ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮದುವೆ ಮಂಟಪದಂತೆ ಸಿಂಗಾರಗೊಂಡ ಎಸ್‍ಎಸ್‍ಐಟಿ ಕಾಲೇಜ್ ಆವರಣ

ತುಮಕೂರು : ನಗರದಲ್ಲಿ ಜನವರಿ 18 ಮತ್ತು 19ರಂದು ನಡೆಯುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣ ಮದುವೆಯ ಮಂಟಪದಂತೆ ಸಿಂಗಾರಗೊಂಡಿದ್ದು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಿರುವ ಪತ್ರಕರ್ತರನ್ನು ಸ್ವಾಗತಿಸಲು ತಳಿರು-ತೋರಣಗಳಿಂದ ಅಲಂಕಾರ ಮಾಡಲಾಗಿದೆ.

image description

ತುಮಕೂರು ನಗರದಲ್ಲಿ ಮೊದಲ ಬಾರಿಗೆ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯುತ್ತಿದ್ದು, ಈ ಸಮ್ಮೇಳನವನ್ನು ಅದ್ದೂರಿ ಮತ್ತು ಯಶಸ್ವಿ ಸಮ್ಮೇಳನ ಮಾಡಲು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಗಲಿರುಳು ಟೊಂಕ ಕಟ್ಟಿ ಶ್ರಮಿಸಿದೆ.

ಮದುವೆ ಮಂಟಪದಂತೆ ಸಿಂಗಾರಗೊಂಡಿರುವ ವೇದಿಕೆ

ಜನವರಿ 17ರ ಸಂಜೆಯಿಂದಲೇ ಸಿದ್ಧಾರ್ಥ ಇಂಜಿನಿಯರ್ ಕಾಲೇಜಿನಲ್ಲಿ ಸಮ್ಮೇಳನಕ್ಕೆ ನೋಂದಣಿ ಕಾರ್ಯ ಆರಂಭವಾಗಲಿದ್ದು, ದೂರದ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ಊಟ, ವಸತಿಯನ್ನು ಅಚ್ಚುಕಟ್ಟಾಗಿ ಮಾಡಲು ಪತ್ರಕರ್ತರ ಸಂಘ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಈ ಸಮ್ಮೇಳನವು ತುಮಕೂರಿನ ಇತಿಹಾಸದಲ್ಲಿ ನೆನಪಾಗಿ ಉಳಿಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಹೆಗಲಿಗೆ ಹೆಗಲು ಕೊಟ್ಟು ಪತ್ರಕರ್ತರ ಸಂಘಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನ ನೆನಪಿನಲ್ಲಿ ಉಳಿಯುವಂತ ಸಮ್ಮೇಳನವಾಗಬೇಕೆಂದು ಗೃಹಸಚಿವರು ತಮ್ಮ ಸಿದ್ಧಾರ್ಥ ಸಂಸ್ಥೆಯ ಇಂಜಿನಿಯರ್ ಕಾಲೇಜು ಆವರಣದಲ್ಲೇ ಸಮ್ಮೇಳನ ನಡೆಸಲು ಅನುಮತಿ ಕೊಟ್ಟು, ಸಮ್ಮೇಳನಕ್ಕೆ ಬೇಕಾದ ನೆರವನ್ನು ಕೊಟ್ಟು ಹರಸಿ, ಹಾರೈಸಿರುವುದಲ್ಲದೆ, ಅವರೇ ಮುಂದೆ ನಿಂತು ಸಮ್ಮೇಳನವನ್ನು ಅರ್ಥಪೂರ್ಣಗೊಳಿಸಲು ಮುಂದಾಗಿದ್ದಾರೆ.

ಕಲ್ಪತರು ನಾಡೆಂದು ಹೆಸರು ಪಡೆದಿರುವ ತುಮಕೂರು ಜಿಲ್ಲೆ ಹಲವಾರು ಯಶಸ್ವಿ ಸಮ್ಮೇಳನಗಳನ್ನು ನೆರವೇರಿಸಿ ತನ್ನ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಿಕೊಳ್ಳಲಾಗಿದೆ, ತುಮಕೂರಿನಲ್ಲಿ ಎರಡು ಬಾರಿ ರಾಷ್ಟ್ರೀಯ ಪತ್ರಕರ್ತ ಸಮ್ಮೇಳನ ನಡೆದು ದೇಶದ ಮುಂಚೂಣಿ ಪತ್ರಕರ್ತರು ಮೆಚ್ಚುವಂತೆ ಸಮ್ಮೇಳನ ನೆರವೇರಿಸಿ ಕೀರ್ತಿಯನ್ನು ಪಡೆಯಲಾಗಿದೆ, ಯು.ಆರ್.ಅನಂತಮೂರ್ತಿಯವರು ಅಧ್ಯಕ್ಷರಾಗಿದ್ದ 69 ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಪ್ರತಿ ವರ್ಷವೂ ಸಿದ್ಧಗಂಗಾ ಮಠದಲ್ಲಿ ನಡೆಯುವ ವಸ್ತು ಪ್ರದರ್ಶನ ಮತ್ತು ಇತ್ತೀಚೆಗೆ ಡಾ.ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಮತ್ತು ಜನ್ಮಜಯಂತಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿಯುವಂತಹ ಸಮಾರಂಭಗಳು ನಡೆಯುತ್ತಿರುತ್ತವೆ.

ಇದೇ ರೀತಿ ಈ ಬಾರಿ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ, ಹೆಚ್.ಎಂ.ಟಿ ಗಡಿಯಾರದ ತವರು, ಕಲ್ಪತರುನಾಡು ಎಂದೆಲ್ಲಾ ಕರೆಸಿಕೊಳ್ಳುವ ಹೇಮಾವತಿ ಜೀವಜಲದ ಬೀಡಿನಲ್ಲಿ 2025ರ ಜನವರಿ18ರಂದು ಬೆಳಿಗ್ಗೆ 11ಗಂಟೆಗೆ 39 ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ದಿವ್ಯ ಸಾನಿಧ್ಯವನ್ನು ಸಿದ್ಧಗಂಗ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದು, ಗೃಹಸಚಿವರಾದ ಡಾ.ಜಿ,ಪರಮೇಶ್ವರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ವಹಿಸಲಿದ್ದಾರೆ. ಸಮ್ಮೇಳನದಲ್ಲಿ ನಾಲ್ಕು ವಿಚಾರ ಗೋಷ್ಠಿಗಳು, ಒಂದು ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಜನವರಿ 18ರ ಸಂಜೆ 6ಗಂಟೆಗೆ ಸಾಧಕರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಜನವರಿ 18ರ ಸಂಜೆ 7ಕ್ಕೆ ಡಾ.ಶಮಿತಾ ಮಲ್ನಾಡ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜನವರಿ 19ರಂದು ಬೆಳಿಗ್ಗೆ 9ಕ್ಕೆ ಪ್ರತಿನಿಧಿಗಳ ಸಮಾವೇಶ ನಡೆಯಲಿದ್ದು, ಬೆಳಿಗ್ಗೆ 10-30ಕ್ಕೆ ಮಾಧ್ಯಮ-ಓದುಗರು-ನೋಡುಗರು-ಕೇಳುಗರು ವಿಚಾರಗೋಷ್ಠಿ ನಡೆದರೆ, ಮಧ್ಯಾಹ್ನ 12ಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು, ಸಂಜೆ 4ಗಂಟೆಗೆ ಸ್ಥಳೀಯ ಪತ್ರಿಕೆಗಳು-ಜಾಹೀರಾತು, ವಿತರಕರು ವಿಚಾರಗೋಷ್ಠಿ ನಡೆದರೆ, ಸಂಜೆ 4.30ಕ್ಕೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ, ಗೃಹಸಚಿವ ಡಾ.ಜಿ.ಪರಮೇಶ್ವರ್ ಉಪಸ್ಥಿತತೆಯಲ್ಲಿ ಸಮಾರೋಪ ನುಡಿಯನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾಡಲಿದ್ದು, ಅಭಿನಂದನಾ ನುಡಿಗಳನ್ನು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆಡಲಿದ್ದು, ದಕ್ಸೂಚಿ ಮಾತುಗಳನ್ನು ಹಿರಿಯ ಪತ್ರಕರ್ತ ಹಾಗೂ ಮ್ಯಾಗ್ಗೆಸ್ಯೆ ಪ್ರಶಸ್ತಿ ಪುರಸ್ಕøತ ಪಿ.ಸಾಯಿನಾಥ್ ಆಡಲಿದ್ದಾರೆ.

ಸಮ್ಮೇಳನದಲ್ಲಿ ವಸ್ತುಪ್ರದರ್ಶನ ಮತ್ತು ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಆನವರಿ 18ರ ಬೆಳಿಗ್ಗೆ 8.30ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಟೌನ್‍ಹಾಲ್ ವೃತ್ತ ಸಿದ್ಧಾರ್ಥ ಕಾಲೇಜುತನಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದಲ್ಲಿ ವಿಶೇಷ ಅಡಿಗೆ ಆತಿಥ್ಯ :


ಸಮ್ಮೇಳನದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಂದ ಅತಿಥಿಗಳಿಗೆ, ಪತ್ರಕರ್ತರಿಗೆ ತುಮಕೂರಿನ ಸ್ವಾದಿಷ್ಠ ತಟ್ಟಿ ಇಡ್ಲಿ ಮತ್ತು ಅವರೆ ಕಾಳು ಉಸಲಿ ಹಾಗೂ ಹಿಚುಕಿದ ಅವರೆಕಾಳು ಸಾರು ಮತ್ತು ಪಲಾವ್ ಮತ್ತು ಸಿಹಿ ಪದಾರ್ಥಗಳನ್ನು ಬಡಿಸಲಾಗುವುದು. ಎರಡು ದಿನ ಸಮ್ಮೇಳನದ ಅವಧಿಯಲ್ಲಿ ಬೆಳಿಗ್ಗೆಯಿಂದ ಸಂಜೆಯತನಕ ಬಿಸಿ ಬಿಸಿ ಕಾಫಿ, ಟೀ ಮತ್ತು ಸಂಜೆ ಸ್ನಾಕ್ಸ್ ಇರಲಿದೆ.

ತೆಂಗು ಬೆಳೆಯುವುದರಿಂದ ತುಮಕೂರಿಗೆ ಕಲ್ಪತರು ನಾಡೆಂದು ಹೆಸರು ಬಂದಿದ್ದು, ವಿಶೇಷವಾಗಿ ಸಮ್ಮೇಳನದ ಉದ್ಘಾಟನೆಯ ದಿನ ಕಾಯಿ ಹೋಳಿಗೆಯನ್ನು ಊಟಕ್ಕೆ ಬಡಿಸಲಾಗುವುದು.

ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಈ ಎರಡು ದಿನ ಸಮ್ಮೇಳನಕ್ಕೆ ಬನ್ನಿ ಖುಷಿ ಪಡಿ, ಸಂತೋಷದಿಂದ ನಲಿಯಿರಿ ಸಮ್ಮೇಳನ ನಿಮ್ಮ ಮನಸ್ಸಿನಲ್ಲಿ ಸದಾ ನೆನಪಾಗಿರಲಿ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕಲ್ಪತರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಅಂತಿಮ ಅಂತದ ಸಿದ್ಧತೆಗಳು ಪೂರ್ಣಗೊಂಡಿದ್ದು ಶುಭಕೋರಿನ 39ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸುದ್ದಿ ಮನೆಯ ಎಲ್ಲಾ ಸ್ನೇಹಿತರಿಗೂ ಸ್ವಾಗತ ಕೋರಲಿದ್ದು ನಾಳೆ ನಡೆಯುವ ಸಮ್ಮೇಳನವನ್ನ ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *