡು ಬಂದವು. ಒಂದು ಕಡೆ ಮೇಲ್ವರ್ಗದವರ ದೌರ್ಜನ್ಯ ದಬ್ಬಾಳಿಕೆಯಿಂದ ಸರ್ಕಾರದ ಯೋಜನೆಗಳು ಈ ವರ್ಗಗಳಿಗೆ ಸಿಗದಂತೆ ಕಬಳಿಸುತ್ತಿದ್ದರೆ, ಮತ್ತೊಂದು ಕಡೆ ಈ ವರ್ಗಕ್ಕೆ ಸಂವಿಧಾನದಡಿಯಲ್ಲಿ ದಕ್ಕಬೇಕಾದ ಮೂಲಭೂತ ಸೌಲಭ್ಯ ಮತ್ತು ಹಕ್ಕುಗಳನ್ನು ನೀಡದೆ ನೆಪ ಮಾತ್ರಕ್ಕೆ ಕಣ್ಣೊರೆಸಲು ಕೆಲವರಿಗಷ್ಟೆ ಕೊಟ್ಟಂತೆ ಮಾಡಿ ಸಮಸ್ಯೆಗಳನ್ನು ಬಗೆ ಹರಿಸಲು ಅಧಿಕಾರಿ ವರ್ಗ ಮುಂದಾಗದಿರುವುದು ಕಂಡು ಬಂದಿತು.

ಜಿಲ್ಲೆಯಲ್ಲಿ ಬಗರ್‍ಹುಕುಂ ಜಮೀನು, ನಿವೇಶನಗಳನ್ನು ಮಂಜೂರು ಮಾಡುವಲ್ಲಿ ದಲಿತರಿಗೆ ನ್ಯಾಯ ಸಿಕ್ಕಿಲ್ಲದಿರುವುದು ಕಂಡು ಬಂದಿದಲ್ಲದೆ, ಅಧಿಕಾರಿ ವರ್ಗ ದಲಿತರ ಪರ ಕೆಲಸ ಮಾಡಿ ಅವರು ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ವಿಫಲವಾಗಿರುವುದು ಕಂಡು ಬಂದಿತು.

ದಲಿತರ ಜಮೀನುಗಳಿಗೆ ಬಂಡಿ ಜಾಡು ಸಹ ಇಲ್ಲದೆ ಇರುವುದು, ಜಮೀನುಗಳಿಗೆ ದಾರಿ ಬಿಡಿಸಿ ಕೊಡುವಲ್ಲಿಯೂ ಅಧಿಕಾರಿಗಳಿ ನಿರ್ಲಕ್ಷ ತೋರಿದ್ದು, ದಲಿತರು ನಿವೇಶನ ಮತ್ತು ಮನೆ ನಿರ್ಮಾಣಕ್ಕಾಗಿ ಅರ್ಜಿಗಳನ್ನು ನೀಡಿದ್ದರೂ ಹಲವಾರು ವರ್ಷವಾದರೂ ನಿವೇಶನ ನೀಡದಿರುವುದು ಕುಂದು-ಕೊರತೆ ಸಭೆಯಲ್ಲಿ ಕಂಡು ಬಂದಿತು.

ಸ್ವಾಂತಂತ್ಯ್ರ ಬಂದು 77 ವರ್ಷವಾದ ಮೇಲೂ ದಲಿತರು ನಿವೇಶನ, ಮನೆ, ಸ್ಮಶಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆಂದರೆ, ಅಂಬೇಡ್ಕರ್ ಅವರು ಬರೆದ ಸಂವಿಧಾನ ಯಾರಿಗೆ ಹಕ್ಕು ಕೊಟ್ಟಿತು ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯ ಬೇಕಾ? ಎಂಬುದು ಈಗಿರುವ ಇನ್ನೊಂದು ಪ್ರಶ್ನೆ.

ಅಧಿಕಾರ ವರ್ಗವಾಗಲಿ, ಸರ್ಕಾರವಾಗಲಿ ದಲಿತರ ಸವಲತ್ತುಗಳನ್ನು ಜಾರಿಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿರುವುದು ಮತ್ತು ಮೇಲ್ವರ್ಗದವರ ಮುಲಾಜಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರ! ಎಂಬುದು ಕಾಡುತ್ತದೆ. ಹಾಗಾದರೆ ದಲಿತರಿಗೆ ನ್ಯಾಯೋಚಿತ ಸೌಲಭ್ಯಗಳು ದೊರಕಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದ್ದಲ್ಲಿ, ಈ ನೆಲದ ಕಾನೂನಾದರೂ ಇವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕಿದೆ.

ಸಭೆಯಲ್ಲಿ ಬಹುತೇಕ ಅಧಿಕಾರಿ ವರ್ಗ ಮತ್ತು ನೌಕರರು ದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವುದು ಕಂಡು ಬರಲಿಲ್ಲ. ಸಭೆಯ ನಡಾವಳಿಗಳನ್ನೇ ಬರೆಯದೆ, ಸಮಸ್ಯೆಯ ಅರ್ಜಿಗಳಿಗೆ ಸಮರ್ಪಕ ಉತ್ತರದ ಪ್ರತಿಗಳನ್ನು ನೀಡದೆ ಬಂದಪುಟ್ಟ-ಹೋದಪುಟ್ಟ ಎಂಬಂತೆ ಅಧಿಕಾರಿ ವರ್ಗ ದಲಿತರ ಸಮಸ್ಯೆಗಳನ್ನು ಜೀವಂತ ಇರುವಂತೆಯೇ ನೋಡಿಕೊಳ್ಳುತ್ತಾ ಇದೆ ಎಂಬಂತೆ ಕಂಡು ಬಂದಿತು.

ಅಧಿಕಾರಿ ವರ್ಗಕ್ಕೆ ದಲಿತರ ಸಮಸ್ಯೆಗಳನ್ನು ಬಗೆ ಹರಿಸುವ, ಅವರಿಗೆ ಸೌಲಭ್ಯ ಒದಗಿಸುವ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿತ್ತು.

ಜಿಲ್ಲಾಧಿಕಾರಿಗಳು, ಸಿಇಓ, ಅಪರ ಜಿಲ್ಲಾಧಿಕಾರಿಗಳು ಕುಂದು ಕೊರತೆಯ ಸಭೆಯನ್ನು ಒಂದು ಹಂತದಲ್ಲಿ ಗಂಭೀರತೆಯಿಂದ ನಡೆಸುತ್ತಿದ್ದರೆ, ಜನರ ಮಧ್ಯೆ ಕುಳಿತ್ತಿದ್ದ ತಾಲ್ಲೂಕು ಅಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಮೊಬೈಲ್ ನೋಡುವುದು, ಸಮಸ್ಯೆಗಳನ್ನು ಹೇಳುತ್ತಿದ್ದ ದಲಿತ ಮುಖಂಡರನ್ನು ನೋಡಿ ನಗುತ್ತಿದದ್ದು ಕಂಡು ಬಂದಿತು.

ಇಂತಹ ಅಧಿಕಾರಿ ವರ್ಗ-ನೌಕರರಿಗೆ ದಲಿತರ ಸಮಸ್ಯೆ ಬಗೆ ಹರಿಸಲು ಸಾಧ್ಯವೇ? ಇವರಿಗೆ ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುವರು?

Leave a Reply

Your email address will not be published. Required fields are marked *