ತುಮಕೂರು : ಸ್ವಾತಂತ್ರ್ಯ ಬಂದು 77 ವರ್ಷವಾದರೂ ದೇಶದಲ್ಲಿ ಮಲ ಹೊರುವ ಪದ್ದತಿ ಇರುವುದು ಅಮಾನವೀಯ ಎಂದು ಸಾಹಿತಿಗಳು ಹಾಗೂ ಸಂಸ್ಕøತಿ ಚಿಂತಕರಾರ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿ, ಈ ಹಿನ್ನೆಲೆಯಲ್ಲಿ ಪ್ರಗತಿಪರರು ಆತ್ಮಾವಲೋಕನ ಮಾಡಿಕೊಂಡು ಐಕ್ಯತೆ ಸಾಧಿಸುವ ನಾಯಕತ್ವ ಅವಶ್ಯಕತೆ ಇದೆ ಎಂದು ಹೇಳಿದರು.
ಅವರಿಂದು ತುಮಕೂರಿನ ಕೇಂದ್ರ ಗ್ರಂಥಾಲಯದಲ್ಲಿ ವೆಂಕಟಾಚಲ.ಹೆಚ್.ವಿ. ಸಂಪಾದಿಸಿರುವ ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು ತಲೆಯ ಮೇಲೆ ಮಲಹೊರುವುದು ನಿಷೇಧದಲ್ಲಿದ್ದರೂ ಇಂದಿಗೂ ದೇಶದಲ್ಲಿ 1.86 ಕೋಟಿ ಜನರ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಿದ್ದಾರೆ. 8ಕೋಟಿ ಜನ ತಳ್ಳುವ ಗಾಡಿಯಲ್ಲಿ ಮಲವನ್ನು ಊರಿನಿಂದ ಹೊರ ಸಾಗಿಸುತಿದ್ದಾರೆ. ಇಂದಿಗೂ ಈ ಅಮಾನವೀಯ ಪದ್ದತಿ ಜಾರಿಯಲ್ಲಿದೆ. ಇದಕ್ಕೆ ನಿರಾಶೆ ಹೊಂದದೆ ಹೋರಾಟದ ಹೊಸದಾರಿಯನ್ನು ಚಳವಳಿಗಾರರು ಕಂಡುಕೊಳ್ಳಬೇಕಿದೆ.ಪ್ರಗತಿಪರರು ಇಂದು ಹತ್ತಾರು ಬಣಗಳಾಗಿ ಒಡೆದು ಹೋಗಿದ್ದಾರೆ.ಪ್ರತಿಗಾಮಿಗಳು ಒಂದಾಗುತ್ತಿರುವ ಈ ಕಾಲದಲ್ಲಿ, ಪ್ರಗತಿಪರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.
ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿದ್ದ ದಿನಗಳಿಂದಲೂ ನನಗೆ ರಂಗಸ್ವಾಮಿ ಬೆಲ್ಲದಮಡು ಪರಿಚಿತರು. ನಾನು ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದವರು. ಅವರ ಹೆಸರಿನ ಈ ಪುಸ್ತಕ ಅವರ ಬದುಕಿನ ಬಾವುಕ ರೂಪಕವಾಗಿದೆ.ಬಹುತೇಕ ಲೇಖಕರು ತಮ್ಮ ಹೃದಯದ ಮಾತುಗಳನ್ನಾಡಿದ್ದಾರೆ.ಎಲ್ಲಿಯೂ ಕೃತಕತೆ ಇಲ್ಲ.ಆದರ್ಶ ಹೋರಾಟಗಾರನ ಸಾರ್ಥಕ ಮಾದರಿಯಾಗಿದೆ.ರಂಗಸ್ವಾಮಿ ಬೆಲ್ಲದಮಡು ಅವರು ತಮ್ಮ ಬದುಕಿನುದ್ದಕ್ಕೂ ಸಿದ್ದಾಂತಗಳ ಜೊತೆಗೆ,ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡು ಬಂದವರು.ಓರ್ವ ಹೋರಾಟಗಾರನಿಗೆ ಪ್ರಾಮಾಣಿಕತೆ ಮತ್ತು ಬದ್ದತೆ ಅತಿ ಮುಖ್ಯ. ಆತ ಮಾತ್ರ ಜನನಾಯಕನಾಗಿ ಜನರ ನಡುವೆ ಉಳಿಯಲು ಸಾಧ್ಯ ಎಂಬುದಕ್ಕೆ ತೋರಿಸಿದವರು.ಸಂಸಾರ ಮತ್ತು ಸಮಾಜ ಎರಡನ್ನು ಸರಿದೂಗಿಸಿದವರು.ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ಸಂಚಾಲಕಿಯನ್ನು ನೇಮಿಸಿದ ಕೀರ್ತಿ ಅವರದ್ದು ಎಂದರು.
ರಂಗಸ್ವಾಮಿ ಬೆಲ್ಲದಮಡು ಅವರು ಸಮ ಸಮಾಜದ ಕನಸ್ಸನ್ನು ಕಂಡವರು, ಈ ಪುಸ್ತಕದ ಮೂಲಕ ಸಮ ಸಮಾಜ ಆಶಯ ಈಡೇರಲಿ ಎಂದು ಹೇಳಿದರು.