ಸಾರಿಗೆ ಇಲಾಖೆ ನೌಕರರಿಗೆ ಆರ್ಥಿಕ ಮುಗ್ಗಟ್ಟಿನಿಂದ ಸವಲತ್ತು ನೀಡಲಾಗುತ್ತಿಲ್ಲ- ಕೆ.ಎಸ್.ಅರ್.ಟಿ.ಸಿ. ಅಧ್ಯಕ್ಷರು

ತುಮಕೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಅತ್ಯಂತ ಕಷ್ಟ ಜೀವಿಗಳು.ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸವಲತ್ತುಗಳನ್ನು ನೀಡಲು ಅರ್ಥಿಕ ಮುಗ್ಗಟ್ಟಿನಿಂದ ಸಾಧ್ಯವಾಗುತ್ತಿಲ್ಲ.ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದರೂ ಸಹ ರಾಜಕೀಯ ಪ್ರವೇಶದಿಂದ ನೌಕರರ ಹಿತ ಕಾಪಾಡುವುದು ಕಷ್ಟ ಸಾಧ್ಯವಾಗಿದೆ ಎಂದು ಕೆ.ಎಸ್.ಅರ್.ಟಿ.ಸಿ. ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ.. ಕನ್ನಡ ಕ್ರಿಯಾಸಮಿತಿ ಆಯೋಜಿಸಿದ್ದ ಕರುನಾಡು ಸಾರಿಗೆ ಸಂಭ್ರಮ-2025ಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಡಿಸೇಲ್,ಪರಿಕರಗಳ ಬೆಲೆ ಹೆಚ್ಚಳವಾಗಿದ್ದರೂ ರಾಜಕೀಯ ಕಾರಣಗಳಿಗೊಸ್ಕರ ಬಸ್ ದರ ಹೆಚ್ಚಳ ಮಾಡಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಸಂಪನ್ಮೂಲದ ಕೊರತೆಯಿಂದ ನೌಕರರಿಗೆ ಕಾಲ ಕಾಲಕ್ಕೆ ನೀಡಬೇಕಾದ ವೇತನ ಹೆಚ್ಚಳ, ತುಟ್ಟಿ ಭತ್ಯ ಇನ್ನಿತರ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸಾರಿಗೆ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಮುಂದೆ ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯಿದೆ ಎಂದರು.

ಕನ್ನಡ ಇಂದು ಸಮೃದ್ದ ಭಾಷೆಯಾಗಿದ್ದರೆ, ಅದಕ್ಕೆ ನಮ್ಮ ಸಂಸ್ಥೆಯ ನೌಕರರ ಕೊಡುಗೆ ಇದೆ. ಆಟೋ ಚಾಲಕರ ರೀತಿ, ಕೆ.ಎಸ್.ಅರ್.ಟಿಸಿ ನೌಕರರು ಸಹ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ನಮ್ಮ ನೌಕರರಲ್ಲಿಯೂ ಸಾಕಷ್ಟು ಕಲೆ,ಸಾಹಿತ್ಯ ಪ್ರತಿಭೆ ಇದೆ. ಅದನ್ನು ಪ್ರಚುರ ಪಡಿಸಲು ಕನ್ನಡ ಕ್ರಿಯಾ ಸಮಿತಿ ಮೂಲಕ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ.ಬಡವರು, ಶ್ರೀಮಂತರು ಎನ್ನದೇ ನೀವು ನೀಡುತ್ತಿರುವ ಸೇವೆ ಅನನ್ಯವಾದುದ್ದು, ನೀವು ಮಾಡುತ್ತಿರುವ ಸೇವೆಯಿಂದ ಪ್ರಶಸ್ತಿಗಳನ್ನು ಪಡೆಯುತಿದ್ದೇವೆ.ಆದರೆ ಅದಕ್ಕೆ ತಕ್ಕ ಪ್ರತಿಫಲ ನೌಕರ ವರ್ಗಕ್ಕೆ ಸಿಗಬೇಕು.ಅಗ ಮಾತ್ರ ಪ್ರಶಸ್ತಿಗೆ ಗೌರವ ಬರುತ್ತದೆ ಎಂದು ಎಸ್.ಆರ್.ಶ್ರೀನಿವಾಸ್ ನುಡಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಅದರಲ್ಲಿಯೂ ಡ್ರೈವರ್ ಕಂಡ್ಟೇರ್‍ಗಳ ಪಾತ್ರ ಮಹತ್ವದಿದೆ.ನೀವು ಒಂದು ರೀತಿ ರಾಜ್ಯ,ರಾಜ್ಯಗಳ ನಡುವೆ ರಾಯಭಾರಿಗಳಿದ್ದಂತೆ.ಜನರ ನಂಬಿಕೆಯನ್ನು ಉಳಿಸಿಕೊಂಡಿದ್ದೀರಿ.ಕೆ.ಎಸ್.ಅರ್.ಟಿ.ಸಿ ನೌಕರರಲ್ಲಿಯೂ ಪ್ರತಿಭೆಗೆ ಕೊರತೆಯಿಲ್ಲ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್,ಕನ್ನಡ ಯಶ್ ಇವೆರೆಲ್ಲರೂ ಸಾರಿಗೆ ನೌಕರರ ಕುಟುಂಬಕ್ಕೆ ಸೇರಿದವರು. ಕಸಾಪ ನೌಕರರು ಅತಿ ಹೆಚ್ಚು ದತ್ತಿ ನಿಧಿಯನ್ನು ನೀಡಿ, ಕಸಾಪದ ನೃಪತುಂಗ ಪ್ರಶಸ್ತಿಯನ್ನು ನೀಡಲು ಸಹಕಾರ ನೀಡಿದ್ದೀರಿ. ಇದಕ್ಕಾಗಿ ಎಲ್ಲಾ ಕೆ.ಎಸ್.ಅರ್.ಟಿಸಿ ನೌಕರರನ್ನು ಅಭಿನಂದಿಸುತ್ತೇನೆ.ಕನ್ನಡ ಭಾಷೆಗೆ ಜಗತ್ತಿನ ಎಲ್ಲಾ ಭಾಷೆಗಳನ್ನು ತನ್ನೊಳಗೆ ಅರಗಿಸಿ ಕೊಳ್ಳುವ ಶಕ್ತಿ ಇದೆ.ಹಾಗಾಗಿ ವಿವಿಧ ಭಾಷೆಗಳ ಅನೇಕ ಪದಗಳು ಕನ್ನಡ ಭಾಷೆಯ ಪದಗಳೇ ಎಂಬಂತೆ ಆಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿವತಿಯಿಂದ ಕರುನಾಡ ಸಾರಿಗೆ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಕೆ.ಎಸ್.ಆರ್.ಟಿ.ನಿ ನೌಕರರಲ್ಲಿ ಇರುವ ಪ್ರತಿಭೆ ಹೊರ ಹೊಮ್ಮಿಸಲು ಇರುವ ವೇದಿಕೆಯಾಗಿದೆ.ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ.ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳಲ್ಲಿಯೂ ಕನ್ನಡ ರಾಜೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಮಕ್ಕಳ ಪ್ರತಿಭೆಗಳಿಗೆ ಅವಕಾಶವಿದೆ.ಮನೆಯಲ್ಲಿ ಮಾತೃಭಾಷೆ ಯಾವುದೇ ಇರಲಿ, ಮಕ್ಕಳಿಗೆ ಕನ್ನಡ ಕಲಿಸಿ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಕೆ.ಎಸ್.ಆರ್.ಟ.ಸಿ ಕನ್ನಡ ಕ್ರಿಯಾಸಮಿತಿ ಪ್ರಾರಂಭವಾಗಿ 25 ವರ್ಷಗಳು ಸಂದಿವೆ. ಪ್ರತಿವರ್ಷ ಗಣರಾಜೋತ್ಸವ,ಕನ್ನಡ ರಾಜೋತ್ಸವ ಸಂದರ್ಭಗಳಲ್ಲಿ ಟ್ಯಾಬ್ಲೋ ಮೂಲಕ ಜನರ ಮನ ಸೆಳೆಯುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.ಈ ವರ್ಷ ನಾನು ನಿವೃತ್ತಿಯಾಗುತ್ತಿದ್ದು, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಮರ್ಥರು ವಹಿಸಿಕೊಂಡು ಮುನ್ನೆಡೆಸಬೇಕೆಂದರು.

ವೇದಿಕೆಯಲ್ಲಿ ಸಾಹಿತಿ ಬಾಪೂಜ, ನಿವೃತ್ತ ತಾಂತ್ರಿಕ ಅಭಿಯಂತರ ಗಜೇಂದ್ರಕುಮಾರ್, ಕುವೆಂಪು ಪ್ರಕಾಶ್, ಪ್ರಕಾಶ್ ನಾಡಿಗ್, ವಿ.ಡಿ.ಹನುಮಂತರಾಯಪ್ಪ, ಜಿ.ನಾಗೇಂದ್ರ, ಹೆಚ್.ಎಸ್.ರಾಜಶೇಖರ್, ಕೆ.ಬಸವರಾಜು, ಆಸೀಫವುಲ್ಲಾ ಷರಿಫ್, ತೇಜಸ್.ಜಿ.ಕೆ, ಹಂಸವೀಣಾ, ಶ್ರೀನಿವಾಸ್, ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ಕೆ.ಎಸ್.ಅರ್.ಟಿ.ಸಿ ನೌಕರರಿಂದ ಗಾಯನ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *