ತುಮಕೂರು : ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ಜಾತಿಗಣತಿ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅನುಷ್ಠಾನ ಮಾಡದೇ ಪದೆ-ಪದೇ ಮುಂದೂಡುತ್ತಿರುವುದನ್ನು ಅಂಬೇಡ್ಕರ್ ಲೋಹಿಯಾ ಕೇಂದ್ರ ತೀವ್ರವಾಗಿ ಖಂಡಿಸಿದೆ.
ಯಾವುದೇ ಸಮುದಾಯ ಗುಂಪುಗಳ ಅಭಿವೃದ್ಧಿ ಕುರಿತು ಕಾರ್ಯಕ್ರಮ ರೂಪಿಸಲು ಬೇಕಾದ ಕೋಟ್ಯಾಂತರ ರೂಪಾಯಿ ವ್ಯಯಿಸಿ ತಯಾರಿಸಿರುವ ಕಾಂತರಾಜು-ಜಯಪ್ರಕಾಶ ಹೆಗ್ಡೆಯವರ ವರದಿಯನ್ನು ಸಂಪುಟದ ಮುಂದೆ ಮಂಡಿಸಿ, ಚರ್ಚೆಗೊಳಪಡಿಸಿ ಅನುಷ್ಠಾನ ಮಾಡಬೇಕೆಂದು ಸರ್ಕಾರವನ್ನು ವಿನಂತಿ ಮಾಡಲಾಗಿದೆ.
ಯಾವ ಶಕ್ತಿಗಳು ಮಂಡಲ್ ವರದಿ, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ವರದಿಯನ್ನು ಅನುಷ್ಠಾನಗೊಳಿಸಲು ಬಿಡದೆ “ಕುರುಡರು ಆನೆ ಮುಟ್ಟಿದಂತೆ” ಮಾತನಾಡುತ್ತಿರುವವರನ್ನು ಸಾಮಾಜಿಕ ನ್ಯಾಯದ ವಿರೋಧಿಗಳೆಂದೇ ಪರಿಗಣಿಸಬೇಕಿದೆ. ಇವರುಗಳ ಇಬ್ಬಂಗಿತನ ಎಲ್ಲಾ ಶೋಷಿತರ ಅರಿವಿಗಿದೆ ಎಂಬುದನ್ನು ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳು ಮರೆಯಬಾರದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನೀಡಿರುವ ದಲಿತರ ಒಳ ಮೀಸಲಾತಿ ಮತ್ತು ಕಾಂತರಾಜು ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಈಡೇರಿಸಬೇಕಿದೆ. ಮೂಗಿಗೆ ತುಪ್ಪ ಸವರುವ ಪ್ರವೃತ್ತಿಯನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ತಕ್ಕಪಾಠವನ್ನು ಜನ ಸಮುದಾಯ ಕಲಿಸಲಿದೆ ಎನ್ನುವುದನ್ನು ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಸಂಚಾಲಕರಾದ ಡಾ.ವೈ.ಕೆ.ಬಾಲಕೃಷ್ಣಪ್ಪ, ವಕೀಲರಾದ ಹೆಚ್.ಮಾರುತಿಪ್ರಸಾದ್, ನವೀದ್ ಅಹಮದ್ ಖಾನ್ ಹಾಗೂ ಹೆಚ್.ಟಿ.ರವಿಕುಮಾರ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.