ರಾಗಿ ಖರೀದಿ ಕೇಂದ್ರಗಳಲ್ಲಿ ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ-ಜಿಲ್ಲಾಧಿಕಾರಿ

ತುಮಕೂರುಬ : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ನಗರದ ಎಪಿಎಂಸಿ ಯಾರ್ಡ್‍ನಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ರೈತರೊಂದಿಗೆ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ಜಿಲ್ಲೆಯಲ್ಲಿ ತೆರೆದಿರುವ 10 ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ರೈತರು ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಿಯೋಜಿತ ಅಧಿಕಾರಿಗಳನ್ನೇ ಸಂಪರ್ಕಿಸಬೇಕೆಂದು ಮನವಿ ಮಾಡಿದರು. 

ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗಾಗಿ ಮಾರ್ಚ್ 31ರವರೆಗೆ ಮಾತ್ರ ಅವಕಾಶವಿದ್ದು, ರೈತರು ತಡ ಮಾಡದೇ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಬೇಕೆಂದರು.

ಖರೀದಿ ಕೇಂದ್ರದಲ್ಲಿ   ರೈತರು ರಾಗಿ ಮಾರಾಟ ಮಾಡಲು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು.   ಫ್ರೂಟ್ಸ್ ಐಡಿಗೆ ಸೇರ್ಪಡೆಗೊಂಡಿರುವ ಸರ್ವೆ ನಂಬರ್‍ಗಳಲ್ಲಿ ಬೆಳೆದ ರಾಗಿಯನ್ನು   ಮಾತ್ರ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವುದು.  ಸರ್ವೆ ನಂಬರ್‍ಗಳಲ್ಲಿ ರಾಗಿ   ಬೆಳೆದಿರುವ ಬಗ್ಗೆ  ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವುದು ಕಡ್ಡಾಯವೆಂದು ತಿಳಿಸಿದರು. 

ರೈತರು ತಮ್ಮ ಹೆಸರಿನಲ್ಲಿರುವ ಜಮೀನಿನ ಎಲ್ಲ ಸರ್ವೆ ನಂಬರ್‍ಗಳನ್ನು ತಮ್ಮ ವ್ಯಾಪ್ತಿಯ ಕಂದಾಯ-ಕೃಷಿ-ತೋಟಗಾರಿಕೆ- ರೇಷ್ಮೆ-ಪಶುಸಂಗೋಪನೆ ಇಲಾಖೆಯನ್ನು ಸಂಪರ್ಕಿಸಿ ಫ್ರೂಟ್ಸ್ ಐಡಿಗೆ ಸೇರ್ಪಡೆ ಮಾಡಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ತೆರೆಯಲಾಗಿರುವ ಎಲ್ಲ 10 ಖರೀದಿ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿಗಳು ರಾಗಿಯನ್ನು ಮಧ್ಯವರ್ತಿಗಳಿಂದ ಖರೀದಿಸದೆ ರೈತರಿಂದ ಮಾತ್ರ ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಬೇಕು. ರೈತರ ಫ್ರೂಟ್ಸ್ ಐಡಿ ಬಗ್ಗೆ ತಾಂತ್ರಿಕ ಸಮಸ್ಯೆಗಳುಂಟಾದಲ್ಲಿ ಕೃಷಿ ಇಲಾಖೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 8884006306/ 8884006308ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳಲ್ಲಿ ಈವರೆಗೆ 749973 ಕ್ವಿಂಟಾಲ್ ರಾಗಿ ಖರೀದಿಗಾಗಿ 50617 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಶೀಘ್ರವಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಖರೀದಿಸಿದ ರಾಗಿಯನ್ನು ರಾಜ್ಯ ಉಗ್ರಾಣ ನಿಗಮಗಳಿಗೆ ಸಾಗಾಣಿಕೆ ಮಾಡಲು ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ: ರಮೇಶ್, ರೈತಬಂಧುಗಳು ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *